Spandana Death: ಮಲಗಿದ್ದ ಅತ್ತಿಗೆ ಮತ್ತೆ ಏಳಲೇ ಇಲ್ಲ- ನಟ ಶ್ರೀಮುರಳಿ ಕಣ್ಣೀರು
ಬೆಂಗಳೂರು, ಆಗಸ್ಟ್ 07: ಸ್ಯಾಂಡಲ್‌ವುಡ್ ಖ್ಯಾತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ರಾಘವೇಂದ್ರ ನಿನ್ನೆ( ಆಗಸ್ಟ್ 06) ರಂದು ವಿದೇಶಿ ಪ್ರವಾಸದಲ್ಲಿರುವ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸ್ಪಂದನಾ ಅವರ ಅಕಾಲಿಕ ನಿಧನ ಕುಟುಂಬಸ್ಥರಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿದ್ದು, ಅತ್ತಿಗೆಯ ಅಗಲಿಕೆ ಬಗ್ಗೆ ನಟ ಶ್ರೀ ಮುರಳಿ ಮಾತನಾಡಿದ್ದು, ಮಲಗಿದ್ದ ಅತ್ತಿಗೆ ಮತ್ತೆ ಏಳಲೇ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಸ್ಪಂದನಾ ರಾಘವೇಂದ್ರ ಅವರು ನಿಧನರಾಗಿರುವುದು ಹೌದು. ಅಣ್ಣ ಕರೆ ಮಾಡಿ ಹೇಳಿದರು. ಅತ್ತಿಗೆ ಅವರ ಕುಟುಂಬಸ್ಥರ ಜೊತೆ ವಿದೇಶಿ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಮಲಗಿದ್ದ ಸಂದರ್ಭದಲ್ಲಿ ಮತ್ತೆ ಏಳಲೇ ಇಲ್ಲ. ಸದ್ಯಕ್ಕೆ ನಾವು ಲೋ ಬಿ.ಪಿ ಎಂದುಕೊಂಡಿದ್ದೇವೆ. ನಾಳೆ ಮೃತದೇಹ ಬೆಂಗಳೂರಿಗೆ ಬರಲಿದೆ. ಬಂದ ಮೇಲೆ ಉಳಿದ ವಿಚಾರ ತಿಳಿಯುತ್ತದೆ ಎಂದರು.
ಇನ್ನು ಮುಂದಿನ ವಿಚಾರಗಳು ಏನು ಎಂದು ತಿಳಿದಿಲ್ಲ. ನಾಳೆ ಬಂದ ಮೇಲೆ ಉಳಿದ ವಿಚಾರಗಳ ಬಗ್ಗೆ ಮಾತನಾಡೋಣ. ಸದ್ಯಕ್ಕೆ ಅವರು ನಮ್ಮನ್ನು ಅಗಲಿರುವುದಂತೂ ಹೌದು ಎಂದು ಶ್ರೀ ಮುರಳಿ ಕಣ್ಣೀರಾಗಿದ್ದಾರೆ.

ಸ್ಪಂದನಾ ತಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ವಿಜಯ ರಾಘವೇಂದ್ರ ನಿನ್ನೆಯೇ ಬ್ಯಾಂಕಾಕ್‌ಗೆ ತೆರಳಿದ್ದಾರೆ. ಇನ್ನು ಇಂದು ಸ್ಪಂದನಾ ಅವರ ಕುಟುಂಬಸ್ಥರು ಬ್ಯಾಂಕಾಕ್‌ಗೆ ತೆರಳುತ್ತಿದ್ದಾರೆ. ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್ನಲ್ಲೇ ನಡೆಯಲಿದ್ದು, ನಾಳೆ (ಆಗಸ್ಟ್ 8)ಕ್ಕೆ ಮೃತದೇಹ ಬೆಂಗಳೂರಿಗೆ ಬರಲಿದೆ.
ಸ್ಪಂದನಾ ಅವರು ರವಿಚಂದ್ರನ್ ನಿರ್ದೇಶನದ ಅಪೂರ್ವ ಸಿನಿಮಾದಲ್ಲಿ ಅಭಿನಯಿಸಿದ್ದರು. ಅಪೂರ್ವ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ವಿಜಯ್ ರಾಘವೇಂದ್ರ ಅಭಿನಯದ ಕೆಲ ಸಿನಿಮಾಗಳಲ್ಲಿ ನಿರ್ಮಾಪಕಿಯಾಗಿ ಸಹ ಕನ್ನಡ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿದ್ದರು.












Click it and Unblock the Notifications