Cabinet Meeting: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 5 ಪಾಲಿಕೆ: ರಾಜ್ಯ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು, ಜುಲೈ 17: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 5 ಪಾಲಿಕೆ ಮಾಡುವುದಕ್ಕೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಬೆಂಗಳೂರು ನಗರವನ್ನ ಐದು ಪಾಲಿಕೆಯನ್ನಾಗಿ ಮಾಡುತ್ತಿದ್ದೇವೆ ಎಂದು ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರಗಳ ಕುರಿತು ಸಚಿವ ಹೆಚ್.ಕೆ ಪಾಟೀಲ್ ಅವರು ಮಾತನಾಡಿ, ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಐದು ಪಾಲಿಕೆ ಮಾಡುವುದಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಬಿಬಿಎಂಪಿಯನ್ನು ಐದು ವಿಭಾಗ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಯಚೂರು ಜಿಲ್ಲೆ ತಾಲ್ಲೂಕಿನಲ್ಲಿ ನೂತನ ಜವಳಿ ಪಾರ್ಕನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಒಟ್ಟು 24.50 ಕೋಟಿಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಕರ್ನಾಟಕ ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ತಾತ್ವಿಕ ಅನುಮೋದನೆ ಹಾಗೂ ಎನ್ ಟಿಪಿಸಿ ಸಂಸ್ಥೆಯು ಕರ್ನಾಟಕದಲ್ಲಿ ಪರಮಾಣು ವಿದ್ಯುತ್ ಸ್ಥಾಪನೆಗೆ ಗುರುತಿಸಿರುವ ಸಂಭಾವ್ಯ ಸ್ಥಳಗಳ್ಲಿ ಪ್ರಾಥಮಿಕ ಅಧ್ಯಯನ ನಡೆಸಲು ಅನುಮತಿ ನೀಡಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಆಯುಷ್ ಇಲಾಖೆಯ ಆಯುರ್ವೇದ, ಸಿದ್ದ ಮತ್ತು ಯುನಾನಿ ಔಷಧಗಳ ಅಮಲುಜಾರಿ ವಿಭಾಗ ಹಾಗೂ ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜೊತೆಗೆ ವಿಲೀನಗೊಳಿಸಲು ನಿರ್ಣಯಿಸಲಾಯಿತು. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಯಳವಟ್ಟಿ ಗ್ರಾಮದಲ್ಲಿ 28.3 ಎಕರೆ ಪ್ರದೇಶದಲ್ಲಿ ಮಾವು ಮತ್ತು ಇತರೆ ತೋಟಗಾರಿಕೆ ಬೆಳೆಗಳ ಬಹು ಉತ್ಪನ್ನಗಳ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣಾ ಘಟಕವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಮಾದರಿಯಡಿ ರೂ.35.07 ಕೋಟಿಗಳ ಮೊತ್ತದಲ್ಲಿ Common Infrastructure for Industrial Parks (Food Park) ಮಾದರಿಯಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಸಿರಿವಾರ ಗ್ರಾಮದ ಪರಂಪೋಕ ಸರ್ಕಾರಿ ಸರ್ವೆ ನಂ.124/*/1/ಪಿ2 ನಲ್ಲಿನ 194-33 ಎಕರೆ ಜಮೀನಿನಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿ ರೂ.83.79 ಕೋಟಿ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ ತಾಲ್ಲೂಕು, ಮಂಡಿಕಲ್ಲು ಹೋಬಳಿ, ಯರಮಾರೇನಹಳ್ಳಿ ಗ್ರಾಮದಲ್ಲಿ 5-23 ಎಕರೆ / ಗುಂಟೆ ಸರ್ಕಾರಿ ಬೀಳು ಜಮೀನನ್ನು ಅಕ್ಷಯ ಪಾತ್ರೆ ಅಡುಗೆ ಮನೆ ಮತ್ತು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ, ಇಸ್ಕಾನ್ ಬೆಂಗಳೂರು ಇವರಿಗೆ ಮಂಜೂರು ಮಾಡಲು ಸಚಿವ ಸಂಪುಟವು ನಿರ್ಧರಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ವೀರಭದ್ರನ ಪಾಳ್ಯ ಗ್ರಾಮದ ಸ.ನಂ.66ರಲ್ಲಿ 15 ಗುಂಟೆ ಖರಾಬು ಜಮೀನನ್ನು ಕಾಂಗ್ರೆಸ್ ಕಛೇರಿ ಕಟ್ಟಡ ನಿರ್ಮಾಣಕ್ಕಾಗಿ ಕಾಂಗ್ರೆಸ್ ಭವನ ಟ್ರಸ್ಟ್ ಇವರಿಗೆ ಗುತ್ತಿಗೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆಮ್ಮಿಂಜೆ ಗ್ರಾಮದ ಸ.ನಂ.138/4 ರಲ್ಲಿ 3.00 ಎಕರೆ ಗೋಮಾಳ ಜಮೀನನ್ನು ಬಂಟರ ಸಂಘ, ಪುತ್ತೂರು ತಾಲ್ಲೂಕುಮಂಜೂರು ಮಾಡಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವತಿಯಿಂದ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಳವಡಿಸಲಾಗಿರುವ ಸಮರ್ಪಕವಾಗಿ ಕಾರ್ಯನಿರ್ವಹಿಸದ 1,530 ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳ ಉಪಕರಣಗಳನ್ನು ರೂ.19.89 ಕೋಟಿಗಳ ಅಂದಾಜು ಮೊತ್ತದಲ್ಲಿ ಬದಲಿಸಿ ಹೊಸದಾಗಿ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನ ಪೀಠವನ್ನು ರೂ.10.00 ಕೋಟಿಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಂಪಿ-ಬಾದಾಮಿ-ಐಹೊಳೆ-ಪಟ್ಟದಕಲ್ಲು-ವಿಜಯಪುರ ಒಳಗೊಂಡಂತೆ ಉತ್ತರ ಕರ್ನಾಟಕ ಪ್ರವಾಸಿ ವೃತ್ತವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ DBFOT ಮಾದರಿಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮದ ಮೂಲಕ ರೂ.166.22 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.












Click it and Unblock the Notifications