ಕರ್ನಾಟಕದಲ್ಲಿ ಅಕ್ಟೋಬರ್‌ನಿಂದ ಆಸ್ತಿ ಖರೀದಿ ದುಬಾರಿ ಸಾಧ್ಯತೆ
ಬೆಂಗಳೂರು, ಆಗಸ್ಟ್ 23: ಆಸ್ತಿ ಖರೀದಿ ಮಾಡುವವರಿಗೆ ಕರ್ನಾಟಕ ಸರ್ಕಾರ ಬೆಲೆ ಏರಿಕೆ ಬಿಸಿ ಮುಟ್ಟಿಸುವ ನಿರೀಕ್ಷೆ ಇದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಲು ಪ್ರಯತ್ನ ನಡೆಸುತ್ತಿರುವ ಸರ್ಕಾರ ಮುದ್ರಾಂಕ ಶುಲ್ಕವನ್ನು ಏರಿಕೆ ಮಾಡಲಿದೆ. ಇದರಿಂದಾಗಿ ಆಸ್ತಿ ಖರೀದಿ ವೆಚ್ಚವೂ ಅಧಿಕವಾಗಲಿದೆ.
ನಿವೇಶನ, ಕಟ್ಟಡ, ಭೂಮಿ ಸೇರಿದಂತೆ ಸ್ಥಿರಾಸ್ತಿಯ ಮಾರ್ಗಸೂಚಿ ದರಗಳು ಅಕ್ಟೋಬರ್‌ನಲ್ಲಿ ಏರಿಕೆಯಾಗಲಿವೆ. ಇದರಿಂದಾಗಿ ಮುದ್ರಾಂಕ ಶುಲ್ಕಗಳು ಸಹಜವಾಗಿಯೇ ಏರಲಿದೆ. ಕಂದಾಯ ಇಲಾಖೆ ಈಗಾಗಲೇ ಪರಿಷ್ಕರಣೆಗೆ ಬೇಕಾದ ತಯಾರಿಯನ್ನು ಆರಂಭ ಮಾಡಿದೆ.

ಕಂದಾಯ ಇಲಾಖೆ ರಾಜ್ಯದ ಎಲ್ಲಾ ಆಸ್ತಿಗಳ ಭೂ ಮೌಲ್ಯ ಪರಿಷ್ಕರಣೆ ಸಿದ್ಧತೆಗಳನ್ನು ಆರಂಭಿಸಿದೆ. ಇದಕ್ಕಾಗಿಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಉಪ ಸಮಿತಿಯನ್ನು ರಚನೆ ಮಾಡಲಾಗಿದೆ. ಯಾವ ಮಾದರಿಯಲ್ಲಿ ಪರಿಷ್ಕರಣೆ ನಡೆಸಬೇಕು ಎಂದು ಮೊದಲ ಹಂತದಲ್ಲಿ ಸಭೆಯನ್ನು ನಡೆಸಲಾಗಿದೆ.
ಅಧಿಕಾರಿಗಳ ಜೊತೆ ಈಗಾಗಲೇ ಸಭೆಯನ್ನು ನಡೆಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಈ ಹಿಂದಿನ ವರ್ಷಗಳ ಲೆಕ್ಕಾಚಾರಗಳ ಅನ್ವಯ ಮಾರ್ಗಸೂಚಿ ದರಗಳು ಶೇ 20 ರಿಂದ ಗರಿಷ್ಠ ಶೇ 30ರ ತನಕ ಹೆಚ್ಚಾಗುವ ನಿರೀಕ್ಷೆ ಇದೆ.
ಯಾವ-ಯಾವ ಪ್ರಕ್ರಿಯೆಗಳು?; ರಾಜ್ಯದ ಕಂದಾಯ ಇಲಾಖೆಯಲ್ಲಿ ನಿವೇಶನ, ಕಟ್ಟಡ, ಭೂಮಿ ಸೇರಿದಂತೆ ಸ್ಥಿರಾಸ್ತಿಯ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡಲು ಹಲವಾರು ಪ್ರಕ್ರಿಯೆಗಳಿವೆ. ಇದಕ್ಕಾಗಿಯೇ ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ.
ಪ್ರತಿ ನೋಂದಣಾಧಿಕಾರಿಗಳ ಕಛೇರಿ ಕಳೆದ ಎರಡು ವರ್ಷದ ನೋಂದಣಿ ಮಾಹಿತಿಯನ್ನು ಅವಲೋಕನ ಮಾಡಿ, ಪರಿಷ್ಕೃತ ಮಾರ್ಗಸೂಚಿ ದರವನ್ನು ನಿಗದಿ ಮಾಡುತ್ತವೆ. ಬಳಿಕ ಇದಕ್ಕೆ ಅಂತಿಮ ಒಪ್ಪಿಗೆ ಪಡೆದು, ಆಕ್ಷೇಪಣೆಗಾಗಿ ಪ್ರಕಟಿಸಲಾಗುತ್ತದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ 5 ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಬೇಕಿದೆ. ಆದ್ದರಿಂದ ಅಕ್ಟೋಬರ್‌ನಿಂದಲೇ ಜಾರಿಗೆ ಬರುವಂತೆ ಮಾರ್ಗಸೂಚಿದರಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ. ಆಗ ಸಹಜವಾಗಿ ಮುದ್ರಾಂಕ ಶುಲ್ಕ ಏರಿಕೆಯಾಗಿ, ಆಸ್ತಿ ಖರೀದಿ ದುಬಾರಿಯಾಗುತ್ತದೆ.
ಸಚಿವ ಕೃಷ್ಣ ಬೈರೇಗೌಡರು ಕಂದಾಯ ಇಲಾಖೆ ಪ್ರಧಾನ ಕಾರ್ಯರ್ಶಿ ವಿ. ರಶ್ಮಿ ಮಹೇಶ್ ಹಾಗೂ ನೋಂದಣಿ ಮಹಾಪರಿವೀಕ್ಷಕಿ ಮತ್ತು ಆಯುಕ್ತೆ ಡಾ. ಬಿ. ಆರ್. ಮಮತಾ ಅವರಿಂದ ಮಾರ್ಗಸೂಚಿ ದರಗಳ ಹೆಚ್ಚಳದ ಕುರಿತು ಪ್ರತ್ಯೇಕವಾದ ವರದಿಯನ್ನು ಕೇಳಿದ್ದಾರೆ. ಎರಡು ವರದಿಗಳನ್ನು ಅವಲೋಕಿಸಿ ಅಂತಿಮವಾಗಿ ಎಷ್ಟು ಏರಿಕೆ ಮಾಡಬೇಕು? ಎಂದು ತೀರ್ಮಾನ ಕೈಗೊಳ್ಳಲಾಗುತ್ತದೆ.
ಈ ಬಾರಿಯ ಬಜೆಟ್‌ನಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಗದರ್ಶಿ ದರವನ್ನು ಶೇ 15ರಷ್ಟು ಹೆಚ್ಚಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಆದರೆ ಈಗ ಕಂದಾಯ ಮತ್ತು ನೋಂದಣಿ ಆಯುಕ್ತರಿಂದ ವರದಿಯನ್ನು ಪಡೆದ ಬಳಿಕ ಮಾರ್ಗಸೂಚಿ ದರವನ್ನು ಶೇ 20ರಷ್ಟು ಏರಿಕೆ ಮಾಡುವ ನಿರೀಕ್ಷೆ ಇದೆ.
ಕಳೆದ 5 ವರ್ಷಗಳಿಂದ ಮಾರ್ಗಸೂಚಿ ದರವನ್ನು ಏರಿಕೆ ಮಾಡಿಲ್ಲ ಕೋವಿಡ್ ಅವಧಿಯಲ್ಲಿ ಹಾಲಿ ದರದಲ್ಲಿ ರಿಬೇಟ್ ನೀಡಿ, ಕನಿಷ್ಠ ಪ್ರಮಾಣದ ಸಂಪನ್ಮೂಲ ಸಂಗ್ರಹಕ್ಕೆ ಹಿಂದಿನ ಬಿಜೆಪಿ ಸರ್ಕಾರ ಯತ್ನಿಸಿತ್ತು. ಹೀಗಾಗಿ ಹಿಂದಿನ ವರ್ಷಗಳ ರಿಬೇಟ್ ದರಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಶೇ 20ರಷ್ಟು ಏರಿಕೆ ಮಾಡಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.
ಜನರು ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ ಪಾವತಿ ಮಾಡುವ ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದಲೇ ಸರ್ಕಾರಕ್ಕೆ ಅಪಾರವಾದ ಆದಾಯ ಬರುತ್ತದೆ. ಮಾರ್ಗಸೂಚಿ ದರಗಳನ್ನು ಎಷ್ಟು ಏರಿಕೆ ಮಾಡಲಾಗುತ್ತದೆ ಎನ್ನುವುದರ ಆಧಾರದ ಮೇಲೆ ಶುಲ್ಕಗಳು ನಿಗದಿಯಾಗುತ್ತದೆ. ಆದರೆ ಮಾರ್ಗಸೂಚಿ ದರಗಳು ನಗರ ಮತ್ತು ಗ್ರಾಮೀಣ ಪ್ರದೇಶದ ನಡುವೆ ವ್ಯತ್ಯಾಸವಾಗುತ್ತದೆ. ನಗರ ಪ್ರದೇಶದಲ್ಲಿ ಯಾವಾಗಲೂ ದರ ಹೆಚ್ಚಿರುತ್ತದೆ.












Click it and Unblock the Notifications