New Flight Service: ಬೆಂಗಳೂರು-ಹಂಪಿಗೆ ಸ್ಟಾರ್ ಏರ್ ವಿಮಾನ ಸೇವೆ ಶುರು, ಟಿಕೆಟ್ ದರ-ವೇಳಾಪಟ್ಟಿ
ಬೆಂಗಳೂರು, ನವೆಂಬರ್ 03: ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾಗಿರುವ ಹಾಗೂ ದೇಶಾದ್ಯಂತ ವಿಮಾನ ಸೇವಾ ಜಾಲ ಹೊಂದಿರುವ ಸ್ಟಾರ್ ಏರ್ (Star Air) ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟಕದ ಹಂಪಿಗೆ (ವಿಜಯನಗರ) ವಿಮಾನ ಸೇವೆ ಅರಂಭಿಸಿದೆ. ಇದರಿಂದ ಹಂಪಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗುತ್ತದೆ. ಈ ವಿಮಾನ ಸೇವೆ ಟಿಕೆಟ್ ದರ, ವೇಳಾಪಟ್ಟಿ ವಿವರ ಇಲ್ಲಿದೆ.
ಕನ್ನಡ ರಾಜ್ಯೋತ್ಸವಕ್ಕೆ ಸ್ಟಾರ್ ಏರ್ ಖುಷಿ ಸುದ್ದಿ ಗೋಷಿಸಿದೆ. ಇಂದು ಸೋಮವಾರ ಬೆಂಗಳೂರಿನಿಂದ ಕರ್ನಾಟಕದ ಹಂಪಿ ಬಳಿಯ ಜಿಂದಾಲ್ ವಿದ್ಯಾನಗರ ವಿಮಾನ ನಿಲ್ದಾಣಕ್ಕೆ ವಿಮಾನ ಸೇವೆ ಆರಂಭಿಸಿದೆ. ಪ್ರತಿ ನಿತ್ಯವು ಎರಡು ಬದಿಗೆ ವಿಮಾನ ಸೇವೆ ಆರಂಭಿಸಲಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ವಿಜಯನಗರವನ್ನು (ಹಂಪಿ) ಸ್ಟಾರ್ ಏರ್ ತನ್ನ ವಿಮಾನಯಾನ ಜಾಲದಲ್ಲಿ 32 ನೇ ತಾಣವನ್ನಾಗಿ ಮಾಡಿದೆ. ಈ ಬಗ್ಗೆ ಸ್ಟಾರ್ ಏರ್ ಅಧಿಕೃತ ಮಾಹಿತಿ ತಿಳಿಸಿದೆ.

ಸ್ಟಾರ್ ಏರ್ ವೇಳಾಪಟ್ಟಿ
ರಾಜ್ಯದ ಪ್ರಮಾಣಿಕರು, ಸೇರಿದಂತೆ ವಿದೇಶಿ ಪ್ರಯಾಣಿಕರಿಗೂ ಈ ಸೇವೆ ಮತ್ತಷ್ಟು ಅನುಕೂಲ ಒದಗಿಸಲಿದೆ. ಬೆಂಗಳೂರು ಏರ್‌ಪೋರ್ಟ್‌ನಿಂದ ವಿದ್ಯಾನಗರದಲ್ಲಿರುವ ಜಿಂದಾಲ್ ಏರ್‌ಪೋರ್ಟ್‌ಗೆ ಪ್ರತಿ ದಿನ ಬೆಳಗ್ಗೆ 9.50ಕ್ಕೆ ಹೊರಡುತ್ತದೆ. ಅಲ್ಲಿಗೆ 10.40ಕ್ಕೆ ತಲುಪುತ್ತದೆ. ಒಟ್ಟು 50 ನಿಮಿಷದಲ್ಲಿ ಪ್ರಯಾಣ ಪೂರ್ಣಗೊಳಿಸುತ್ತದೆ. ಮರಳಿ ಜಿಂದಾಲ್ ಏರ್‌ಪೋರ್ಟ್‌ನಿಂದ ಬೆಳಗ್ಗೆ 11.10ಕ್ಕೆ ಹೊರಟು ಬೆಂಗಳೂರನ್ನು ಮಧ್ಯಾಹ್ನ 12 ಗಂಟೆಗೆ ತಲುಪುತ್ತದೆ.
ಟಿಕೆಟ್ ದರ
* ಎಕಾನಮಿ ಕ್ಲಾಸ್ ಟಿಕೆಟ್ ದರ: 5200 ರಿಂದ 7088 ರೂಪಾಯಿ
* ಬ್ಯುಸಿನೆಟ್ ಕ್ಲಾಸ್ ಟಿಕೆಟ್ ದರ: 10,999 ರಿಂದ 13,359 ರೂಪಾಯಿ
* ಶನಿವಾರ & ಭಾನುವಾರ ರಜಾ ದಿನಗಳಲ್ಲಿ ದರವು ಹೆಚ್ಚಿರುತ್ತದೆ
ಈಗಾಗಲೇ ಸ್ಟಾರ್ ಕರ್ನಾಟಕದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಬೀದರ್ ಏರ್‌ಪೋರ್ಟ್‌ನಿಂದ ಪ್ರಾದೇಶಿಕ ವಿಮಾನ ಸೇವೆ ನೀಡುತ್ತಿದೆ. ಇದೀಗ ಅದಕ್ಕೆ ವಿಜಯನಗರ-ಬೆಂಗಳೂರು ಸೇವೆ ಹೊಸದಾಗಿ ಸೇರ್ಪಡೆ ಮಾಡುವ ಮೂಲಕ ತನ್ನ ಜಾಲ ವಿಸ್ತರಿಸಿಕೊಂಡಿದೆ.
ವಿದ್ಯಾನಗರದಲ್ಲಿ ವಿಮಾನ ಕಾರ್ಯಾಚರಣೆ ಪ್ರಾರಂಭವು ಹೆಮ್ಮೆಯ ಕ್ಷಣವಾಗಿದೆ ಎಂದು ಸ್ಟಾರ್ ಏರ್ ಹೇಳಿಕೊಂಡಿದೆ. ಈ ಮಾರ್ಗದಲ್ಲಿ ಭಾರತದ ಪರಂಪರೆಯ ರತ್ನವಾದ ಹಂಪಿಗೆ ಸಂಪರ್ಕ ಹೆಚ್ಚಿಸುತ್ತದೆ. ಕರ್ನಾಟಕದಲ್ಲಿ ಪ್ರಾದೇಶಿಕ ವಿಮಾನ ಪ್ರಯಾಣ ಉತ್ತೇಜಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ ಎಂಧು ಮುಖ್ಯ ವಾಣಿಜ್ಯ ಮತ್ತು ಮಾರುಕಟ್ಟೆ ಅಧಿಕಾರಿ ಶಿಲ್ಪಾ ಭಾಟಿಯಾ ತಿಳಿಸಿದ್ದಾರೆ.
ಸ್ಟಾರ್ ಏರ್ ಕಳೆದ ಎರಡು ತಿಂಗಳಲ್ಲಿ ಗೊಂಡಿಯಾ, ಇಂದೋರ್, ಸೋಲಾಪುರ, ಸೂರತ್, ಭುವನೇಶ್ವರ, ಪೂರ್ಣಿಯಾ, ಜಾಮ್‌ನಗರ, ಭುಜ್ ಮತ್ತು ಬೀದರ್ ನಂತಹ ಬಹು ವಿಧದ ನಿಲ್ದಾಣಗಳಲ್ಲಿ ಸೇವೆ ಆರಂಭಿಸಿದೆ. ಇದೀಗ ಬೆಂಗಳೂರು-ವಿಜಯನಗರ (ಹಂಪಿ) ಮಾರ್ಗದಲ್ಲಿ ಸೇವೆ ಆರಂಭಿಸುವ ಮೂಳಕ ಶೇಕಡಾ 25 ರಷ್ಟು ತನ್ನ ಜಾಲ ವಿಸ್ತರಣೆ ಮಾಡಿಕೊಂಡಿದೆ.












Click it and Unblock the Notifications