'ಅಯೋಧ್ಯೆ' ರಾಮಮಂದಿದತ್ತ ಹೊರಟ 'ಧಾರವಾಡ'ದ ಗೊಂಗಡಿಗಳು, ಏನಿದು? ತಿಳಿಯಿರಿ
ಧಾರವಾಡ, ಜನವರಿ 04: ಇಡೀ ದೇಶವೇ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ತಲೆ ಎತ್ತಲಿರುವ ಆ ಸುದಿನ ಜನವರಿ 22ಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಶ್ರೀರಾಮನ ಪ್ರಾಣಪ್ರತಿಷ್ಠಾಪನೆಗಾಗಿ ದೇಶದ ಮೂಲೆ ಮೂಲೆಗಳಿಂದ ವಿವಿಧ ವಸ್ತುಗಳ ರವಾನೆಯಾಗುತ್ತಿದೆ. ಇದಕ್ಕೆ ಕರ್ನಾಟಕದ ವಿದ್ಯಾನಗರಿ ಧಾರವಾಡ ಹೊರತಾಗಿಲ್ಲ.
ಅಯೋಧ್ಯೆ ರಾಮಮಂದಿರವು ಲೋಕಾರ್ಪಣೆಗೆ, ಶ್ರೀರಾಮನ ಪ್ರಾಣಪ್ರತಿಷ್ಠಾಪನೆಗೆ ಸಜ್ಜಾಗಿದೆ. ಸಕಲ ರೀತಿಯ ತಯಾರಿಗಳು ನಡೆದಿವೆ. ಈ ಮಧ್ಯೆ ಬೃಹತ್ ಗಂಧದ ಕಡ್ಡಿಯೊಂದು ಲಾರಿ ಮೂಲಕ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದೆ. ಇದರ ಬೆನ್ನಲ್ಲೆ ಧಾರವಾಡ ಜಿಲ್ಲೆಯ ಗೊಂಗಡಿಗಳನ್ನು ರಾಮಮಂದಿರತ್ತ ಉದ್ಘಾಟನೆಗೆಂದು ತೆಗೆದುಕೊಂಡು ಹೋಗಲಾಗುತ್ತಿದೆ.

ಹೌದು, ವಿದ್ಯಾಕಾಶಿ ಧಾರವಾಡ ವಿಶಿಷ್ಟತೆಗಳಲ್ಲಿ ವಿಶಿಷ್ಟತೆ ಹೊಂದಿದ ಜಿಲ್ಲೆ. ಈ ಜಿಲ್ಲೆಯಿಂದ ಇದೀಗ ಮರ್ಯಾದಾ ಪುರುಷೋತ್ತಮನಿಗೆ ಗೊಂಗಡಿಗಳು ಅಂದರೆ 'ಕಂಬಳಿ'ಗಳನ್ನು ಒಯ್ಯಲಾಗುತ್ತಿದೆ. ಇಲ್ಲಿನ ರೈತರು ಈ ಕಂಬಳಿಗಳನ್ನು ದೇವರ ಸ್ವರೂಪದಲ್ಲಿ ಕಾಣುತ್ತಾರೆ. ಶುಭ ಕಾರ್ಯಗಳಿಗೆ ಈ ಕಂಬಳಿಗಳು ಬೇಕೇ ಬೇಕು ಎಂಬುದು ಅವರ ನಂಬಿಕೆ.
ಶ್ರೀರಾಮನಿಗಾಗಿ ವಿಶೇಷ ಕಂಬಳಿ
ಇದೀಗ ಧಾರವಾಡದಲ್ಲಿ ಪ್ರಭು ಶ್ರೀರಾಮ ಚಂದ್ರನಿಗಾಗಿಯೇ ವಿಶೇಷವಾಗಿ ಕಂಬಳಿಗಳನ್ನು ತಯಾರಿಸಲಾಗಿದೆ. ಧಾರವಾಡದ ರೈತರ ಓಣಿ ಎಂದೇ ಕರೆಯಲಾಗುವ ಕಮಲಾಪುರ ಬಡಾವಣೆಯ ಸುಭಾಷ ರಾಯಣ್ಣವರ ಅವರು ಮೂರು ತಲೆಮಾರುಗಳಿಂದ ಕಂಬಳಿ ಕಟ್ಟುತ್ತ ಬಂದಿದ್ದಾರೆ. ಇದೀಗ ಸುಭಾಷ್ ಅವರು ಅಯೋಧ್ಯೆಗೆ ಕಳುಹಿಸಲೆಂದೇ ಎರಡು ಕಂಬಳಿಗಳನ್ನು ಕಟ್ಟಿದ್ದಾರೆ. ಅಲ್ಲದೇ ಅವುಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೂಲಕ ಅಯೋಧ್ಯೆಗೆ ಕಳುಹಿಸುವ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ.

ಕಂಬಳಿಗಳ ಅಳತೆ ಹೀಗಿವೆ
ಈ ಕಂಬಳಿಗಳು 54 ಇಂಚು ಅಗಲ 110 ಇಂಚು ಉದ್ದ ಇವೆ. ಒಟ್ಟು 14 ಉಂಡೆ ಕುರಿ ಉಣ್ಣೆಯಿಂದ ಇವುಗಳನ್ನು ಸಿದ್ಧಪಡಿಸಲಾಗಿದ್ದು, ಇವುಗಳನ್ನು ಅಯೋಧ್ಯೆ ಕಳುಹಿಸಿಕೊಡಲಾಗುವುದು ಎಂಬ ಭರವಸೆ ಸಿಕ್ಕ ಮೇಲೆಯೇ ಸುಭಾಷ ಅವರು ಈ ಕಂಬಳಿಗಳಿಗೆ ಕರಿ ಕಟ್ಟಿದ್ದಾರೆ.
ಯಾವ ಹೆಸರಿನ ಮೇಲೆ ಕರಿ ಕಟ್ಟುತ್ತಾರೋ ಆ ಕಂಬಳಿಗಳು ಅದೇ ಕೆಲಸಕ್ಕೆ ಬಳಕೆಯಾಗಬೇಕು ಎಂಬ ಪ್ರತೀತಿ ಇದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕೂಡ ಈಗ ಆ ಕಂಬಳಿಗಳನ್ನು ಅಯೋಧ್ಯೆಗೆ ತೆಗೆದುಕೊಂಡು ಹೋಗಲಿದ್ದಾರೆ.
ಒಟ್ಟಾರೆ ಧಾರವಾಡದಿಂದ ಅಯೋಧ್ಯೆ ಕಂಬಳಿಗಳು ಪೂಜೆಗಾಗಿ ಹೊರಟಿದ್ದು, ಧಾರವಾಡದ ಹಿರಿಮೆ ಹೆಚ್ಚಿಸಿವೆ. ರಾಮನ ಮೇಲೆ ಅಪಾರ ಭಕ್ತಿ ಇಟ್ಟುಕೊಂಡು ಸುಭಾಷ ರಾಯಣ್ಣವರ ಎಂಬುವವರು ಈ ಕಂಬಳಿಗಳನ್ನು ಸಿದ್ಧಪಡಿಸಿಕೊಟ್ಟಿದ್ದು, ಅವರ ಕನಸು ನನಸಾದಂತಾಗಿದೆ.












Click it and Unblock the Notifications