ಪ್ರತಿಯೊಂದು ಸಚಿವಾಲಯಕ್ಕೂ ಹಣ ಸಂಗ್ರಹ ಟಾರ್ಗೆಟ್: ನಳಿನ್‍ಕುಮಾರ್ ಕಟೀಲ್
ಬೆಂಗಳೂರು, ಆಗಸ್ಟ್ 11: ಪ್ರತಿಯೊಂದು ಸಚಿವಾಲಯಕ್ಕೂ ಇಂತಿಷ್ಟು ಹಣ ಸಂಗ್ರಹಕ್ಕೆ ಸೂಚಿಸಿದ್ದಾರೆ ಎಂಬುದು ರಾಜ್ಯದಲ್ಲಿ ಜನಜನಿತವಾಗಿದೆ. ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇದರ ವಿರುದ್ಧ ಜನಾಂದೋಲನ ರೂಪಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ರಾಜ್ಯ ಸರಕಾರವು ಗುತ್ತಿಗೆದಾರರ ನ್ಯಾಯಯುತ ಬಿಲ್‍ಗಳನ್ನು ಕೂಡಲೇ ಪಾವತಿಸಿ ಉದ್ಯಾನಗಳ ನಗರ ಎನಿಸಿದ ಬೆಂಗಳೂರಿನಲ್ಲಿ ಕಾಮಗಾರಿಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಜನಾದೇಶ ಪಡೆದ ರಾಜ್ಯ ಸರಕಾರ ಸ್ವೇಚ್ಛಾಚಾರಿ, ಭ್ರಷ್ಟಾಚಾರಿ, ದುರಹಂಕಾರಿ ಆಡಳಿತ ನೀಡುತ್ತಿದೆ. ಕಳೆದ ಸುಮಾರು 85 ದಿನಗಳಲ್ಲಿ ಒಂದಲ್ಲ ಒಂದು ಹಗರಣದಲ್ಲಿ, ಭ್ರಷ್ಟಾಚಾರದಲ್ಲಿ, ಒಂದಲ್ಲ ಒಂದು ಜನವಿರೋಧಿ ನೀತಿಯಲ್ಲಿ ಹಾಗೂ ದ್ವೇಷದ ರಾಜಕಾರಣದಲ್ಲಿ ಸರಕಾರ ತನ್ನನ್ನು ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ರಾಜ್ಯ ಸರಕಾರವು ಜನವಿರೋಧಿ ಧೋರಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಆಕ್ಷೇಪಿಸಿದ್ದಾರೆ.

ಭ್ರಷ್ಟಾಚಾರ ಎನ್ನುವುದೇ ಸರಕಾರದ ಮೂಲ ಉದ್ದೇಶವಾಗಿದೆ. ಕೃಷಿ ಇಲಾಖೆ ಸೇರಿದಂತೆ ರಾಜ್ಯದ ಎಲ್ಲ ಇಲಾಖೆಗಳೂ ವ್ಯಾಪಕವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸ್ವತಃ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಭ್ರಷ್ಟಾಚಾರದ ಪೋಷಣೆ ಮತ್ತು ಪಾಲನೆ ನಡೆಯುವುದು ಕಂಡುಬರುತ್ತಿದೆ. ರೈತ ವಿರೋಧಿ ಧೋರಣೆಗಳನ್ನು ಕಾಂಗ್ರೆಸ್ ಸರಕಾರ ತನ್ನದಾಗಿಸಿಕೊಂಡಿದೆ ಎಂದು ಟೀಕಿಸಿದ್ದಾರೆ.
ಕೃಷಿ ಸಚಿವರ ಭ್ರಷ್ಟಾಚಾರದ ಕುರಿತು ಅಲ್ಲಿನ ನೌಕರರೇ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ವರ್ಗಾವಣೆ ದಂಧೆ ಒಳಗಡೆ ಮುಖ್ಯಮಂತ್ರಿಗಳೇ ಭಾಗಿಯಾಗಿದ್ದಾರೆಂದು ಆರೋಪಿಸಿ ಸ್ವತಃ ಆ ಪಕ್ಷದ ಶಾಸಕರೇ ಶಾಸಕಾಂಗ ಪಕ್ಷದ ಸಭೆಗೆ ಒತ್ತಾಯ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನ ಗುತ್ತಿಗೆದಾರರ ಹಣ ಪಾವತಿ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಮಗಾರಿಗೆ ಸಂಬಂಧಿಸಿದ ಹಣ ಪಾವತಿಗೆ ನಿರ್ಬಂಧ ವಿಧಿಸಿ ಪ್ರತಿಯೊಬ್ಬ ಕಂಟ್ರಾಕ್ಟರ್ ಬಳಿ ಕೂಡ ಹಣ ದೋಚುವ, ಹಗಲುದರೋಡೆ ಮಾಡುತ್ತಿದ್ದರು. ಇದಕ್ಕೆ ಮುಖ್ಯಮಂತ್ರಿಗಳ ಸ್ಪಷ್ಟನೆ ಏನು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕತ್ವದ ಸೂಚನೆ ಅನುಸಾರವಾಗಿ ಕರ್ನಾಟಕದ ಸರಕಾರವನ್ನು ಎಟಿಎಂ ಆಗಿ ಬಳಸಲು ಮುಂದಾದಂತಿದೆ. ಬೇರೆ ರಾಜ್ಯಗಳ ಚುನಾವಣೆಗೆ ಬೇಕಾದ ಕೋಟ್ಯಂತರ ಹಣ ಸಂಗ್ರಹ ಮಾಡುತ್ತಿರುವುದೂ ಕಂಡುಬರುತ್ತಿದೆ. ಇದರ ಪರಿಣಾಮವಾಗಿ ಬೆಲೆ ಏರಿಕೆಯಿಂದ ಜನತೆ ತತ್ತರಿಸಿ ಹೋಗುವಂತಾಗಿದೆ ಎಂದು ಕಿಡಿಕಾರಿದ್ದಾರೆ.












Click it and Unblock the Notifications