ಅಂತಾರಾಷ್ಟ್ರೀಯ ಥ್ರೋ ಬಾಲ್ ನಲ್ಲಿ ಹಾವೇರಿ ಹೈದನ ಕಮಾಲ್!
ಹಾವೇರಿ, ಜೂನ್ 09 : ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಯೊಬ್ಬ ಥ್ರೋ ಬಾಲ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದ್ದು, ಈ ಪ್ರತಿಭಾವಂತ ಕ್ರೀಡಾಪಟುವಿನ ಸಾಧನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಹೌದು, ಇತ್ತೀಚೆಗೆ ಛತ್ತೀಸ್ಗಡದ ಭಿಲಾಯಿಯಲ್ಲಿ ನಡೆದ ಟ್ರೈಯಾಂಗುಲರ್ ಅಂತಾರಾಷ್ಟ್ರೀಯ ಥ್ರೋ ಬಾಲ್ ಲೀಗ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ತಂಡ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಶ್ರೀನಿಧಿ ಕುಲಕರ್ಣಿ ಎಲೆಮರೆ ಕಾಯಿಯಂತೆ ಅರಳುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆ.
ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ನಾಗರಾಜ ಹಾಗೂ ಜಯಶ್ರೀ ಕುಲಕರ್ಣಿ ದಂಪತಿಯ ಪುತ್ರ. ತಾಯಿ ಪೊಲೀಸ್ ಇಲಾಖೆಯಲ್ಲಿದ್ದರೆ ತಂದೆ ಕೃಷಿಕ. ಹೊಸರಿತ್ತಿಯ ಗುದ್ಪೆಪ್ಪ ಹಳ್ಳಿಕೇರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ವ್ಯಾಸಂಗ ಮಾಡಿರುವ ಶ್ರೀನಿಧಿ, ಪ್ರಸ್ತುತ ಹಾವೇರಿಯ ಕೆಎಲ್ ಇ ಸಂಸ್ಥೆಯ ಜಿಎಚ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ಕಾಲೇಜಿನ ದೈಹಿಕ ನಿರ್ದೇಶಕ ಕೊಟ್ರೇಶ್.ಡಿ.ಎಸ್ ಅವರ ಮಾರ್ಗದರ್ಶನದಲ್ಲಿ ಪ್ರಾರಂಭಿಕ ತರಬೇತಿ ಪಡೆದ ಶ್ರೀನಿಧಿಗೆ ನಂತರ ಥ್ರೋ ಬಾಲ್ ಫೆಡೆರೆಷನ್ ಆಫ್ ಇಂಡಿಯಾದಲ್ಲಿ ಹೆಚ್ಚಿನ ತರಬೇತಿ ಪಡೆದು ಈ ಮಟ್ಟಕ್ಕೆ ಬಂದು ನಿಂತಿದ್ದಾರೆ.

ಇಂಡೋ-ಥೈಲ್ಯಾಂಡ್ ಸರಣಿಗೆ ಆಯ್ಕೆ
ಈಗ ಈ ಕ್ರೀಡಾಪಟುವಿನ ಪ್ರಯಾಣ ಮತ್ತೊಂದು ದೇಶದ ಕಡೆಗೆ ಸಾಗಿದ್ದು, ಜೂನ್ 20 ರಿಂದ 24ರ ವರೆಗೆ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಇಂಡೋ-ಥೈಲ್ಯಾಂಡ್ ಅಂತಾರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಶ್ರೀನಿಧಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಥ್ರೋ ಬಾಲ್ ಫೆಡೆರೆಷನ್ ಆಪ್ ಇಂಡಿಯಾ ವಿದ್ಯಾರ್ಥಿಯ ಪ್ರತಿಭೆಗೆ ಮೆಚ್ಚಿ ತಂಡದಲ್ಲಿ ಸ್ಥಾನ ನೀಡಿದೆ.

ಶ್ರೀನಿಧಿ ಸಾಧನೆಗೆ ಮೆಚ್ಚುಗೆ
ತಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೆಎಲ್ ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕಾರ ಕೋರೆ, ಸ್ಥಳೀಯ ಆಡಳಿತ ಮಂಡಳಿಯ ಪುಂಡಲೀಕಪ್ಪ ಶಿರೂರ, ಬಸವರಾಜ ಮಾಸೂರು, ಕಾಲೇಜಿನ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಡಾ.ಸಿ.ಮಲ್ಲಣ್ಣ ಅಭಿನಂದಿಸಿದ್ದಾರೆ.

ಶ್ರೀನಿಧಿಯ ಮನದ ಮಾತುಗಳು
ಥ್ರೋ ಬಾಲ್ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಕುರಿತು ಸಂತಸ ಹಂಚಿಕೊಂಡ ಶ್ರೀನಿಧಿ, ಇದೊಂದು ಅಪೂರ್ವ ಅವಕಾಶ, ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಕಳೆದ ಟೂರ್ನಿಯಲ್ಲಿ ಯಶಸ್ಸು ಗಳಿಸಿದ್ದೇವೆ. ಮುಂದಿನ ಟೂರ್ನಿಯಲ್ಲೂ ಭಾರತ ಜಯಗಳಿಸುವ ವಿಶ್ವಾಸವಿದ್ದು, ಭಾರತ ತಂಡವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ತಿಳಿಸಿದರು.

ಒನ್ ಇಂಡಿಯಾ ಕನ್ನಡದೊಂದಿಗೆ ಶ್ರೀನಿಧಿ ತಂದೆ
ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಶ್ರೀನಿಧಿ ತಂದೆ ನಾಗರಾಜ್, ಮಗನ ಆಸಕ್ತಿಗೆ ನಾವು ಪ್ರೋತ್ಸಾಹ ನೀಡುತ್ತಿದ್ದೇವೆ. ಓದಿನಲ್ಲೂ ಮುಂದಿರುವ ಆತನಿಗೆ ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ತರಬೇತಿ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಎಷ್ಟೇ ಕಷ್ಟವಾದರೂ ಆ ಬಗ್ಗೆ ಗಮನ ಹರಿಸುತ್ತೇವೆ.

ಕಾಲೇಜಿನ ಪ್ರಾಚಾರ್ಯ ಪ್ರೊ ಎಸ್.ಬಿ.ನಾಡಗೌಡ ಪ್ರಶಂಸೆ
'ನಮ್ಮ ಕಾಲೇಜಿನ ವಿದ್ಯಾರ್ಥಿಯೊಬ್ಬ ಅಂತಾರಾಷ್ಟ್ರೀಯ ಮಟ್ಟದ ಥ್ರೋ ಬಾಲ್ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ. ಈಗಾಗಲೇ ಛತ್ತೀಸ್ ಗಡದ ಭಿಲಾಯಿನಲ್ಲಿ ಟ್ರೈಯಾಂಗಲ್ ಅಂತಾರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿ ನೇಪಾಳ ಹಾಗೂ ಬಾಂಗ್ಲಾದೇಶದ ವಿರುದ್ಧ ಟೂರ್ನಿಯಲ್ಲಿ ಜಯಗಳಿಸಲು ಪ್ರಮುಖ ಪಾತ್ರ ವಹಿಸಿರುವ ಶ್ರೀನಿಧಿಗೆ ಇಂಡೋ-ಥೈಲ್ಯಾಂಡ್ ಟೂರ್ನಿಯಲ್ಲಿ ಯಶಸ್ಸು ದೊರೆಯಲೆಂದು ಹಾರೈಸುತ್ತೇವೆ' ಎಂದು ಕೆಎಲ್ ಇ ಸಂಸ್ಥೆಯ ಜಿಎಚ್ ಕಾಲೇಜಿನ ಪ್ರಾಚಾರ್ಯ ಪ್ರೊ ಎಸ್.ಬಿ.ನಾಡಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸೂಕ್ತ ಮಾರ್ಗದರ್ಶನ ಹಾಗೂ ಸಹಕಾರದ ಅಗತ್ಯ
ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಕ್ರೀಡೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಶ್ರೀನಿಧಿ ಕುಲಕರ್ಣಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಹಕಾರದ ಅಗತ್ಯವಿದ್ದು, ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಆತನ ನೆರವಿಗೆ ದಾವಿಸಬೇಕಿದೆ.












Click it and Unblock the Notifications