Gruha Lakshmi : ಅರ್ಜಿ ಸಲ್ಲಿಸಲು ಹಣ ಪಡೆದರೆ ಲೈಸೆನ್ಸ್, ಲಾಗಿನ್ ಐಡಿ ರದ್ದು: ಸೇವಾ ಕೇಂದ್ರಗಳಿಗೆ ಖಡಕ್ ಎಚ್ಚರಿಕೆ
ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಹಣ ಹಾಕುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಿದೆ. ಜುಲೈ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. 1.28 ಕೋಟಿ ಕುಟುಂಬಗಳು ಈ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ.
ಇನ್ನು ರಾಜ್ಯಾದ್ಯಂತ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಹಲವು ಕಡೆಗಳಲ್ಲಿ ಸರ್ವರ್ ಸಮಸ್ಯೆ ಕೂಡ ಉಂಟಾಗಿದೆ. ಅರ್ಜಿ ಸಲ್ಲಿಸಲು ಬಂದ ಮಹಿಳೆಯರು ಕಾದು ಕಾದು ಸುಸ್ತಾಗಿ ಹಲವು ಕಡೆಗಳಲ್ಲಿ ಸೇವಾ ಕೇಂದ್ರಗಳ ಸಿಬ್ಬಂದಿ ಮೇಲೆ ಜಗಳವಾಡಿದ್ದಾರೆ.

ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ವಿಧಿಸುತ್ತಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಸರ್ಕಾರವೇ ಅರ್ಜಿ ಸ್ವೀಕರಿಸಲು ಶುಲ್ಕವನ್ನು ನೀಡುತ್ತದೆ, ಫಲಾನುಭವಿಗಳು ಹಣ ನೀಡಬೇಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಮನವಿ ಮಾಡಿದ್ದಾರೆ.
ಆದರೂ ಹಲವು ಕಡೆಗಳಲ್ಲಿ ಹಣ ಸ್ವೀಕರಿಸುತ್ತಿರುವ ಬಗ್ಗೆ ವರದಿಯಾಗಿದೆ. ಅರ್ಜಿ ಸ್ವೀಕರಿಸಲು ಹಣ ಪಡೆಯುತ್ತಿದ್ದಾರೆ ಎಂದು ದೂರು ಬಂದ ಹಿನ್ನಲೆಯಲ್ಲಿ ಹಲವು ಕಡೆಗಳಲ್ಲಿ ಸಿಬ್ಬಂದಿಯ ಲಾಗಿನ್ ಐಡಿ ರದ್ದು ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸೇವಾ ಕೇಂದ್ರದ ಲೈಸೆನ್ಸ್ ಅನ್ನೇ ರದ್ದುಗೊಳಿಸಲಾಗಿದೆ.
ಲಾಗಿನ್ ಐಡಿ, ಲೈಸೆನ್ಸ್ ರದ್ದು
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಡೆದ ಆರೋಪದ ಮೇಳೆ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಗ್ರಾಮ ಒನ್ ಸಿಬ್ಬಂದಿಯ ಲಾಗಿನ್ ಐಡಿ ರದ್ದು ಮಾಡಿದೆ. ಸಾರ್ವಜನಿಕರು ದೂರು ಸಲ್ಲಿಸಿದ ಬಳಿಕ ಬಾಗಲಕೋಟೆ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ ಎಂದು ಟಿವಿ 9 ವರದಿ ಮಾಡಿದೆ. ಬಕವಿಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮ ಒನ್ ಕೇಂದ್ರದ ಸಿಬ್ಬಂದಿಯ ಲಾಗಿನ್ ಐಡಿಯನ್ನೂ ರದ್ದು ಮಾಡಲಾಗಿದೆ. ಅರ್ಜಿ ಹಾಕಿದ ನಂತರ ಹಣ ಕೇಳಿದ್ದು ಸಾರ್ವಕನಿಕರ ಕೋಪಕ್ಕೆ ಕಾರಣವಾಗಿತ್ತು, ಈ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಕ್ರಮ ತೆಗೆದುಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಡೆಯುತ್ತಿದ್ದಾರೆ ಎಂದು ಆರೋಪ ಬಂದ ನಂತರ ಕೊಡಗು ಜಿಲ್ಲೆಯ ಪೊನ್ನಂಪೇಟೆ ಗ್ರಾಮ ಒನ್ ಕೇಂದ್ರದ ಪರವಾನಗಿ ಅಮಾನತು ಮಾಡಲಾಗಿದೆ. ತಹಶೀಲ್ದಾರ್ ಯತೀಶ್ ಉಲ್ಲಾಳ್ ಈ ಆದೇಶ ನೀಡಿದ್ದಾರೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಸಹಾಯವಾಣಿ
ರಾಜ್ಯಾದ್ಯಂತ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲು ಅನುಮತಿ ನೀಡಲಾಗಿದೆ. ಸಮೀಪವಿರುವ ಸೇವಾ ಕೇಂದ್ರಗಳಿಗೆ ತೆರಳಿ ನೀವು ಅರ್ಜಿ ನೋಂದಣಿ ಮಾಡಿಕೊಳ್ಳಬಹುದು.
ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್, ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು), ಆಧಾರ್ ನಂಬರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬೇಕಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಅರ್ಜಿ ನೋಂದಣಿ ಪ್ರಕ್ರಿಯೆ ಸುಲಭವಾಗಿಸಲು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ.
ಯಾವುದೇ ಗೊಂದಲ, ಸಮಸ್ಯೆಗಳು ಇದ್ದರೂ ಮೊಬೈಲ್ ಸಂಖ್ಯೆ: 8147500500 ಎಸ್ಎಂಎಸ್ ಮಾಡುವುದರ ಮುಖಾಂತರ ಬಗೆ ಹರಿಸಿಕೊಳ್ಳಬಹುದು. 1902 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ.












Click it and Unblock the Notifications