ರಾಜ್ಯ ಸರ್ಕಾರದ ಆರ್ಥಿಕತೆಯ ಗುಟ್ಟು ರಟ್ಟು: ಜನರ ಬಳಿ ಹೋಗಲು ಮುಜುಗರ ಎಂದ ಶಾಸಕ
ಮಂಡ್ಯ, ಸೆಪ್ಟೆಂಬರ್ 11: ರಾಜ್ಯ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಸರ್ಕಾರದಿಂದ ದೊಡ್ಡ ಮಟ್ಟದ ಅನುದಾನ ಏನು ಬರುತ್ತಿಲ್ಲ. ಅಭಿವೃದ್ಧಿ ಮಾಡಲು ಸಾಕಷ್ಟು ಸಮಸ್ಯೆ ಆಗುತ್ತಿದೆ. ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ. ಎಷ್ಟಿದೆ ಅದರಲ್ಲಿ ಹೊಂದಾಣಿಕೆ ಮಾಡುತ್ತಿದ್ದಾರೆ. ಹಿಂದಿನ ಪೇಮೆಂಟ್ ಮಾಡೋದೆ ಸಾಕಷ್ಟು ಬಾಕಿ ಇದೆ ಎಂದು ಕಾಂಗ್ರೆಸ್ ಬೆಂಬಲಿತ, ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ದರ್ಶನ್ ಪುಟ್ಟಣ್ಣಯ್ಯ ರಾಜ್ಯ ಸರ್ಕಾರ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ಕೋಟಿ ಪೇಮೆಂಟ್ ಮಾಡಬೇಕು. ಜನರ ಬಳಿ ಹೋದ ಸಂದರ್ಭದಲ್ಲಿ ಮುಜುಗರವಾಗುತ್ತಿದೆ. ಅಭಿವೃದ್ಧಿ ಮಾಡುವಷ್ಟು ಹಣ ಬರುತ್ತಿಲ್ಲ. ದುಡ್ಡೆಲ್ಲ ಗ್ಯಾರಂಟಿ ಯೋಜನೆಗೆ ಹೋಗುತ್ತಿದೆ. ಹಾಗಾಗಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿದರು.

ಗ್ಯಾರಂಟಿ ನಮ್ಮ ರಾಜ್ಯದಲ್ಲಿ ಒಂದೇ ಅಲ್ಲ. ಬೇರೆ ಕಡೆಗಳಲ್ಲೂ ಮಾಡಿದ್ದಾರೆ. ಆರ್ಥಿಕವಾಗಿ ಕಾಣಿಸಲು ಹೆಚ್ಚು ದಿನ ಕಾಲ ಹಿಡಿಯುತ್ತದೆ. ಅಭಿವೃದ್ಧಿ ಅಂದ್ರೆ ಏನು ಎನ್ನುವುದನ್ನು ಪ್ರಶ್ನೆ ಮಾಡಬೇಕಿದೆ. ಊಟ ಮಾಡೋದು ಡೆವಲಪ್ಮೆಂಟ್ ಹಾ? ಅಥವಾ ಅಭಿವೃದ್ಧಿ ಕಡೆ ಫೋಕಸ್ ಮಾಡಬೇಕಾ.? ಎಂದು ರಾಜ್ಯ ಸರ್ಕಾರವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರಶ್ನಿಸಿದ್ದಾರೆ.
ಮಳೆ ಸಂದರ್ಭದಲ್ಲಿ ರಸ್ತೆ, ಚರಂಡಿ ಸಮಸ್ಯೆ ಇದೆ. ಗ್ಯಾರಂಟಿ ಯೋಜನೆಗಳ ಪುನರ್ ಪರಿಶೀಲನೆ ಮಾಡಬೇಕು. ಗ್ಯಾರಂಟಿ ಯೋಜನೆಯ ಕೆಲಸ ಆಗ್ತಿದ್ಯಾ? ಎನ್ನುವುದರ ಬಗ್ಗೆ ವಿಶ್ಲೇಷಣೆ ಮಾಡಬೇಕು. ಅಭಿವೃದ್ಧಿ ಮಾಡಲೇ ಬೇಕು. ಯಾವ ಇಲಾಖೆಯಿಂದಲೂ ಹೆಚ್ಚಿನ ಅನುದಾನ ಬರುತ್ತಿಲ್ಲ.

ಗ್ಯಾರಂಟಿ ಬಗ್ಗೆ ಕೆಲವರು ಮೆಚ್ಚುಗೆ, ಮತ್ತೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿಯಿಂದ ಕೆಲವರ ಜೀವನ ನಡೆಯುತ್ತಿದೆ. ಗ್ಯಾರಂಟಿ ಯೋಜನೆ ಬೇಡ, ರಸ್ತೆ ಅಭಿವೃದ್ಧಿ ಮಾಡಿ ಅಂತಾರೆ. ಮೊದಲು ಬೇಕಾಗಿರುವುದು ಅಭಿವೃದ್ಧಿ ಕೆಲಸ ಎಂದರು.
ಎಲ್ಲೆಲ್ಲಿ ಬದಲಾವಣೆ ತರಬಹುದು ಅದರ ಮೇಲೆ ನಿಗಾವಹಿಸಬೇಕು. ತಾತ್ಕಾಲಿಕ ಪರಿಹಾರ ಬಿಟ್ಟು ಶಾಶ್ವತ ಪರಿಹಾರ ಕೊಡಬೇಕು. ರಾಜ್ಯ ಸರ್ಕಾರ ಪ್ರೊಫೆಸರ್‌ಗಳಿಗೆ ಹೇಳಿ ಪರಿಶೀಲನೆ ಮಾಡಬೇಕು. ಕಳೆದ ಅಧಿವೇಶನದಲ್ಲೇ ಈ ವಿಚಾರ ಪ್ರಸ್ತಾಪ ಮಾಡಬೇಕು ಎಂದುಕೊಂಡಿದ್ದೆ.
ಗ್ಯಾರಂಟಿ ಯಾರ ಯಾರಿಗೆ ತಲುಪುತ್ತಿದೆ, ಯಾರಿಗೆ ತಲುಪುತ್ತಿಲ್ಲ ಎನ್ನುವುದರ ಅರ್ಥಿಕತೆ ಬಗ್ಗೆ ಮಾಹಿತಿ ಪಡೆಯಬೇಕು. ಅವಶ್ಯಕತೆ ಇಲ್ಲದ ಗ್ಯಾರಂಟಿ ಯೋಜನೆ ತೆಗೆಯುವುದು ಒಳ್ಳೆಯದು. ಸರ್ವೇ ಮಾಡಿ ಪರಿಶೀಲನೆ ನಡೆಸಬೇಕು. ಜೊತೆಗೆ ಸರ್ಕಾರ ರಾಜ್ಯದ ಆರ್ಥಿಕತೆ ಬಗ್ಗೆಯೂ ಸಹ ಅರ್ಥಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.












Click it and Unblock the Notifications