ಭಾರಿ ಮಳೆಯಿಂದ ಕರ್ನಾಟಕದ ಹಲವು ಜಲಾಶಯಗಳಲ್ಲಿ ಬಿರುಕು
ಬೆಂಗಳೂರು, ಆಗಸ್ಟ್ 18: ಕೆಆರ್‌ಎಸ್, ಕಬಿನಿ, ಹೇಮಾವತಿ, ತುಂಗಭದ್ರಾ ಜಲಾಶಯದಲ್ಲಿ ಬಿರುಕುಗಳು ಉಂಟಾಗಿರುವ ಕಾರಣ ಹೊರ ಹರಿವು ಹೆಚ್ಚಳ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಳಹರಿವು ಹೆಚ್ಚಾಗಿರುವ ಕಾರಣ ಒತ್ತಡ ಉಂಟಾಗಿದೆ. ಹಾಗಾಗಿ ಹೊರ ಹರಿವು ಹೆಚ್ಚಳ ಮಾಡಿ ಅಣೆಕಟ್ಟು ಬಳಿ ಅಧಿಕಾರಿಗಳ ಗಸ್ತು ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನೆರೆ ಪರಿಹಾರಕ್ಕೆ ಬೆಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಲಭ್ಯ ಇರುವ ಸೆಕೆಂಡ್ಸ್ ಬಟ್ಟೆಗಳನ್ನು ಕಳುಹಿಸಲು ಹಾಗೂ ರಾಮನಗರ ಜಿಲ್ಲಾ ಪಂಚಾಯ್ತಿ ಮತ್ತು ಜಿಲ್ಲಾಧಿಕಾರಿ ಕಚೇರಿಗೂ ನೆರೆ ಪರಿಹಾರ ಸಾಮಗ್ರಿಗಳನ್ನು ಕಳಹಿಸಿಕೊಡಲು ಉದ್ಯಮಿಗಳು ಮತ್ತು ಶಾಸಕರಿಗೆ ಮನವಿ ಮಾಡಿದ್ದೇವೆ ಎಂದರು.

ಎಲ್ಲ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಗಳ ವೈದ್ಯರ ತಂಡವನ್ನು ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಲು, ಔಷಧ ನೆರವು ನೀಡಲು ಕೂಡ ಮನವಿ ಮಾಡಲಾಗಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿವೃಷ್ಠಿ ಅನಾಹುತಗಳಾಗಿವೆ.
(ನೀರಿನ ಮಟ್ಟ 17.08.2018 ರಂತೆ)
| ಅಣೆಕಟ್ಟುಗಳು | ಗರಿಷ್ಠ ಮಟ್ಟ | ಇಂದಿನ ಮಟ್ಟ |
| ಲಿಂಗನಮಕ್ಕಿ | 1819.00 | 1817.70 |
| ಸುಪಾ | 564 | 558.50 |
| ಹಾರಂಗಿ | 2859.00 | 2856.55 |
| ಹೇಮಾವತಿ | 2922.00 | 2919.64 |
| ಕೆಆರ್‌ಎಸ್ (ಭೂ ಮಟ್ಟದಿಂದ) | 124.80 | 120.15 |
| ಕಬಿನಿ | 2284.00 | 2280.45 |
| ಭದ್ರಾ | 186 | 184 |
| ತುಂಗಭದ್ರಾ | 1633.00 | 1630.05 |
| ಘಟಪ್ರಭಾ | 2175.00 | 2175.00 |
| ಮಲಪ್ರಭಾ | 2079.50 | 2065.90 |
| ಆಲಮಟ್ಟಿ | 519.60 | 519.42 |
ಅಲ್ಲೆಲ್ಲಾ ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ನೆರವು ನೀಡುವಂತೆ ಆದೇಶಿಸಿದ್ದೇವೆ, ನೀರಾವರಿ ಇಲಾಖೆಯ ಗುತ್ತಿಗೆದಾರರ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು ರಸ್ತೆಯನ್ನು ಸಂಚಾರ ಮುಕ್ತವನ್ನಾಗಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications