Karnataka: ಹೊಸ 188 ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಂಪುಟ ಅಸ್ತು, ಎಲ್ಲೆಲ್ಲಿ ಸ್ಥಾಪನೆ?
ಬೆಂಗಳೂರು, ಆಗಸ್ಟ್ 20: ಇಂದಿರಾ ಕ್ಯಾಂಟೀನ್‌ಗೆ ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಸುಮಾರು 100 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯನ್ನು ಹೊರತಾಗಿ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ನಗರ ಪಾಲಿಕೆಗಳಡಿ 188 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಾಣ ಮಾಡಲಿದೆ.
ರಾಜ್ಯ ಸಚಿವ ಸಂಪುಟ ಶನಿವಾರ ನಡೆದಿದ್ದು, ಅದರಲ್ಲಿ ಈ ನೂತನ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ ಕುರಿತು ಅನುಮೋದಿಸಲಾಯಿತು. ಒಟ್ಟು ಸುಮಾರು 21 ಕೋಟಿ ವೆಚ್ಚದಲ್ಲಿ 188 ಹೊಸ ಕ್ಯಾಂಟೀನ್ ಸ್ಥಾಪನೆ ಜೊತೆಗೆ ಅಸ್ತಿತ್ವದಲ್ಲಿರುವ ಕ್ಯಾಂಟೀನ್‌ಗಳಿಗೆ ನವೀಕರಣಕ್ಕೆ ಸಂಪುಟ ಸಭೆ ಅಸ್ತು ಹೇಳಿದೆ.

ರಾಜ್ಯದ ದಕ್ಷಿಣ ಭಾಗವಾದ ಬೆಂಗಳೂರು ಸೇರಿ ವಿವಿಧೆಡೆ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆಗೆ ಆದ್ಯತೆ ನೀಡಲಾಗಿದೆ. ಇನ್ನೂ ಉತ್ತರ ಕರ್ನಾಟಕ ಭಾಗದ ಕ್ಯಾಂಟೀನ್‌ಗಳಲ್ಲಿ ರೊಟ್ಟಿ ನೀಡಲು ಚಿಂತನೆ ನಡೆದಿದೆ. ಈ ಕುರಿತು ಸರ್ಕಾರ ಆಹಾರ ಪೂರೈಕೆಗೆ ಗುತ್ತಿಗೆದಾರರಿಗೆ ಸೂಚಿಸಿದೆ ಎಂದು ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ತಿಳಿಸಿದರು.
ಊಟಕ್ಕೆ ನಿತ್ಯ 62 ರೂಪಾಯಿ ಖರ್ಚು
ಇಂದಿ ಕ್ಯಾಂಟೀನ್‌ಗಳಲ್ಲಿ ಬೆಳಗ್ಗೆ ತಿಂಡಿ (ಉಪಾಹಾರ), ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಒಳಗೊಂಡಂತೆ ಒಬ್ಬ ವ್ಯಕ್ತಿಗೆ ಸರ್ಕಾರ ನಿತ್ಯ 62 ರೂಪಾಯಿ ಭರಿಸುತ್ತಿದೆ. ಇದರಲ್ಲಿ 37 ರೂಪಾಯಿ ರಾಜ್ಯ ಸರ್ಕಾರ ಮತ್ತು 25 ರೂಪಾಯಿಯನ್ನು ಗ್ರಾಹಕರು ಭರಿಸಲಿದ್ದಾರೆ ಎಂದು ಅವರು ವಿವರಿಸಿದರು.
ಕಲ್ಯಾಣ ಕರ್ನಾಟಕದ ಬೀದರ್ ಹಾಗೂ ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಕಲ್ಮಲಾ ಮತ್ತು ಸಿಂಧನೂರು ಮಧ್ಯದ 78 ಕಿಮೀ ವ್ಯಾಪ್ತಿಯ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಅಂದಾಜು ಪರಿಷ್ಕರಣೆ ಮಾಡುವಂತೆ ಸಂಪುಟ ತಿಳಿಸಿದೆ. ಈ ಅಭಿವೃದ್ಧಿ ಯೋಜನೆಗೆ ಅಂದಾಜು ರೂ. 1,600ಕೋಟಿ ಗೂ ಅಧಿಕ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಇದನ್ನು ಮರು ಅಂದಾಜಿಸುವಂತೆ ತಿಳಿಸಲಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಗೆ ಐದು ಎಕರೆ ಜಮೀನು ಮಂಜೂರು ಮಾಡುವ ನಿರ್ಧಾರವನ್ನು ಸಂಪುಟವು ಮುಂದೂಡಿತು. ಸ್ಥಳೀಯ ಶಾಸಕರಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಜಮೀನು ಮಂಜೂರು ಮಾಡುವ ಬಗ್ಗೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ ಎಂದು ತಿಳಿಸಿದ್ದಾರೆ. ಹೀಗಾಗಿ ಆ ನಿರ್ಧಾರ ಸದ್ಯ ನಮ್ಮ ಮುಂದಿಲ್ಲ ಎಂದು ಹೇಳಿದರು.












Click it and Unblock the Notifications