ಟ್ಯಾಕ್ಸಿ ಪ್ರಯಾಣ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು, ಏಪ್ರಿಲ್ 1: ರಾಜ್ಯಾದ್ಯಂತ ಟ್ಯಾಕ್ಸಿ ದರ ಪರಿಷ್ಕರಣೆ ಮಾಡಿ ಗುರುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಟ್ಯಾಕ್ಸಿ ಪ್ರಯಾಣ ದರ ಹೆಚ್ಚಳ ಮಾಡುವಂತೆ ಟ್ಯಾಕ್ಸಿ ಮಾಲೀಕರು ಈಚೆಗೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು.
ಈ ಬೇಡಿಕೆಯನ್ನು ಪರಿಗಣಿಸಿರುವ ಸರ್ಕಾರ ಟ್ಯಾಕ್ಸಿ ಪ್ರಯಾಣ ದರ ಏರಿಕೆ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದೆ.
ಲಾಕ್‌ಡೌನ್ ನಂತರ ಬಾಡಿಗೆ ದರ ಕಡಿಮೆಯಿದ್ದು, ಟ್ಯಾಕ್ಸಿ ಹಾಗೂ ಕ್ಯಾಬ್‌ಗಳಿಗೆ ಪ್ರಸ್ತುತ ಒಂದು ಕಿ.ಮೀ.ಗೆ 24 ರೂ. ದರ ನಿಗದಿ ಮಾಡಬೇಕು ಎಂದು ಬುಧವಾರವಷ್ಟೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಒತ್ತಾಯಿಸಿದ್ದರು.
ಟ್ಯಾಕ್ಸಿ ಚಾಲಕರೊಬ್ಬರು ಏರ್‌ಪೋರ್ಟ್ ಸಮೀಪ ಟ್ಯಾಕ್ಸಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದರು. ಆನಂತರ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಟ್ಯಾಕ್ಸಿಗಳನ್ನು ಓಡಿಸದೇ ಇರಲು ಚಾಲಕರ ಸಂಘ ನಿರ್ಧಾರ ಮಾಡಿ, ಒಂದು ಕಿ.ಮೀಗೆ 24 ರೂ. ನಿಗದಿಪಡಿಸಿ ಚಾಲಕರ ಜೀವ ಉಳಿಸಿ ಎಂದು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಬೆನ್ನಲ್ಲೇ ಟ್ಯಾಕ್ಸಿ ಪ್ರಯಾಣ ದರ ಏರಿಸಲಾಗಿದೆ.
ವಿವಿಧ ಸ್ವರೂಪದ ಟ್ಯಾಕ್ಸಿಗಳ ಪ್ರಯಾಣ ದರ ಏರಿಕೆ ಮಾಡಿದ್ದು, ಈಗಾಗಲೇ ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಟ್ಯಾಕ್ಸಿ ದರವೂ ದುಬಾರಿಯಾಗಲಿದೆ. ಎ, ಬಿ, ಸಿ ಹಾಗೂ ಡಿ ಎಂದು ವಿಭಾಗಗಳನ್ನು ಮಾಡಿ ದರ ಪರಿಷ್ಕರಣೆ ಮಾಡಲಾಗಿದೆ. ಈ ಕುರಿತ ವಿವರ ಮುಂದಿದೆ...

ಎ ವರ್ಗ (15 ಲಕ್ಷ ರೂ ಮೇಲ್ಪಟ್ಟ ವಾಹನ)- ಕನಿಷ್ಠ 27 ರೂ ಹಾಗೂ ಗರಿಷ್ಠ 54ರೂ ದರ ಪರಿಷ್ಕರಣೆ. ನಿಗದಿತ ಪ್ರಯಾಣ ದರ 150 ರೂ
ಬಿ ವರ್ಗ (10-16 ಲಕ್ಷ ರೂ ವಾಹನ)- ಕನಿಷ್ಠ 24 ರೂ ಹಾಗೂ ಗರಿಷ್ಠ 48 ರೂ
ಸಿ ವರ್ಗ (5 ಲಕ್ಷದಿಂದ 10 ಲಕ್ಷ ರೂ ವಾಹನ) -ಕನಿಷ್ಠ 21 ರೂ ಹಾಗೂ ಗರಿಷ್ಠ 42 ರೂ
ಡಿ ವರ್ಗ (5 ಲಕ್ಷದ ವಾಹನ) -ಕನಿಷ್ಠ 18 ರೂ ಹಾಗೂ ಗರಿಷ್ಠ 3 ರೂ, ನಿಗದಿತ ದರ 75 ರೂ
ಸಮಯದ ಆಧಾರದಲ್ಲಿ ಮಾಡುತ್ತಿದ್ದ ದರ ವಸೂಲಿಗೆ ಬ್ರೇಕ್ ಹಾಕಲಾಗಿದ್ದು, ಕಿ.ಮೀ. ಆಧಾರದಲ್ಲಿ ಪ್ರಯಾಣಿಕರಿಗೆ ದರ ನಿಗದಿ ಮಾಡಲಾಗುವುದು. ಕಾಯುವಿಕೆ ದರ 20 ನಿಮಿಷಗಳವರೆಗೆ ಉಚಿತವಾಗಿದ್ದು, ನಂತರ ಪ್ರತಿ 15 ನಿಮಿಷಗಳಿಗೆ 10 ರೂ ನಿಗದಿ ಮಾಡಿರುವುದಾಗಿ ತಿಳಿದುಬಂದಿದೆ.












Click it and Unblock the Notifications