SSLC Exam 2: ಶಿಕ್ಷಕರ ಒತ್ತಾಯಕ್ಕೆ ಮಣಿದ ಸರ್ಕಾರ, ಎಸ್‌ಎಸ್‌ಎಲ್‌ಸಿ ಪರೀಕ್ಷೆ -2 ದಿನಾಂಕ ಮುಂದೂಡಿಕೆ
ಬೆಂಗಳೂರು, ಮೇ. 18: ಸರ್ಕಾರಿ ನೌಕರರ ಒತ್ತಾಯಕ್ಕೆ ಮಣಿದಿರುವ ಸರ್ಕಾರ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ 1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಡೆಸುವ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಮುಂದೂಡಿದೆ. ಇದರ ಜೊತೆಗೆ ಜೂನ್ 07 ರಿಂದ ನಡೆಯಬೇಕಿದ್ದ ಎಸ್. ಎಸ್.ಎಲ್.ಸಿ ಪರೀಕ್ಷೆ-2 (Karnataka SSLC 2024 Exam 2) ಅನ್ನು ಮುಂದೂಡಿದೆ.
ಇದೇ ತಿಂಗಳ ಮೇ.15 ರಿಂದ ಆರಂಭವಾಗಿದ್ದ ಎಸ್ಎಸ್ಎಲ್ಸಿ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಮುಂದೂಡಿಕೆ ಮಾಡಿದೆ. ಮೇ 29 ರಿಂದ ಜೂನ್ 13ರ ವರೆಗೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಶಿಕ್ಷಣ ಇಲಾಖೆ ನೀಡಿದ್ದ ಆದೇಶಕ್ಕೆ ಸರ್ಕಾರಿ ನೌಕರರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.

ಜೂ.14 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಆರಂಭ
ವಿಶೇಷ ಬೋಧನ ತರಗತಿಗಳನ್ನು ಮುಂದೂಡಿರುವ ಜೊತೆಯಲ್ಲಿಯೇ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 07 ರಿಂದ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಅನ್ನು ಕೂಡ ಮುಂದೂಡಲಾಗಿದೆ. ಜೂನ್ 14 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧಾರಿಸಿದೆ.
ಎಸ್ಎಸ್ಎಲ್‌ಸಿ ಪರೀಕ್ಷೆ-2 ಜೂನ್ 14ರಿಂದ ಆರಂಭವಾಗಲಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇದೇ ತಿಂಗಳ ಮೇ.9 ರಂದು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿತ್ತು.

ಮೇ.15 ರಿಂದ ವಿಶೇಷ ತರಗತಿಗಳಿಗೆ ಶಿಕ್ಷಕರಿಂದ ತೀವ್ರ ಅಸಮಾಧಾನ
ಇತ್ತ, ಫಲಿತಾಂಶ ಕುಸಿದಿದ್ದ ಕಾರಣ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇ 13 ರಂದು ಈ ಭಾರಿಯ ಎಸ್.ಎಸ್.ಎಲ್.ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಅವಧಿಯಲ್ಲಿ ಪುನರ್ಬಲನ ತರಗತಿಗಳನ್ನು ತೆಗೆದುಕೊಳ್ಳಲು ಸಹಶಿಕ್ಷಕರು ಶಾಲಾ ಕರ್ತವ್ಯಕ್ಕೆ ಹಾಜರಾಗಬೇಕೆಂದು ಆದೇಶಿಸಿದ್ದರು. ಇದಕ್ಕೆ ಶಿಕ್ಷಕರ ಸಮುದಾಯದಲ್ಲಿ ತೀವ್ರ ಅಸಮಾಧಾನ, ಆಕ್ರೋಶ ಉಂಟಾಗಿತ್ತು.
ಸಹಶಿಕ್ಷಕರು ರಜೆ ಅವಧಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೆಲಸಕ್ಕೆ ಹಾಜರಾಗಿದ್ದಾರೆ. ರಜಾ ಅವಧಿಗಳಲ್ಲಿ ಚುನಾವಣಾ ಕರ್ತವ್ಯಗಳಾದ ಚೆಕ್‌ಪೋಸ್ಟ್, ಸೆಕ್ಟರ್, ಮಾಸ್ಟರ್ ಟ್ರೈನರ್ ಬಿ.ಎಲ್.ಓ ನಿಯೋಜನೆ ಹೀಗೆ ಹಲವಾರು ಕೆಲಸ ಮಾಡಿದ್ದಾರೆ. ಶಿಕ್ಷಕರು ಇಲಾಖೆ ಕಾರ್ಯದ ಹೊರತಾಗಿ ಸಿಕ್ಕಿರುವ ಮೇ ಒಂದೇ ತಿಂಗಳ ರಜೆ ಅವಧಿಯಲ್ಲಿ ತಮ್ಮ ಕುಟುಂಬ, ಮಕ್ಕಳ ಶೈಕ್ಷಣಿಕ ಪ್ರವೇಶ, ಮನೆ ಸ್ಥಳಾಂತರ ಸೇರಿ ಹಲವು ಕೆಲಸ ಇರುತ್ತದೆ. ಹಿಂದಿಂದಲೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಕ್ಟೋಬರ್ 02 ರಿಂದ ಅಕ್ಟೋಬರ್ 30 ರವರೆಗೆ ದಸರಾ ರಜೆ ನೀಡಲಾಗುತ್ತಿತ್ತು. ಹಾಗೂ ಏಪ್ರಿಲ್ 10 ರಿಂದ ಮೇ 29 ರವರೆಗೆ ಬೇಸಿಗೆ ರಜೆಯನ್ನು ನೀಡಲಾಗುತ್ತಿತ್ತು ಎಂದು ಸರ್ಕಾರಿ ನೌಕರರ ಸಂಘ ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು.
ಹಲವು ಅಂಶಗಳನ್ನು ಗಮನಿಸಿ 2024ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಮೇ 15 ರಿಂದ ನಿಗದಿಪಡಿಸಿರುವ ಪುನರ್ಬಲನ ತರಗತಿಗಳನ್ನು ಮೇ 29 ರಿಂದ ಜೂನ್ 06 ರವರೆಗೆ ಆಯೋಜಿಸಬೇಕು ಎಂದು ಮನವಿ ಮಾಡಿತ್ತು. ಈ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಪರೀಕ್ಷೆ ಮತ್ತು ವಿಶೇಷ ಬೋಧನಾ ತರಗತಿಗಳ ದಿನವನ್ನು ಮುಂದೂಡಿದೆ.











Click it and Unblock the Notifications