ಮಾತಿನ ಮೂಲಕ ಮತ್ತೆ ಸುದ್ದಿಯಾದ ಸಚಿವ ಆರಗ ಜ್ಞಾನೇಂದ್ರ, ಸ್ಪಷ್ಟನೆ
ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತೆ ಸುದ್ದಿಯಲ್ಲಿದ್ದಾರೆ. ತುಳುನಾಡಿನ ಆರಾಧ್ಯ ದೈವವಾದ ಗುಳಿಗ ದೈವದ ನನಗೆ ಅಪಾರ ಭಕ್ತಿ, ಮೆಚ್ಚುಗೆ ಇದೆ ಎಂದು ಅವರ ಸ್ಪಷ್ಪನೆ ನೀಡಿದ್ದಾರೆ.
ಬೆಂಗಳೂರು, ಮಾರ್ಚ್ 16; ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತೆ ಮಾಡಿನ ಮೂಲಕವೇ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ಟೀಕಿಸುವ ಭರದಲ್ಲಿ ಅವರು ತುಳುನಾಡಿನ ಗುಳಿಗ ದೈವದ ಬಗ್ಗೆ ಆಡಿದ್ದಾರೆ ಎನ್ನಲಾದ ಮಾತಿನ ವಿಡಿಯೋ ವೈರಲ್ ಆಗಿದೆ. ಸಚಿವರು ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ.
ತುಳುನಾಡಿನ ಗುಳಿಗ ದೈವದ ಬಗ್ಗೆ ಆರಗ ಜ್ಞಾನೇಂದ್ರ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ದಕ್ಷಿಣ ಕನ್ನಡದ ಕಾಂಗ್ರೆಸ್ ಮುಖಂಡ ಮಿಥುನ್ ರೈ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕರಾವಳಿ ಭಾಗದ ಹಲವು ಜನರು ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಆರಗ ಜ್ಞಾನೇಂದ್ರ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. "ತುಳುನಾಡಿನಲ್ಲಿ ಶ್ರದ್ಧಾಭಕ್ತಿಯಿಂದ ಆರಾಧಿಸುವ ಗುಳಿಗ ದೈವವನ್ನು ಆಧರಿಸಿ, ರಚಿಸಿರುವ ಪೌರಾಣಿಕ ನಾಟಕದ ಬಗ್ಗೆ ನನಗೆ ಅಪಾರ ಭಕ್ತಿ, ಮೆಚ್ಚುಗೆ ಇದೆ. ದೈವಗಳ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿದ್ದೇನೆ. ರಂಗಭೂಮಿಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿ ಪ್ರದರ್ಶನ ನೀಡುತ್ತಿರುವ ಕಲಾವಿದರು ಹಾಗೂ ವಿಶೇಷವಾಗಿ ನಿರ್ದೇಶಕ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಸೃಜನಶೀಲತೆ ಬಗ್ಗೆ ಅಭಿಮಾನ ಇದೆ" ಎಂದು ಹೇಳಿದ್ದಾರೆ.
"ಆದರೆ, ಜನರ ವಿಶ್ವಾಸ ಕಳೆದುಕೊಂಡ ತೀರ್ಥಹಳ್ಳಿಯ ಕಾಂಗ್ರೆಸ್ ನಾಯಕರು, ರಾಜಕೀಯ ದುರುದ್ದೇಶದಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹತಾಶ ಪ್ರಯತ್ನ ಮಾಡಿರುವುದನ್ನು ಪ್ರಸ್ತಾಪಿಸಿದ್ದೇನೆಯೇ ಹೊರತು, ನಾಟಕದ ಬಗ್ಗೆ ಅಥವಾ ದೈವದ ವಿರುದ್ಧ ಮಾತನಾಡಿಲ್ಲ. ನಾನಾಡಿದ ಮಾತುಗಳಿಗೆ ಅಪಾರ್ಥ ಕಲ್ಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿರುವ ಕುಹಕಿಗಳ ಉದ್ದೇಶ ಈಡೇರುವುದಿಲ್ಲ" ಎಂದು ಪೋಸ್ಟ್ ಹಾಕಿದ್ದಾರೆ.

ಸಚಿವರ ಹೇಳಿಕೆ ಏನು?; ತೀರ್ಥಹಳ್ಳಿ ಪಟ್ಟಣದ ಸಮೀಪದ ಬಾಳೆಬೈಲಿನಲ್ಲಿ ಬುಧವಾರ ಜಿಲ್ಲಾ ಮಟ್ಟದ ರೈತ ಸಮಾವೇಶ, ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಇತ್ತು. ಇದರ ಉದ್ಘಾಟನಾ ಭಾಷಣ ಮಾಡಿದ್ದ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ, "ಇಲ್ಲಿ ನಾನು ಎಂತದ್ದೋ ನೀಡಿದೆ ಗುಳಿಗೆ ಗುಳಿಗೆ ಅಂತ ಪೋಸ್ಟ್ ಹಾಕಲಾಗಿದೆ. ಬಹಳ ಅಪಾಯ ಅವರು ಯಾವ ಗುಳಿಗೆ ಕೊಡುತ್ತಾರೆ ಎಂದು ಗೊತ್ತಿಲ್ಲ. ಜಾಪಳ ಮಾತ್ರೆ ಕೊಟ್ಟರೂ ಕೊಡಬಹುದು. ಹೇಳಲು ಸಾಧ್ಯವಿಲ್ಲ. ಏಕೆಂದರೆ ಇವರು ಹೊಸ ನಾಟಕವನ್ನು ಮಾಡಲು ಆರಂಭಿಸಿದ್ದಾರೆ" ಎಂದು ಹೇಳಿದ್ದರು.
ಗೃಹ ಸಚಿವರ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕರಾವಳಿ ಭಾಗದ ಅನೇಕರು ಈ ವಿಡಿಯೋ ಹಂಚಿಕೊಂಡಿದ್ದು, ಗುಳಿಗ ತೂವೊನಡ್ (ಗುಳಿಗ ನೋಡಿಕೊಳ್ಳಲಿ) ಎಂದು ಬರೆದುಕೊಂಡಿದ್ದಾರೆ. ತೀರ್ಥಹಳ್ಳಿ ಉಡುಪಿ, ಮಂಗಳೂರು ಸಮೀಪದಲ್ಲಿರುವ ಪ್ರದೇಶ. ಆ ಭಾಗದ ಹಲವು ಜನರು ತೀರ್ಥಹಳ್ಳಿಯಲ್ಲಿದ್ದಾರೆ. ತೀರ್ಥಹಳ್ಳಿ ಭಾಗದ ಅನೇಕು ಅಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಬಾಂಧವ್ಯ ಇರುವಾಗಲೇ ಶಾಸಕರ ಈ ಮಾತು ಚರ್ಚೆಗೆ ಕಾರಣವಾಗಿದೆ. ಈ ವಿವಾದದ ನಡುವೆಯೇ ತ್ರಿಯಂಬಕಪುರ ಪಂಚಾಯತ್, ಹಿತ್ತಲಸರದಲ್ಲಿ ಬುಧವಾರ ರಾತ್ರಿ ನಡೆದ ಸಿರಿ ಸಿಂಗಾರ ಕೋಲ ಕಾರ್ಯಕ್ರಮದಲ್ಲಿ ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು.
ಫೇಸ್‌ಬುಕ್‌ನಲ್ಲಿ, 'ತುಳುನಾಡಿನ ಹಲವಾರು ಕ್ಷೇತ್ರಗಳಲ್ಲಿ ಕ್ಷೇತ್ರಪಾಲನಾಗಿ ಕಾರ್ಣಿಕ ದೈವವಾಗಿರುವ ಹಿಂದೂಗಳು ನಂಬಿ ಆರಾಧಿಸುವ ಉಗ್ರ ಸ್ವರೂಪಿ ಗುಳಿಗ ದೈವವನ್ನು ತನ್ನ ರಾಜಕೀಯ ತೆವಲಿಗೆ ಅಪಹಾಸ್ಯ ಮಾಡಿದ ಗೃಹ ಸಚಿವರ ಈ ವರ್ತನೆಗೆ ಮುಂದಿನ ಚುನಾವಣೆಯಲ್ಲಿ ದೇವರು ದೈವಗಳು ಸರಿಯಾದ ಪಾಠ ಕಲಿಸುವುದಂತೂ ನಿಜ. ಹಿಂದುತ್ವದ ಹೆಸರಿನಲ್ಲಿ ಅಧಿಕಾರದ ಅಮಲಿನಲ್ಲಿರುವ ಬಿಜೆಪಿಗರು ಇದ್ಕಕೆ ಏನು ಉತ್ತರ ಕೊಡುವಿರಿ ಎಂದು ತೀರ್ಥಹಳ್ಳಿಯ ಮತ್ತು ತುಳುನಾಡಿನ ಸಮಸ್ತ ಜನರು ಕಾಯುತ್ತಿದ್ದಾರೆ' ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ.












Click it and Unblock the Notifications