Yuva Nidhi Scheme: ಕಾಲೇಜುಗಳಲ್ಲಿಯೇ ಯುವನಿಧಿ ಯೋಜನೆಗೆ ಹೆಸರು ಸೇರಿಸಿ
ಬೆಂಗಳೂರು, ಜನವರಿ 05: ಕರ್ನಾಟಕ ಸರ್ಕಾರ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ 'ಯುವನಿಧಿ' ಸಹ ಒಂದು. ವಿದ್ಯಾವಂತ ಯುವಕ/ ಯುವತಿಯರಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಜೊತೆಗೆ ಕೌಶಲ್ಯಾಭಿವೃದ್ಧಿಗೊಳಿಸಿ, ಉದ್ಯೋಗಕ್ಕೆ ಸಜ್ಜುಗೊಳಿಸಲು ಆದ್ಯತೆ ನೀಡುವ ಯೋಜನೆ ಇದಾಗಿದೆ. 2024ರ ಜನವರಿ 12ರಂದು ಈ ಯೋಜನೆಗೆ ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಕೆಲವೇ ದಿನಗಳಲ್ಲಿ ಯೋಜನೆಗೆ ಚಾಲನೆ ಸಿಕ್ಕಿ 1 ವರ್ಷ ಆಗಲಿದೆ.
'ಯುವನಿಧಿ' ಯೋಜನೆಯಡಿ ಪದವೀಧರ ನಿರುದ್ಯೋಗಿ ಯುವಕ/ ಯುವತಿಯರಿಗೆ ಮಾಸಿಕ 3000 ರೂ.ಗಳು ಮತ್ತು ಡಿಪ್ಲೋಮಾ ಪದವೀಧರರಿಗೆ 1,500 ರೂ. ನಿರುದ್ಯೋಗ ಭತ್ಯೆಯನ್ನು ಸರ್ಕಾರ ನೀಡುತ್ತದೆ. ಯೋಜನೆಗೆ ಚಾಲನೆ ನೀಡಿ ಒಂದು ವರ್ಷ ಆಗುತ್ತಿರುವ ಹಿನ್ನಲೆಯಲ್ಲಿ ಈಗ 'ಯುವನಿಧಿ' ವಿಶೇಷ ನೋಂದಣಿ ಅಭಿಯಾನವನ್ನು ಆರಂಭಿಸಲಾಗಿದೆ.

ಈ ಕುರಿತು ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಇದು 'ಯುವನಿಧಿ' ವಿಶೇಷ ನೋಂದಣಿ ಅಭಿಯಾನವನ್ನು ದಿನಾಂಕ 06.01.2025 ರಿಂದ 20.01.2025ರ ವರೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖಾ ವ್ಯಾಪ್ತಿಯ ಕಾಲೇಜುಗಳಲ್ಲಿ ಆಯೋಜಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ದಿನಾಂಕ 02.01.2025ರ ಕೈಗಾರಿಕ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರ ಪತ್ರವನ್ನು ಉಲ್ಲೇಖಿಸಿದ್ದಾರೆ.
ಸುತ್ತೋಲೆಯ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರದ ಖಾತರಿ ಯೋಜನೆಗಳಲ್ಲಿ ಒಂದಾದ 'ಯುವನಿಧಿ' ಯೋಜನೆ ರಾಜ್ಯದ ನಿರುದ್ಯೋಗಿ ಯುವಕ/ ಯುವತಿಯರಿಗೆ ನಿರುದ್ಯೋಗಿ ಭತ್ಯೆಯನ್ನು ನೀಡಿ ಸಬಲೀಕರಣಗೊಳಿಸಲು ಜಾರಿಗೊಳಿಸಿದ ಮಹತ್ತರ ಯೋಜನೆಯಾಗಿರುತ್ತದೆ.
ಈ ಯೋಜನೆಯಡಿ ನೋಂದಣಿ ಆಗುವ ಪದವೀಧರರಿಗೆ/ ಸ್ನಾತಕೋತ್ತರ ಪದವೀಧರರಿಗೆ ಮಾಸಿಕ ರೂ. 3000 ಮತ್ತು ಡಿಪ್ಲೋಮಾ (6 ಬೋರ್ಡ್‌ಗಳಿಂದ) ತೇರ್ಗಡೆಯಾದವರಿಗೆ ಮಾಸಿಕ ರೂ.1500 ನಿರುದ್ಯೋಗ ಭತ್ಯೆಯನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತಿದೆ ಎಂದು ಹೇಳಿದೆ.
2023-24ನೇ ಸಾಲಿನಲ್ಲಿ ತೇರ್ಗಡೆಯಾದ 527273 ಅಭ್ಯರ್ಥಿಗಳ ದತ್ತಾಂಶವು ನ್ಯಾಡ್ ಪೋರ್ಟಲ್‌ನಲ್ಲಿ ಅಪ್ ಲೋಡ್ ಆಗಿದ್ದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಯುವನಿಧಿ ಯೋಜನೆಗೆ ಅಭ್ಯರ್ಥಿಗಳು ನೋಂದಣಿಯಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಯುವನಿಧಿ ಯೋಜನೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳನ್ನು ನೋಂದಾಯಿಸಲು 'ಯುವನಿಧಿ ವಿಶೇಷ ನೋಂದಣಿ ಅಭಿಯಾನ'ವನ್ನು ದಿನಾಂಕ 06.01.2025 ರಿಂದ 20.01.2025ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಅಭ್ಯರ್ಥಿಗಳಿಗೆ ಅರ್ಹತೆಗಳು
* ಕರ್ನಾಟಕದಲ್ಲಿ ವಾಸವಿರುವವರು (ಕನಿಷ್ಠ 6 ವರ್ಷಗಳ ವರೆಗೆ ಪದವಿ/ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದವರು)
* ತೇರ್ಗಡೆ ಹೊಂದಿರುವ 180 ದಿನಗಳ ನಂತರವೂ ಉದ್ಯೋಗ ದೊರಕದೆ, ಉನ್ನತ ವ್ಯಾಸಂಗಕ್ಕೆ ದಾಖಲಾಗದೆ ಇರುವ ಅಭ್ಯರ್ಥಿಗಳು ಈ ಯೋಜನೆಗೆ ಅರ್ಹರಿರುತ್ತಾರೆ.
* ಸ್ವಯಂ ಉದ್ಯೋಗ ಹೊಂದಿಲ್ಲದ ಅಭ್ಯರ್ಥಿಗಳು.
* ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವ ಅಭ್ಯರ್ಥಿಗಳು.
ಈ ಹಿನ್ನೆಲೆಯಲ್ಲಿ ಇಲಾಖಾ ವ್ಯಾಪ್ತಿಯ ಎಲ್ಲಾ ಪದವಿ/ ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೋಮಾ ಕಾಲೇಜುಗಳ ಪ್ರಾಂಶುಪಾಲರುಗಳು 2023 ಹಾಗೂ 2024ನೇ ಸಾಲಿನಲ್ಲಿ ತಮ್ಮ ಕಾಲೇಜುಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ನೋಂದಣಿಗಾಗಿ ತಮ್ಮ ಕಾಲೇಜುಗಳಲ್ಲಿ 'ಯುವನಿಧಿ' ವಿಶೇಷ ನೋಂದಣಿ ಸಹಾಯ ಕೇಂದ್ರಗಳನ್ನು ತೆರೆದು, ಕೇಂದ್ರಕ್ಕೆ ಅತ್ಯವಶ್ಯಕವಾಗಿ ಬೇಕಾದ ಗಣಕ ಯಂತ್ರ ವ್ಯವಸ್ಥೆ ಹಾಗೂ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲು ಸೂಚಿಸಲಾಗಿದೆ.
ಕಾಲೇಜು ಹಾಗೂ ಸ್ಥಳೀಯ ಮಟ್ಟದಲ್ಲಿ ಬ್ಯಾನರ್/ ಪೋಸ್ಟರ್‌ಗಳನ್ನು ಅಳವಡಿಸಿ, ವ್ಯಾಪಕ ಪ್ರಚಾರವನ್ನು ಕೈಗೊಂಡು ಅರ್ಹ ಅಭ್ಯರ್ಥಿಗಳಿಂದ ಗರಿಷ್ಠ ಮಟ್ಟದ ನೋಂದಣಿ ಮಾಡಿಸುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ.
ಕಾಲೇಜುಗಳಲ್ಲಿ ಪ್ರಾಂಶುಪಾಲರು 'ಯುವನಿಧಿ' ವಿಶೇಷ ನೋಂದಣಿ ಅಭಿಯಾನಕ್ಕಾಗಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ಅಧಿಕಾರಿಗಳು ಹಾಗೂ ಐಟಿ ಕೋ-ಆರ್ಡಿನೇಟರ್‌ಗಳಿಗೆ ಉಸ್ತುವಾರಿಯನ್ನು ವಹಿಸಿ ಅರ್ಹ ಅಭ್ಯರ್ಥಿಗಳಿಂದ ಅತಿ ಹೆಚ್ಚು ನೋಂದಣಿ ಮಾಡಿಕೊಳ್ಳಲು ಅನುಕೂಲ ಕಲ್ಪಿಸುವಂತೆ ಈ ಮೂಲಕ ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯುವನಿಧಿ ಯೋಜನೆಯ ವೆಬ್‌ಸೈಟ್ ಅನ್ನು ಸಂಪರ್ಕಿಸುವುದು. https://yuvanidhischeme.in/












Click it and Unblock the Notifications