ಸೌಜನ್ಯ ಪ್ರಕರಣ: ಹೆಗ್ಗಡೆ ಪರ -ವಿರೋಧ ಪ್ರತಿಭಟನೆ
ಬೆಂಗಳೂರು, ಅ.20: ಸೌಜನ್ಯಾ ಸಾವು ಪ್ರಕರಣವನ್ನು ಮುಂದಿಟ್ಟುಕೊಂಡು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ತೇಜೋವಧೆ ನಡೆದಿರುವುದನ್ನು ಉಡುಪಿಯ ಪೇಜಾವರ ಮಠ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗಳು ಖಂಡಿಸಿದ್ದಾರೆ.
ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಕೊಲೆ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಸಿಒಡಿಯಿಂದ ತನಿಖೆ ಸಾಧ್ಯವಾಗದಿದ್ದರೆ ಸಿಬಿಐ ತನಿಖೆ ನಡೆಸಲಿ. ಇಂಥ ಘಟನೆಗಳು ಮುಂದೆ ನಡೆಯದಿರಲಿ ಎಂದು ಪೇಜಾವರ ಶ್ರೀಗಳು ಹೇಳಿದರು.
ಪೇಜಾವರ ಶ್ರೀಗಳು ಸೌಜನ್ಯ ಅವರ ಮನೆಗೂ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹೆಗ್ಗಡೆ ಅವರಿಗೆ ಅಪಮಾನ ಮಾಡುವುದು ಕರಾವಳಿಗೆ ಮಾಡಿದ ಅಪಮಾನ ಎಂದರು.
ಹೆಗ್ಗಡೆ ಅವರ ತೇಜೋವಧೆ ಖಂಡಿಸಿ ಪ್ರತಿಭಟನಾ ಸಭೆ ನಡೆಸಲಾಯಿತು. ಸಭೆ ಉದ್ದೇಶಿಸಿ ಮಾತನಾಡಿದ ಪೇಜಾವರ ಶ್ರೀಗಳು, 'ಶ್ರೀಕೃಷ್ಣ ಮಹಿಳೆಯರ ಮಾನರಕ್ಷಣೆಗಾಗಿ ಪಣತೊಟ್ಟಿದ್ದ. ಆದರೆ ಇಂದು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದರಿಂದ ವೇದನೆಯಾಗುತ್ತಿದೆ. ಸೌಜನ್ಯಾ ಪ್ರಕರಣದಿಂದಲೂ ನೋವಾಗಿದೆ. ಅಪರಾಧಿಗಳಿಗೆ ಶಿಕ್ಷೆಯಾಗಲಿ, ತನಿಖೆಗೆ ಬೆಂಬಲವಿದೆ ಎಂದರು.
ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ 'ಇದು ಧರ್ಮಸ್ಥಳ, ಹೆಗ್ಗಡೆಯವರಿಗೆ ಮಾಡಿರುವ ಅವಮಾನವಲ್ಲ, ಸೌಜನ್ಯಾ ಆತ್ಮಕ್ಕೆ ಮಾಡಿದ ಅವಮಾನ. ಇದು ಸೌಜನ್ಯರಹಿತ ವರ್ತನೆ. ಆಧಾರವಿಲ್ಲದ ಇಂತಹ ಆರೋಪಗಳಿಂದಾಗಿ ಹೆಗ್ಗಡೆಯವರು ತಾತ್ಕಾಲಿಕವಾಗಿ ಕುಗ್ಗಬಹುದು. ಆದರೆ ಇದರಿಂದ ಮುಂದೆ ಅವರಿಗೆ, ಅವರ ಸೇವಾಕಾರ್ಯಗಳಿಗೆ ಮತ್ತಷ್ಟು ಶಕ್ತಿ ದೊರೆಯಲಿದೆ. ವೃಥಾ ಆರೋಪ ಹೊರಿಸುವ ಪ್ರಯತ್ನ ಇದೇ ರೀತಿ ಮುಂದುವರಿದರೆ ನಾನು ಮತ್ತು ಪೇಜಾವರ ಶ್ರೀಗಳು ಹೆಗ್ಗಡೆ ಪರವಾದ ಹೋರಾಟದ ನೇತೃತ್ವ ವಹಿಸಲಿದ್ದೇವೆ' ಎಂದರು.

ಸಿಬಿಐ ತನಿಖೆಗೆ ಆಗ್ರಹ
ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕಾಂಗ್ರೆಸ್ ಸರಕಾರ ಸಿಬಿಐ ತನಿಖೆಗೆ ವಹಿಸದೆ ಮುಚ್ಚಿ ಹಾಕುವ ಹುನ್ನಾರವನ್ನು ನಡೆಸುತ್ತಿದೆ ಎಂದು ಆರೋಪಿಸಿ ಎಸ್ ಎಫ್ ಐನ ಸದಸ್ಯರು ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ದುಷ್ಕರ್ಮಿಗಳ ತಂಡವೊಂದು ವಿದ್ಯಾರ್ಥಿನಿ ಸೌಜನ್ಯಾ ಅಪಹರಿಸಿ ಅತ್ಯಾಚಾರಗೈದು ಭೀಕರವಾಗಿ ಕೊಲೈಗೈದು ಪರಾರಿಯಾಗಿದ್ದು ಪೊಲೀಸರ ಗಮನಕ್ಕೆ ಬಂದಿದ್ದರೂ ಕಾಂಗ್ರೆಸ್ ಸರಕಾರ ಸಿಬಿಐ ತನಿಖೆಗೆ ಒಪ್ಪಿಸಲು ಮೀನ ಮೇಷ ಏಣಿಸುತ್ತಿದೆ ಎಂದು ಎಸ್ ಎಫ್ ಐ ರಾಜ್ಯಾಧ್ಯಕ್ಷ ಎನ್.ಅನಂತನಾಯ್ಕ ಕಿಡಿಕಾರಿದರು.
ರಾಜ್ಯದ ಚಳವಳಿಗಾರರನ್ನು ಪೂರ್ಣ ಪ್ರಮಾಣದಲ್ಲಿ ಹತ್ತಿಕ್ಕಲು ಮಾನಸಿಕ ಅಸ್ವಸ್ಥ ವ್ಯಕ್ತಿವೊಬ್ಬನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದು ಪೊಲೀಸರ ಹೊಸ ನಾಟಕವೇ ವಿನಃ ಸೌಜನ್ಯಾಳಿಗೆ ನ್ಯಾಯ ಕೊಡಿಸುವ ಉದ್ದೇಶ ದಿಂದಲ್ಲ. ಈ ಪ್ರಕರಣದಲ್ಲಿ ಪ್ರಭಾವಿ ಶಕ್ತಿಗಳು ಕೃತ್ಯವೆಸಗಿರುವ ಶಂಕೆ ಇದೇ ಎಂದರು.

ಸಿಬಿಐ ತನಿಖೆಗೆ ಆಗ್ರಹ
ಮೈಸೂರು: ಹೆಗ್ಗಡೆ ಅವರಿಗೆ ಮಾನಹಾನಿಯಾಗುವ ರೀತಿಯಲ್ಲಿ ಅವಹೇಳನ ಮಾಡಲಾಗುತ್ತಿದೆ ಎಂದು ದಿಗಂಬರ ಜೈನ ಸಮಾಜದ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಕರ್ತರಾಗಿ, ಜನರ ಹಿತಕ್ಕಾಗಿ ಸೇವೆಸಲ್ಲಿಸುತ್ತಿದ್ದಾರೆ. ವಿಶ್ವದಾದ್ಯಂತ ಅಹಿಂಸಾ ತತ್ವವನ್ನು ಪ್ರಚಾರ ಮಾಡುತ್ತಿರುವ ಧರ್ಮಾಧಿಕಾರಿಗಳ ವಿರುದ್ಧ ತೇಜೋವಧೆ ಮತ್ತು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನ ಮಾಡಿರುವುದು ಸರಿಯಲ್ಲ.
ಪ್ರಕರಣದ ತನಿಖೆ ಸಂಬಂಧಪಟ್ಟ ಇಲಾಖೆಯ ವತಿಯಿಂದ ನಡೆಯುತ್ತಿದೆ. ಸಿಐಡಿ ತನಿಖೆ ಹಾಗೂ ಸರಕಾರ ನಡೆಸುವ ಯಾವುದೇ ತನಿಖೆಗೆ ಮುಕ್ತವಾಗಿ ಸಹಕರಿಸುವುದಾಗಿ ಧರ್ಮಾಧಿಕಾರಿಗಳು ಹೇಳಿದ್ದರೂ ಈ ರೀತಿ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಸ್.ಎನ್.ಪ್ರಕಾಶ್ ಬಾಬು ತಿಳಿಸಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹ
ಬಾಗಲಕೋಟೆ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಕೆಲವು ಹಿತಾಸಕ್ತಿಗಳು ಮಾಡುತ್ತಿರುವ ಆರೋಪ ಖಂಡನೀಯ ಎಂದು ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ ಸಂಚಾಲಕ ಶಿವಾನಂದ ಬಡಿಗೇರ ತಿಳಿಸಿದರು.
ಹಿಂದೂ ದೇವಸ್ಥಾನಗಳು ಹಾಗೂ ಧಾರ್ಮಿಕ ಮುಖಂಡರ ಮೇಲೆ ವಿನಾಕಾರಣ ಆರೋಪ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಧರ್ಮಸ್ಥಳ ಕ್ಷೇತ್ರವನ್ನು ಅವಮಾನಿಸುವ ಪ್ರಯತ್ನ ನಡೆದಿದೆ. ಮಹೇಶ ಶೆಟ್ಟಿ ಎಂಬ ವ್ಯಕ್ತಿ ಸ್ವಾರ್ಥಕ್ಕಾಗಿ ಧರ್ಮಾಧಿಕಾರಿಗಳ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
ಇತ್ತೀಚೆಗೆ ಧರ್ಮಸ್ಥಳದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಮ್ಯುನಿಸ್ಟ್ ನಾಯಕರು ಧರ್ಮಾಧಿಕಾರಿಗಳ ಬಗ್ಗೆ ಲಂಗು ಲಗಾಮಿಲ್ಲದೇ ಮಾತನಾಡಿದ್ದಾರೆ. ಧರ್ಮಸ್ಥಳದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವವರು ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಸಿಬಿಐ ತನಿಖೆಗೆ ಆಗ್ರಹ
ಬೆಂಗಳೂರು: ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ಪ್ರಟಿಭಟನೆ ಹಮ್ಮಿಕೊಳ್ಳಲಾಗಿದೆ. ಸೋಮವಾರ(ಅ.21) ನಡೆಯಲಿರುವ ಈ ಪ್ರತಿಭಟನೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(AIDWA), ಡೆಮಾಕ್ರಟಿಕ್ ಯೂಥ್ ಫೆಡೆರೇಷನ್ ಆಫ್ ಇಂಡಿಯಾ(DYFI) ಆಯೋಜಿಸಿದೆ.
ನಗರದ ಮೈಸೂರು ಸರ್ಕಲ್ ವೃತ್ತದಿಂದ ಮಧ್ಯಾಹ್ನ 12 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕಾರ್ಯದರ್ಶಿ ವಿ. ಗೀತಾ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 99160 33144/94801 01468












Click it and Unblock the Notifications