BSNL to Jio: ಬಿಎಸ್‌ಎನ್‌ಎಲ್‌ನಿಂದ ಜಿಯೋಗೆ 38,000 ಸಿಮ್ ಪೋರ್ಟ್; ರಾಜ್ಯ ಪೊಲೀಸರ ನಿರ್ಧಾರಕ್ಕೆ ಆಕ್ರೋಶ
ಸಾರ್ವಜನಿಕ ವಲಯದ ಉದ್ಯಮವನ್ನು (ಪಿಎಸ್‌ಯು) ಮುಚ್ಚಲು ಮತ್ತು ಖಾಸಗಿ ವಲಯವನ್ನು ಉತ್ತೇಜಿಸಲು ಸರ್ಕಾರದ ಉದ್ದೇಶಪೂರ್ವಕ ನಿರಾಸಕ್ತಿಗೆ ಬಿಎಸ್‌ಎನ್‌ಎಲ್ ಬಲಿಪಶುವಾಗಿದೆ
ಬೆಂಗಳೂರು, ಫೆಬ್ರವರಿ. 22: ರಾಜ್ಯ ಪೊಲೀಸರು ತಮ್ಮ ಅಧಿಕೃತ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಅನ್ನು ರಿಲಯನ್ಸ್ ಜಿಯೋಗೆ ಬದಲಿಸಲು ನಿರ್ಧರಿಸಿದ್ದು, ಈ ನಿರ್ಧಾರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಬಿಎಸ್‌ಎನ್‌ಎಲ್ ಉದ್ಯೋಗಿಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಪೊಲೀಸರು ತಮ್ಮ ಎಲ್ಲಾ 38,000 ಅಧಿಕೃತ ಮೊಬೈಲ್ ಫೋನ್ ಸಿಮ್ ಕಾರ್ಡ್‌ಗಳನ್ನು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ನೆಟ್‌ವರ್ಕ್‌ನಿಂದ ರಿಲಯನ್ಸ್ ಜಿಯೋಗೆ ಪೋರ್ಟ್ ಮಾಡಲು ನಿರ್ಧರಿಸಿದ್ದಾರೆ. ಬಿಎಸ್‌ಎನ್‌ಎಲ್ ನಿಂದ ರಿಲಯನ್ಸ್ ಜಿಯೋಗೆ ಸಿಮ್ ಬದಲಾಯಿಸಲು ಸರ್ಕಾರ ಅನುಮೋದನೆ ನೀಡಿದೆ. ಒಟ್ಟು 38,347 ಸಿಮ್ ಕಾರ್ಡ್‌ಗಳು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋಗೆ ಪೋರ್ಟ್ ಆಗಲಿವೆ. ಈ ಬಗ್ಗೆ ಸೋಮವಾರದಂದು ಎಲ್ಲಾ ಘಟಕಗಳ ಮುಖ್ಯಸ್ಥರಿಗೆ ಸುತ್ತೋಲೆ ಕಳುಹಿಸಲಾಗಿದೆ.

"ಈ 38,000 ಸಿಮ್‌ಕಾರ್ಡ್ ಬಳಕೆದಾರರಲ್ಲಿ ಹೆಚ್ಚಿನವು ದೂರದ ಗ್ರಾಮೀಣ ಪ್ರದೇಶಗಳಲ್ಲಿವೆ. ಅಲ್ಲಿ ಅಧಿಕಾರಿಗಳು ಉತ್ತಮ ನೆಟ್‌ವರ್ಕ್ ಸಿಗುತ್ತಿಲ್ಲ ಎಂಬ ಬಗ್ಗೆ ದೂರಿದ್ದಾರೆ. ಪೊಲೀಸರಂತಹ ತುರ್ತು ಸೇವೆಗಾಗಿ ಲಭ್ಯವಿರುವವರಿಗೆ ನೆಟ್‌ವರ್ಕ್‌ನ ದಕ್ಷತೆಯನ್ನು ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಪ್ರಸ್ತುತ ದಿನಗಳಲ್ಲಿ ಪೊಲೀಸರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ತಮ್ಮ ಸ್ಥಳಗಳು, ಫೋಟೋಗಳು ಮತ್ತು ವಿಡಿಯೋಗಳು ಒಳಗೊಂಡಂತೆ ಹಲವು ಡೇಟಾವನ್ನು ವರ್ಗಾಯಿಸಬೇಕಾಗುತ್ತದೆ. ಬಿಎಸ್‌ಎನ್‌ಎಲ್ ನೆಟ್‌ವರ್ಕ್ ವೇಗವು ಶೋಚನೀಯವಾಗಿದೆ. ಖಾಸಗಿ ಸಂಸ್ಥೆಗಳು 5G ಸೇವೆಗಳನ್ನು ನೀಡುತ್ತಿದ್ದರೆ, ಬಿಎಸ್‌ಎನ್‌ಎಲ್ ಇನ್ನೂ 4G ಸೇವೆಗಳನ್ನು ನೀಡುತ್ತಿಲ್ಲ" ಎಂದು ಆರೋಪಿಸಿದ್ದಾರೆ.
ಸಾಕರ್ನಾಟಕ ಪಾರದರ್ಶಕತೆ ಕಾಯಿದೆ, 1999 ರ ಪ್ರಕಾರ ವಾಣಿಜ್ಯ ಮೌಲ್ಯಮಾಪನದ ನಂತರ ರಿಲಯನ್ಸ್ ಜಿಯೋವನ್ನು ಪರ್ಯಾಯ ಸೇವಾ ಪೂರೈಕೆದಾರರಾಗಿ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿಕೊಂಡಿದ್ದಾರೆ.

"ಕರ್ನಾಟಕ ಪೊಲೀಸರು ಈ ಹಾದಿ ಮೊದಲಿನದಲ್ಲ. ಭಾರತೀಯ ರೈಲ್ವೇ ಮತ್ತು ತೆಲಂಗಾಣ ಪೊಲೀಸರು ಸೇರಿದಂತೆ ಕೇಂದ್ರ ಸರ್ಕಾರದ ಹಲವು ಇಲಾಖೆಗಳಿಗೆ ರಿಲಯನ್ಸ್ ಜಿಯೋಗೆ ಬದಲಾಯಿಸುವಂತೆ ನಿರ್ದೇಶನ ನೀಡಲಾಗಿದ್ದು, ಇದೀಗ ಕರ್ನಾಟಕದ ಸರದಿ ಬಂದಿದೆ" ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗುಂಡಣ್ಣ ಸಿ.ಕೆ. ಆರೋಪಿಸಿದ್ದಾರೆ.
ಸಾರ್ವಜನಿಕ ವಲಯದ ಉದ್ಯಮವನ್ನು (ಪಿಎಸ್‌ಯು) ಮುಚ್ಚಲು ಮತ್ತು ಖಾಸಗಿ ವಲಯವನ್ನು ಉತ್ತೇಜಿಸಲು ಸರ್ಕಾರವು ಉದ್ದೇಶಪೂರ್ವಕ ನಿರಾಸಕ್ತಿಗೆ ಬಿಎಸ್‌ಎನ್‌ಎಲ್ ಬಲಿಪಶುವಾಗಿದೆ ಎಂದು ಗುಂಡಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸರ್ಕಾರವು ಇತ್ತೀಚೆಗೆ ಸ್ವಯಂ ನಿವೃತ್ತಿ ಯೋಜನೆ ಜಾರಿಗೊಳಿಸಿತ್ತು. ಅದರ ಅಡಿಯಲ್ಲಿ ಸುಮಾರು 80,000 ಉದ್ಯೋಗಿಗಳು ನಿವೃತ್ತರಾದರು. ಇದರಿಂದಾಗಿ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲದ ಕೊರತೆ ತೀವ್ರವಾಗಿ ಕಾಡಿದೆ. ಸರ್ಕಾರವು ಮೂಲಸೌಕರ್ಯಗಳನ್ನು ಹೆಚ್ಚಿಸಲು ಹೂಡಿಕೆ ಮಾಡಿಲ್ಲ. ಸರ್ಕಾರವು 5G ಸ್ಪೆಕ್ಟ್ರಮ್ ಅನ್ನು ಖಾಸಗಿ ಕಂಪನಿಗಳಿಗೆ ಹರಾಜು ಹಾಕುತ್ತಿರುವಾಗ ಬಿಎಸ್‌ಎನ್‌ಎಲ್‌ಗೆ 4G ಸೇವೆಗಳನ್ನು ಒದಗಿಸಲು ಸಹ ಅನುಮತಿಸಲಿಲ್ಲ. ಇದು ಉದ್ದೇಶಪೂರ್ವಕ ಕೃತ್ಯ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ಮಾಹಿತಿ ಕೃಪೆ : ದಿ ಹಿಂದೂ)












Click it and Unblock the Notifications