ಮತ್ತೆ ಸಂಕಷ್ಟದಲ್ಲಿ ಪ್ರೊ. ಕಲಬುರ್ಗಿ; ಈಶ್ವರಪ್ಪ ತರಾಟೆಗೆ
ಬೆಂಗಳೂರು, ಜೂನ್ 23: ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಇತ್ತೀಚೆಗೆ ವಿವಾದ ಸೃಷ್ಟಿಸಿದ್ದ ನಾಡಿನ ಹಿರಿಯ ಸಂಶೋಧಕರಾದ ಪ್ರೊಫೆಸರ್ ಮಲ್ಲೇಶಪ್ಪ ಎಂ ಕಲುಬುರ್ಗಿ ಅವರ ಮನೆಯ ಮೇಲೆ ಕಿಡಿಗೇಡಿಗಳು ಭಾನುವಾರ ರಾತ್ರಿ ಕಲ್ಲು ಮತ್ತು ಬಾಟಲಿಗಳನ್ನು ಎಸೆದಿದ್ದಾರೆ.
ಈ ಮಧ್ಯೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯುಆರ್ ಅನಂತಮೂರ್ತಿ ಮತ್ತು ಕಲುಬುರ್ಗಿಯವರು ಕ್ರೈಸ್ತರು ಅಥವಾ ಮುಸ್ಲಿಂ ಧರ್ಮದವರ ನಂಬಿಕೆಗಳ ಮೇಲೆ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿದ್ದರೆ ಅವರನ್ನು ಜೀವಂತ ಸುಟ್ಟುಬಿಡುತ್ತಿದ್ದರು. ಹಿಂದೂಗಳ ನೆಮ್ಮದಿ ಕದಡುವ ಪ್ರಯತ್ನ ಮಾಡಬೇಡಿ. ಇದರ ಪರಿಣಾಮ ಗಂಭೀರವಾದೀತು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗ ಎಚ್ಚರಿಸಿದ್ದಾರೆ.

ಧಾರವಾಡ ವರದಿ: ಧಾರವಾಡದ ಕಲ್ಯಾಣನಗರದಲ್ಲಿ 9ನೇ ಕ್ರಾಸಿನಲ್ಲಿರುವ ಕಲಬುರ್ಗಿ ಅವರ ಮನೆಯೆದುರು ರಾತ್ರಿ 10 ಗಂಟೆಯ ವೇಳೆ ಕುಡಿದ ಅಮಲಿನಲ್ಲಿದ್ದ ಗುಂಪೊಂದು 2 ಬೈಕುಗಳಲ್ಲಿ ಬಂದು ಈ ಕುಕೃತ್ಯವೆಸಗಿದೆ. ಅಶ್ಲೀಲ ಪದಗಳಿಂದ ನಿಂದಿಸಿ, ಕಲ್ಲುಗಳು ಮತ್ತು ನಾಲ್ಕಾರು ಖಾಲಿ ಬಿಯರ್ ಬಾಟಲಿಗಳನ್ನು ಮನೆಯ ಮೇಲೆ ಎಸೆದು ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮನೆಯಲ್ಲಿ ಕಲಬುರ್ಗಿ ಅವರ ಪತ್ನಿ ಹಾಗೂ ಮಗಳು ಇದ್ದರು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ವಿದ್ಯಾಗಿರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಮನೆಯ ಮುಂದೆ ಭದ್ರತೆಗೆ ನಿಂತಿದ್ದಾರೆ. ಕೆಲ ದಿನಗಳ ಹಿಂದೆ ತಮಗೆ ರಕ್ಷಣೆ ಬೇಡವೆಂದು ಇತ್ತೀಚೆಗೆ ಪ್ರೊ. ಕಲಬುರ್ಗಿ ಅವರೇ ಹೇಳಿದ್ದರಿಂದ ಅವರ ಮನೆಗೆ ಒದಗಿಸಲಾಗಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆಯಲಾಗಿತ್ತು.
ಶಿವಮೊಗ್ಗ ವರದಿ: ದೇವರ ಕಲ್ಲಿನ ಮೇಲೆ ಮೂತ್ರ ಮಾಡುವುದರಲ್ಲಿ ಏನು ತಪ್ಪಿದೆ ಎಂಬರ್ಥದಲ್ಲಿ ಮಾತನಾಡಿರುವ ಡಾ. ಅನಂತಮೂರ್ತಿ ಮತ್ತು ಕಲ್ಬುರ್ಗಿ ಮನುಷ್ಯರೋ, ದನಗಳೋ!? ಎಂಬುದು ನನಗಂತೂ ಅರ್ಥವಾಗುತ್ತಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಹಿರಿಯ ಸಾಹಿತಿಗಳ ಕುರಿತು ಕಿಡಿಕಾರಿದ್ದಾರೆ.
ಭಾನುವಾರ ಇಲ್ಲಿನ ಪಂಚಾಚಾರ್ಯ ಐಟಿಐ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಧರ್ಮದಲ್ಲಿ ನಂಬಿಕೆಗೆ ಹೆಚ್ಚಿನ ಮಹತ್ವ ಇದೆ. ಕೆಲವರು ಜನರ ನಂಬಿಕೆಗಳ ಕುರಿತು ಹಗುರವಾಗಿ ಮಾತನಾಡಿದರೆ ಟಿವಿ, ಪತ್ರಿಕೆಯಲ್ಲಿ ಪ್ರಚಾರ ಸಿಗುತ್ತದೆ ಎಂದುಕೊಂಡಿದ್ದಾರೆ ಎಂದು ಕೆಎಸ್ ಈಶ್ವರಪ್ಪ ಕಿಡಿಕಾರಿದರು.


Click it and Unblock the Notifications
