ಅತ್ಯಾಚಾರ ಆರೋಪಿ ಶಾಸಕ ಜೀವರಾಜ್ ನಾಪತ್ತೆ

2010ರಲ್ಲಿ ಯುವತಿಯ ಅಪಹರಣ/ ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಜೀವರಾಜ್ ಆರೋಪ ಎದುರಿಸುತ್ತಿದ್ದಾರೆ. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೋಭಿತ್ ಈ ದೂರು ದಾಖಲಿಸಿದ್ದಾರೆ. ನಾಪತ್ತೆಯಾಗಿರುವ ಆರೋಪಿ ಶಾಸಕ ಜೀವರಾಜ್ ಪತ್ತೆಗಾಗಿ ಶೋಧ ಕಾರ್ಯ ನಡೆಸಿ, ಅವರನ್ನು ಪತ್ತೆಹಚ್ಚಿಕೊಡುವಂತೆ ದೂರಿನಲ್ಲಿ ಪೊಲೀಸರನ್ನು ಕೋರಿದ್ದಾರೆ.
ಶಾಸಕ ಜೀವರಾಜ್ ಕಳೆದ 10 ದಿನಗಳಿಂದ ಕಾಣೆಯಾಗಿದ್ದಾರೆ. ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕೊಪ್ಪದ ಮೇಗೂರು ಕೃಷಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಶೋಭಿತ್ ದೂರಿದ್ದಾರೆ.
ಜಿಲ್ಲಾಧಿಕಾರಿ, ಪ್ರಾದೇಶಿಕ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಶೃಂಗೇರಿ ಭಾಗದ ರೈತ ಸಮಸ್ಯೆಗಳನ್ನು ಪರಿಹರಿಸಲು ಸಾರ್ವಜನಿಕ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಆದರೆ ಅಲ್ಲೆಲ್ಲೂ ಸ್ಥಳೀಯ ಶಾಸಕರ ಸುಳಿವಿಲ್ಲ. ಇದರಿಂದ ಜನರಲ್ಲಿ ಸಂದೇಹ ಎದ್ದಿದೆ. ಆದ್ದರಿಂದ ನಮ್ಮ ಶಾಸಕರು ಎಲ್ಲೇ ಇದ್ದರೂ ಅವರನ್ನು ಹುಡುಕಿಕೊಡಬೇಕಾಗಿ ಪ್ರಾರ್ಥನೆ ಎಂದು ಕಾಂಗ್ರೆಸ್ ನಾಯಕ ಶೋಭಿತ್ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಕೊಪ್ಪ ಪೊಲೀಸರು ನವೆಂಬರ್ 8ರಂದು ಶೃಂಗೇರಿಯ ಬಿಜೆಪಿ ಶಾಸಕ ಜೀವರಾಜ್ ಅವರ ವಿರುದ್ಧ ಯುವತಿಯೊಬ್ಬರ ಅಪಹರಣ, ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಜಿಲ್ಲೆಯ 23 ವರ್ಷದ ಬಾಧಿತ ಯುವತಿಯು ಶಾಸಕ ಜೀವರಾಜ್ ಅವರು ತಮ್ಮ ಇಬ್ಬರು ಸಹವರ್ತಿಗಳ ನೆರವಿನಿಂದ ಕೆಸಕಿ ಗ್ರಾಮದಲ್ಲಿ ವಾಹನದಲ್ಲಿ ನನ್ನನ್ನು ಅಪಹರಿಸಿ, ಅತ್ಯಾಚಾರಕ್ಕೀಡುಮಾಡಿದರು ಎಂದು ದೂರಿನಲ್ಲಿ ಹೇಳಿದ್ದಾಳೆ. ಆದರೆ ಶಾಸಕ ಜೀವರಾಜ್ ಅವರು ಈ ಆರೋಪವನ್ನು ಅಲ್ಲಗಳೆದಿದ್ದು, ಹಣ ಕೀಳಲು ನನ್ನ ವಿರುದ್ಧ ನಡೆದಿರುವ ಪಿತೂರಿ ಇದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications