ಪ್ರಚೋದನಕಾರಿ ಹೇಳಿಕೆ: ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ತನಿಖೆಗೆ ಆದೇಶ
ಬೆಂಗಳೂರು ಮಾ.31: ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯ ನಂತರ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಸಚಿವ ಕೆ.ಎಸ್. ಈಶ್ವರಪ್ಪಗೆ ಸಂಕಷ್ಟ ಎದುರಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಕೋಮು ವೈಷಮ್ಯದ ಹೇಳಿಕೆ ನೀಡಿದ್ದಾರೆಂದು ರಿಯಾಜ್ ಅಹಮದ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಪ್ರೀತ್. ಜೆ ಮೇ 5 ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಹಾಗಾಗಿ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಈಶ್ವರಪ್ಪ ಇದೀಗ ಕಷ್ಟಕ್ಕೆ ಸಿಲುಕಿದ್ದು, ಎಫ್‌ಐಆರ್ ಮತ್ತು ತನಿಖೆ ಎದುರಿಸಲೇಬೇಕಾಗಿದೆ.
ಅವರಷ್ಟೇ ಅಲ್ಲ, ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಎಸ್ ಎನ್ ಚನ್ನಬಸಪ್ಪ ವಿರುದ್ಧವೂ ಕೋಮುದ್ವೇಷ ಕೆರಳಿಸುವಂತಹ ಹೇಳಿಕೆ ದೂರು ದಾಖಲಾಗಿದ್ದು, ಅವರ ವಿರುದ್ಧವೂ ನ್ಯಾಯಾಲಯ ತನಿಖೆಗೆ ಆದೇಶ ನೀಡಿದೆ.
ರಿಯಾಜ್ ಅಹ್ಮದ್ ಪರ ವಕೀಲರು, ಆರೋಪಿಗಳಾದ ಈಶ್ವರಪ್ಪ ಮತ್ತು ಚೆನ್ನಬಸಪ್ಪ ಅವರ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್ 124(ಎ), 153(ಎ), 153(ಬಿ), 295(ಎ), 295(ಬಿ), 505(2) ಮತ್ತು 504 ಜೊತೆಗೆ ಸೆಕ್ಷನ್ 34ರ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ದೊಡ್ಡಪೇಟೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.

ಏನಿದು ಪ್ರಕರಣ?:
ಫೆಬ್ರವರಿ 20ರಂದು ರಾತ್ರಿ 9 ಗಂಟೆ ಸುಮಾರಿಗೆ ಹರ್ಷ ಕೊಲೆಯಾಗಿತ್ತು. ಮರುದಿನವೇ ಶಿವಮೊಗ್ಗದಲ್ಲಿ ನಡೆದಿದ್ದ ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಗೆ ಮುಸ್ಲಿಂ ಗೂಂಡಾಗಳೇ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಬಹಿರಂಗವಾಗಿ ಆರೋಪಿಸಿದ್ದರು.
ಅಷ್ಟೇ ಅಲ್ಲದೆ, ಮುಸಲ್ಮಾನ ಗೂಂಡಾಗಳು ಹರ್ಷ ಎಂಬ ಯುವಕನನ್ನು ಕೊಲೆ ಮಾಡಿದ್ದು, ಈ ಹಿಂದೆ ಮುಸಲ್ಮಾನರು ಶಿವಮೊಗ್ಗದಲ್ಲಿ ಎಂದೂ ಬಾಲ ಬಿಚ್ಚಿರಲಿಲ್ಲ, ಈಗ ಬಾಲ ಬಿಚ್ಟಿದ್ದಾರೆ, ಹೀಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು.
ಅಂತೆಯೇ ಚನ್ನಬಸಪ್ಪ ಕೂಡ ''ಪೊಲೀಸರ ಹೆಣ ಬೀಳಬೇಕು. ಪ್ರತಿ ಸಲವೂ ಅವರನ್ನು ಕಳಕೋ, ಇವರನ್ನು ಕಳಕೋ ಎಂಬಂತಾಗಿದೆ. ನಾವು ಯಾವತ್ತೂ ಹಿಂದೂಗಳನ್ನೇ ಕಳೆದುಕೊಂಡಿರುವುದು. ಪೊಲೀಸ್ ನಾಮರ್ದ ಇಲಾಖೆ. ಇಲ್ಲಿ ಆರಕ್ಷಕ ಇಲಾಖೆಯ ವೈಫಲ್ಯ, ದೌರ್ಬಲ್ಯ ಇದೆ. ಆರಕ್ಷಕರು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ'' ಎಂದು ಆರೋಪಿಸಿದ್ದರು.
ಉಭಯ ನಾಯಕರ ಪ್ರಚೋದನಾಕಾರಿ ಹೇಳಿಕೆಯ ಬೆನ್ನಲ್ಲೇ ಮುಸ್ಲಿಮ್ ಸಮುದಾಯದವರ ಮನೆ, ಅಂಗಡಿಗಳ ಮೇಲೆ ದಾಳಿ ನಡೆದಿತ್ತು. ಆಗ ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದರು. ನಿಷೇಧಾಜ್ಞೆ ಜಾರಿಯಿದ್ದರೂ ಸಹ ಇಂತಹ ಘಟನೆ ಸಂಭವಿಸಿದೆ. ಜನಪ್ರತಿನಿಧಿಗಳಾಗಿದ್ದುಕೊಂಡು ಪ್ರಚೋದನಾಕಾರಿಯಾಗಿ ಮಾತನಾಡಿದ ಉಭಯ ನಾಯಕರ ವಿರುದ್ದ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದರೂ ಅವರು ಪ್ರಕರಣ ದಾಖಲಿಸಿಲ್ಲ. ಪೊಲೀಸ್ ವರಿಷ್ಠಾಧಿಕಾರಿಯೂ ದೂರಿಗೆ ಪ್ರತಿಕ್ರಿಯಿಸಿಲ್ಲ. ಹಾಗಾಗಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.












Click it and Unblock the Notifications