ಬೀದಿ ನಾಯಿ ಕಡಿತ: ಗಾಯಕ್ಕೆ 5 ಸಾವಿರ, ಮೃತಪಟ್ಟರೆ 5 ಲಕ್ಷ ಪರಿಹಾರ
ಬೆಂಗಳೂರು, ನವೆಂಬರ್ 16: ಕರ್ನಾಟಕದಲ್ಲಿ ಇನ್ನು ಮುಂದೆ ಎಲ್ಲೇ ಆದರೂ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡರೆ 5 ಸಾವಿರ ಹಾಗೂ ಮೃತಪಟ್ಟರೆ 5 ಲಕ್ಷ ರೂ. ಪರಿಹಾರ ಸಿಗಲಿದೆ. ಈ ಕುರಿತು ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆಯಾಗಿದ್ದು. ಅದು ಸದ್ಯದಲ್ಲೇ ಅಂತಿಮಗೊಳ್ಳಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಪ್ರಾಣಿಗಳ ಜನ ನಿಯಂತ್ರಣ ಅಧಿನಿಯಮ ಜಾರಿಕೋರಿ ವಕೀಲ ಎಲ್. ರಮೇಶ್ ನಾಯ್ಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಸದ್ಯದಲ್ಲೇ ಪರಿಹಾರ ನಿಗದಿ ಅಂತಿಮ: ಸರ್ಕಾರಿ ವಕೀಲರು, ರಾಜ್ಯ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ 2023ರ ಅ.6ರಂದು ಸಭೆ ನಡೆಸಲಾಯಿತು. ನಾಯಿ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ 5 ಸಾವಿರ ಹಾಗೂ ಜೀವ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲು ಸಭೆಯಲ್ಲಿ ಚರ್ಚಿಸಲಾಗಿದೆ. ಎರಡನೇ ಸಭೆ ನಡೆಸಿ ಸದ್ಯದಲ್ಲೇ ಪರಿಹಾರ ನಿಗದಿ ಅಂತಿಮಗೊಳಿಸಲಾಗುವುದು. ಅದಕ್ಕೆ ಸ್ವಲ್ಪ ಕಾವಲಾವಕಾಶ ನೀಡಬೇಕು ಎಂದು ಕೋರಿ ಪ್ರಮಾಣ ಪತ್ರ ಸಲ್ಲಿಸಿದರು.
ಕೋರಿಕೆ ಮಾನ್ಯ ಮಾಡಿದ ನ್ಯಾಯಪೀಠ, ನಾಯಿ ಸೇರಿದಂತೆ ಬೀದಿ ಪ್ರಾಣಿಗಳಿಗೆ ಆಹಾರ ನೀಡುವ ಮತ್ತು ಮಾನವ ಜೊತೆಗಿನ ಅವುಗಳ ಸಂಘರ್ಷ ತಪ್ಪಿಸಲು ರೂಪಿಸಲಾಗಿರುವ ಮಾರ್ಗಸೂಚಿಗಳಿಗೆ ಸರ್ಕಾರ ವ್ಯಾಪಕ ಪ್ರಚಾರ ನೀಡಬೇಕು. ಇನ್ನೂ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮುಂದಿನ ನಾಲ್ಕು ವಾರಗಳಲ್ಲಿ ಎರಡನೇ ಸಭೆ ನಡೆಸಬೇಕು. ಸಭೆಯಲ್ಲಿ ಚರ್ಚಿಸಿ ಕೈಗೊಂಡ ಕ್ರಮಗಳ ಕುರಿತು 6 ವಾರದಲ್ಲಿ ಮಾಹಿತಿ ಒದಗಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಅರಿವು ಮೂಡಿಸಲು ಸೂಚನೆ: ಇದೇ ವೇಳೆ ನ್ಯಾಯಾಲಯ, ಬೀದಿ ಪ್ರಾಣಿಗಳ ಆಹಾರ ಪೂರೈಕೆಗೆ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಆದರೆ, ಅವುಗಳ ಕುರಿತು ಸಾರ್ವಜನಿರಿಕರಿಗೆ ಅರಿವು ಇಲ್ಲವಾಗಿದೆ. ಮಾರ್ಗಸೂಚಿಗಳ ಬಗ್ಗೆ ಸಾರ್ವಜನಿಕರು ಹಾಗೂ ನಿವಾಸಿಗಳಿಗೆ ಅರಿವು ಮೂಡಿಸದೆ ಹೋದರೆ, ಅವುಗಳು ಪರಿಣಾಮಕಾರಿಯಾಗಿ ಜಾರಿ ಮಾಡಲು ಸಾಧ್ಯವಿಲ್ಲ. ಮಾರ್ಗಸೂಚಿಗಳನ್ನು ಜಾರಿಯಾಗಬೇಕಾದರೆ, ಅವುಗಳ ಬಗ್ಗೆ ರಾಜ್ಯ ಸರ್ಕಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಎಂದು ಸೂಚಿಸಿದೆ.
ಅಲ್ಲದೆ, ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಮತ್ತು ನೋಂದಾಯಿತ ಸಹಕಾರ ಸಂಘಗಳಲ್ಲಿ ಮಾಹಿತಿ ಇಲಾಖೆಯಿಂದ ಮಾರ್ಗಸೂಚಿಗಳ ಕುರಿತು ಅರಿವು ಮೂಡಿಸುವ ಕರಪತ್ರಗಳ ಹಂಚುವ ವಿಧಾನಗಳನ್ನು ಸರ್ಕಾರ ಅನುಸರಿಸಬೇಕು.
ಮಾರ್ಗಸೂಚಿಗಳ ಕುರಿತ ಮಾಹಿತಿಯನ್ನು ಒಳಗೊಂಡ ಕಿರುಚಿತ್ರಗಳನ್ನು ಪ್ರಸಾರ ಮಾಡುವಂತೆ ಪ್ರಾದೇಶಿಕ ಟಿವಿ ಮಾಧ್ಯಮ, ಚಿತ್ರ ಮಂದಿರಗಳ ಮಾಲೀಕರಿಗೆ ಸರ್ಕಾರ ಮನವಿ ಮಾಡಬೇಕು. ಗ್ರಾಮೀಣ ಅಥವಾ ಸ್ಥಳೀಯ ಮಟ್ಟದಲ್ಲಿ ತಮಟೆ ಬಾರಿಸುವಂತಹ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಪಂಚಾಯತಿ, ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಸೂಚಿಸಬೇಕು. ಈ ಸಲಹೆಗಳಲ್ಲದೇ ಇನ್ನಿತರ ವಿಧಾನಗಳ ಮೂಲಕ ಸರ್ಕಾರ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ.












Click it and Unblock the Notifications