ರಾಜ್ಯ BJP ಈಗ ಒಡೆದ ಮನೆ, ಒಂದು ಕಡೆ ಬಣ ಜಗಳ, ಗುಂಪುಗಾರಿಕೆ: ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯ
ಬೆಂಗಳೂರು, ಸೆಪ್ಟೆಂಬರ್ 1: ರಾಜ್ಯ ಬಿಜೆಪಿ ಈಗ ಒಡೆದ ಮನೆಯಂತಾಗಿದ್ದು, ಒಂದು ಕಡೆ ಬಣ ಜಗಳ, ಗುಂಪುಗಾರಿಕೆ ನಡೆಯುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಮತ್ತೊಂದು ಕಡೆ ವರಿಷ್ಠರ ಕೆಟ್ಟ ದೃಷ್ಟಿಯಿಂದ ಹೈರಾಣಾಗಿರುವ BJP ರಚನಾತ್ಮಕ ಪ್ರತಿಪಕ್ಷವಾಗುವ ಯಾವುದೇ ಯೋಗ್ಯತೆಯನ್ನೂ ಉಳಿಸಿಕೊಂಡಿಲ್ಲ. ಇಂತಹ ರಾಜ್ಯ BJP ನಾಯಕರು ನಮ್ಮ ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾತಾಡುವುದು ವರ್ತಮಾನದ ಅತಿ ದೊಡ್ಡ ಕುಚೋದ್ಯ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳನ್ನು ಪೂರೈಸಿದರೂ ರಾಜ್ಯದಲ್ಲಿ ಎರಡನೇ ದೊಡ್ಡ ವಿರೋಧ ಪಕ್ಷವಾಗಿರುವ ಬಿಜೆಪಿಯಿಂದ ವಿಪಕ್ಷ ನಾಯಕ ಆಯ್ಕೆಯಾಗುತ್ತಿಲ್ಲ. ಈ ಬಗ್ಗೆ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಬಿಜೆಪಿಯನ್ನು ಲೇವಡಿ ಮಾಡುತ್ತಲೇ ಬರುತ್ತಿದೆ. ಅಲ್ಲದೆ ರಾಜ್ಯದಲ್ಲಿ ಪಕ್ಷ ಸೋತ ಪರಿಯನ್ನು ಕಂಡು ರಾಜ್ಯದ ನಾಯಕರು ಹಾಗೂ ಕಾರ್ಯಕರ್ತರಿಗೆ ಉತ್ಸಾಹ ಕುಗ್ಗಿ ಹೋಗಿದೆ.
ಈ ನಿಟ್ಟಿನಲ್ಲಿ ಹಲವಾರು ನಾಯಕರು ಪಕ್ಷಾಂತರದ ಮಾತುಗಳನ್ನು ನೇರವಾಗಿ ಆಡದೇ ಇದ್ದರೂ ಬಿಜೆಪಿ ಹೈಕಮಾಂಡ್ ಬಗ್ಗೆ ಅಪಸ್ವರದ ಮಾತುಗಳನ್ನು ಆಡುತ್ತಲೇ ಬಂದಿದ್ದಾರೆ. ಇನ್ನು ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಲಿಂಗಾಯತ ನಾಯಕರು ಬೂದಿ ಮುಚ್ಚಿದ ಕೆಂಡದಂತೆ ಕಾರುತ್ತಲೇ ಇದ್ದಾರೆ.
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 1, 2023
ರಾಜ್ಯ BJP ಈಗ ಒಡೆದ ಮನೆ. ಒಂದು ಕಡೆ ಬಣ ಜಗಳ,ಗುಂಪುಗಾರಿಕೆ.
ಮತ್ತೊಂದು ಕಡೆ ವರಿಷ್ಠರ ಕೆಟ್ಟ ದೃಷ್ಟಿಯಿಂದ ಹೈರಾಣಾಗಿರುವ BJP ರಚನಾತ್ಮಕ ಪ್ರತಿಪಕ್ಷವಾಗುವ ಯಾವುದೇ ಯೋಗ್ಯತೆಯನ್ನೂ ಉಳಿಸಿಕೊಂಡಿಲ್ಲ.
ಇಂತಹ ರಾಜ್ಯ BJP ನಾಯಕರು ನಮ್ಮ ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾತಾಡುವುದು ವರ್ತಮಾನದ ಅತಿ ದೊಡ್ಡ ಕುಚೋದ್ಯ.
ಇದಕ್ಕೆ ಪೂರಕವೆಂಬಂತೆ ಹಲವಾರು ನಾಯಕರು ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬ ಗುಮಾನಿಗಳು ಜೋರಾಗುತ್ತಿವೆ. ಈ ನಿಟ್ಟಿನಲ್ಲಿ ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ಹಲವಾರು ಶಾಸಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬಾರದೆಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿವೆ. ಇತ್ತಿಚೆಗೆ ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್ ಹಾಗೂ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳು ಹೆಚ್ಚಾಗಿದ್ದವು.
ಅಲ್ಲದೆ ಯಶವಂತಪುರದ ಹಲವಾರು ಬಿಜೆಪಿ ಸ್ಥಳೀಯ ನಾಯಕರು ಕೂಡ ಕಾಂಗ್ರೆಸ್‌ಗೆ ಸೇರಿದ್ದರು. ಆದರೆ ಯಶವಂತಪುರದ ಶಾಸಕ ಎಸ್‌ಟಿ ಸೋಮಶೇಖರ್ ಮಾತ್ರ ಯಾವುದೇ ಹೇಳಿಕೆಗಳನ್ನು ನಿಖರವಾಗಿ ನೀಡಿರಲಿಲ್ಲ, ಆದರೆ ಅವರ ಮಾತಿನಲ್ಲಿ ಬಿಜೆಪಿಯ ಕೆಲವರ ಬಗ್ಗೆ ಅಸಮಾಧಾನದ ಮಾತುಗಳು ಕೇಳಿ ಬಂದಿದ್ದವು.
ಈ ಮಧ್ಯೆ ಮಾಜಿ ಶಾಸಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯೂ ಆಗಿದ್ದ ಎಂಪಿ ರೇಣುಕಾಚಾರ್ಯ ಅವರು ಕೂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಎಲ್ಲ ಚರ್ಚೆಗಳಿಗೂ ಮತ್ತಷ್ಟು ಇಂಬು ಕೊಟ್ಟಿದ್ದರು. ಆದರೆ ಈ ಬಗ್ಗೆ ಬಿಜೆಪಿ ಹಿರಿಯ ನಾಯಕರೂ ಎಲ್ಲಿಯೂ ಮಾತುಗಳನ್ನು ಆಡಿರಲಿಲ್ಲ. ರಾಜ್ಯ ಬಿಜೆಪಿ ಶಾಸಕರಲ್ಲಿ ರಾಜ್ಯದಿಂದ ಹೈಕಮಾಂಡ್‌ನಲ್ಲಿರುವವರ ಬಗ್ಗೆ ಅಸಮಾಧಾನ ಇದ್ದೆ ಇದೆ ಎಂಬುದು ಕಂಡು ಬಂದಿದೆ.
ಇದಕ್ಕೆ ಪುಷ್ಟಿ ಎಂಬಂತೆ ಬಿಎಲ್ ಸಂತೋಷ್ ಅವರು ಕರೆದಿದ್ದ ಸಭೆ ಬಿಜೆಪಿಯ ಬಸವರಾಜ ಬೊಮ್ಮಾಯಿ, ವಿ ಸೋಮಣ್ಣ, ಎಸ್ ಟಿ ಸೋಮಶೇಖರ್, ಯಡಿಯೂರಪ್ಪ, ಶಂಕರ್ ಪಾಟೀಲ್ ಮುನೇನಕೊಪ್ಪ, ಶಿವರಾಂ ಹೆಬ್ಬಾರ್, ರೇಣುಕಾಚಾರ್ಯ ಇನ್ನೂ ಹಲವರು ಗೈರಾಗಿದ್ದರು.












Click it and Unblock the Notifications