Government Employee: ಕರ್ನಾಟಕದ ಸರ್ಕಾರಿ ನೌಕರರಿಗೆ ವಿಶೇಷ ಸಂಭಾವನೆ
ಬೆಂಗಳೂರು, ಮಾರ್ಚ್ 31: 2024ರ ಹಣಕಾಸು ವರ್ಷ ಅಂತ್ಯಗೊಂಡು ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಹಣಕಾಸು ವರ್ಷದ ಅಂತ್ಯದಲ್ಲಿ ಸರ್ಕಾರಿ ನೌಕರರು ಹೆಚ್ಚು ಕೆಲಸವನ್ನು ಮಾಡಿದ್ದಾರೆ. ಅದರಲ್ಲೂ ಖಜಾನೆ ಇಲಾಖೆಯು ಅಧಿಕಾರಿ/ ಸಿಬ್ಬಂದಿಗಳು ವರ್ಷಾಂತ್ಯದ ಬಿಲ್ಲುಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಕೆಲಸ ಮಾಡಿದ್ದಾರೆ. ಆದ್ದಿರಿಂದ ವಿಶೇಷ ಸಂಭಾವನೆ ನೀಡಬೇಕು ಎಂದು ಬೇಡಿಕೆ ಇಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರು ಆಯುಕ್ತರು ಖಜಾನೆ ಇಲಾಖೆ ಇವರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರ ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳ ತಿರುವಳಿಯಲ್ಲಿ ಹೆಚ್ಚುವರಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ ನೌಕರರಿಗೆ ವಿಶೇಷ ಸಂಭಾವನೆ ಮಂಜೂರು ಮಾಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಇಲಾಖಾ ಅಧಿಕಾರಿ ಮತ್ತು ನೌಕರರ ಮನವಿ ಪತ್ರ ದಿನಾಂಕ 27-1-2025 ಉಲ್ಲೇಖಿಸಲಾಗಿದೆ.

ಪತ್ರದ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ ಖಜಾನೆ ಇಲಾಖೆಯು 3 ಸಾವಿರ ಸಿಬ್ಬಂದಿಗಳನ್ನು ಹೊಂದಿದ್ದು, ಈ ಸಿಬ್ಬಂದಿಗಳು ವರ್ಷಾಂತ್ಯದಲ್ಲಿ ಆರ್ಥಿಕ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ವೇತನ ಭತ್ಯೆಗಳ ಪಾವತಿ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಬಿಲ್‌ಗಳ ಪಾವತಿಗಳನ್ನು ಆರ್ಥಿಕ ವರ್ಷಾಂತ್ಯದಲ್ಲಿ ತಿರುವಳಿ ಮಾಡುವುದು ಅನಿವಾರ್ಯವಾಗಿದ್ದು, ಇಂತಹ ಸಂದರ್ಭಗಳಲ್ಲಿ ಇಲಾಖೆಯ ಅಧಿಕಾರಿ/ ನೌಕರರು ಹಗಲಿರುಳು ಕರ್ತವ್ಯ ನಿರ್ವಹಿಸಬೇಕಾಗಿರುವುದು ಸ್ಪಷ್ಟವಾಗಿರುತ್ತದೆ.
ಮುಂದವರೆದು ಈ ಹಿಂದೆ 6ನೇ ವೇತನ ಆಯೋಗದ ಶಿಫಾರಸ್ಸಿನಲ್ಲಿ ಇಲಾಖೆಯಲ್ಲಿ ಹೆಚ್ಚುವರಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ ನೌಕರರಿಗೆ ಮಾಸಿಕ ಮೂಲ ವೇತನದ ಅರ್ಧ ಮೊತ್ತವನ್ನು ವಿಶೇಷ ಸಂಭಾವನೆಯಾಗಿ ಮಂಜೂರು ಮಾಡಲು ಶಿಫಾರಸ್ಸು ಮಾಡಿರುತ್ತದೆ. ಹಾಗೂ ಅಂಗೀಕರಿಸಲಾಗಿದೆ ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.
ಇಲಾಖೆಯಲ್ಲಿನ ಎಲ್ಲಾ ವೃಂದಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಇದರಿಂದಾಗಿ ಇಲಾಖೆಯಲ್ಲಿನ ಅಧಿಕಾರಿ/ ನೌಕರರು ವರ್ಷಪೂರ್ತಿ ಕಾರ್ಯ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
ಸರ್ಕಾರವು ಕರ್ನಾಟಕ ವಿಧಾನ ಮಂಡಲದ ಅಧಿವೇಶನದ ಸಮಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು, ಆಯ್ಯವ್ಯಯ ಅಂದಾಜು ತಯಾರಿಕೆ ಕಾರ್ಯದಲ್ಲಿ ಭಾಗವಹಿಸುವ ಆರ್ಥಿಕ ಇಲಾಖೆಯ ಅಧಿಕಾರಿ/ ನೌಕರರು ಹಾಗೂ ಸಾರ್ವತ್ರಿಕ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ವಿಶೇಷ ಸಂಭಾವನೆಯನ್ನು ನೀಡುತ್ತಿದೆ.
ಈ ಮಾದರಿಯಲ್ಲೇ ಖಜಾನೆಗಳಲ್ಲಿ ಆರ್ಥಿಕ ವರ್ಷಾಂತ್ಯದ ಬಿಲ್‌ಗಳ ತಿರುವಳಿಯಲ್ಲಿ ಹೆಚ್ಚುವರಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ ನೌಕರರಿಗೆ ಒಂದು ತಿಂಗಳ ಮೂಲ ವೇತನವನ್ನು ವಿಶೇಷ ಸಂಭಾವನೆಯಾಗಿ ಮಂಜೂರು ಮಾಡಲು ತಮ್ಮಲ್ಲಿ ಕೋರಿದೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಹೆಚ್.ಎ. ಶೋಭಾ, ಸರ್ಕಾರದ ಜಂಟಿ ಕಾರ್ಯದರ್ಶಿ ಆರ್ಥಿಕ ಇಲಾಖೆ (ಎಫ್.ಆರ್ & ಬಿ.ಸಿ.ಸಿ) ಸುತ್ತೋಲೆಯೊಂದನ್ನು ಹೊರಡಿಸಿದ್ದರು. ಇದು ಖಜಾನೆಗಳಲ್ಲಿ ವರ್ಷಾಂತ್ಯದಲ್ಲಿ ಬಿಲ್ಲುಗಳನ್ನು ಮಾರ್ಚ್ 31ರಂದೇ ತೀರ್ಣಗೊಳಿಸಿ ಲೆಕ್ಕವನ್ನು ಮುಕ್ತಾಯಗೊಳಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿತ್ತು.
2024-25ನೇ ಸಾಲಿಗೆ ವರ್ಷಾಂತ್ಯದಲ್ಲಿ ಬಿಲ್ಲುಗಳನ್ನು ಖಜಾನೆಗಳಿಗೆ ಸಲ್ಲಿಸಲು ಸರ್ಕಾರಿ ಅದೇಶಗಳಲ್ಲಿ ಕಾಲಮಿತಿ ಸೂಚಿಸಿ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿತ್ತು. ಪ್ರಸ್ತುತ, ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ ಆದೇಶಿಸಲಾಗಿದೆ ಎಂದು ಹೇಳಿದ್ದರು.
2024-25ನೇ ಸಾಲಿಗೆ ಸಂಬಂಧಿಸಿದಂತೆ ಎಲ್ಲಾ ಬಿಲ್ಲುಗಳನ್ನು (ಅನುದಾನ ಲಭ್ಯವಿದ್ದಲ್ಲಿ ವೇತನ ಬಾಕಿ ಬಿಲ್ಲುಗಳು ಸೇರಿದಂತೆ) ದಿನಾಂಕ 29,3.2025 ಹಾಗೂ 30.03.2025 ರಂದು 5.30 ರವರೆಗೆ ಖಜಾನೆಯಲ್ಲಿ ಸ್ವೀಕರಿಸುವಂತೆ ಅದೇಶಿಸಲಾಗಿದೆ.
ಮೇಲಿನಂತ ನಿಗದಿತ ಸಮಯದೊಳಗೆ ಆನ್‌ಲೈನಲ್ಲಿ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸಿದ ನಂತರ ತತ್ಸಂಬಂಧ ಭೌತಿಕ ಪ್ರತಿಗಳನ್ನೂ ಸಹಾ ತಪ್ಪದೇ ಖಜಾನೆಗೆ ಸಲ್ಲಿಸುವುದು ಡಿ.ಡಿ.ಓ ಅವರ ಜವಾಬ್ದಾರಿಯಾಗಿರುತ್ತದೆ. ಖಜಾನೆಯು ದಿನಾಂಕ 29.3.2025 ರಂದು ಹಾಗೂ ದಿನಾಂಕ 30.3.2025 ರಂದು ಸಂಜೆ 5.30 ರವರೆಗೆ ತೆರೆದಿರತಕ್ಕದ್ದೆಂದು ಆದೇಶಿಸಿದೆ ಎಂದು ಹೇಳಿದ್ದರು.












Click it and Unblock the Notifications