ಸೌಜನ್ಯ ಕೊಲೆ ಪ್ರಕರಣ: ಬೆಳ್ತಂಗಡಿ ಬಂದ್ ಯಶಸ್ವಿ
ಬೆಳ್ತಂಗಡಿ, ಅ 25: ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಮತ್ತು ವಿವಿಧ ಸಂಘಟನೆಗಳು ಇಂದು (ಅ 25) ಕರೆ ನೀಡಿರುವ ಬೆಳ್ತಂಗಡಿ ಮತ್ತು ಉಜಿರೆ ಬಂದ್ 'ಸಂಪೂರ್ಣ ಯಶಸ್ವಿ' ಯಾಗಿದೆ.
ಎರಡೂ ಪಟ್ಟಣದ ಜನತೆ ಸ್ವಯಂಪ್ರೇರಿತರಾಗಿ ಬಂದಿಗೆ ತಮ್ಮ ಬೆಂಬಲ ಸೂಚಿಸಿದ್ದರಿಂದ ಅಂಗಡಿ, ಮುಂಗಟ್ಟುಗಳು ಮುಚ್ಚಿ ಜನಜೀವನ ಮತ್ತು ವಾಹನ ಸಂಚಾರ ಸಂಪೂರ್ಣ ಸ್ತಬ್ದವಾಗಿದೆ. ಸರಕಾರೀ ಕಚೇರಿ ಮತ್ತು ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದೆ.
ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಇಂದು ಕರೆದಿರುವ ಪ್ರತಿಭಟನಾ ಸಭೆಗೆ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗಿದೆ.
ಸುತ್ತಮುತ್ತಲಿನ ಪ್ರದೇಶಗಳಿಂದ ಉತ್ತಮ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದು ಬೆಳ್ತಂಗಡಿ ಇತಿಹಾಸದಲ್ಲೇ ಇದುವರೆಗಿನ 'ಭಾರೀ ಪ್ರತಿಭಟನಾ ಸಭೆ' ಎನ್ನಲಾಗುತ್ತಿದೆ.
ಧರ್ಮಸ್ಥಳ ದೇವಾಲಯಕ್ಕೆ ಬಿಜೆಪಿಯಿಂದ ಕಪ್ಪುಚುಕ್ಕೆ

ಧರ್ಮಸ್ಥಳ ದೇವಾಲಯ
ಧರ್ಮಸ್ಥಳ ದೇವಾಲಯಕ್ಕೆ ಮತ್ತು ಡಾ. ವೀರೇಂದ್ರ ಹೆಗ್ಗಡೆಯವರಿಗೆ ಕಪ್ಪು ಚುಕ್ಕೆ ತಂದಿದ್ದೇ ಬಿಜೆಪಿ ಎಂದು ಬೆಳ್ತಂಗಡಿ ಕಾಂಗ್ರೆಸ್ ಶಾಸಕ ವಸಂತ ಬಂಗೇರ ಆರೋಪಿಸಿದ್ದಾರೆ.

ಸೌಜನ್ಯ ಕೊಲೆ
ಸೌಜನ್ಯ ಕೊಲೆ ಪ್ರಕರಣ ದಾಖಲಾದಾಗ ಆಗಿನ ಬಿಜೆಪಿ ಸರಕಾರ ಅದನ್ನು ಸಿಐಡಿಗೆ ಒಪ್ಪಿಸಿತ್ತು. ಆಗಿನ ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ಯೋಗೀಶ್ ಕುಮಾರ್ ತನಿಖೆಯ ಬಗ್ಗೆ ಆಸಕ್ತಿ ವಹಿಸಲೇ ಇಲ್ಲ. ಹೀಗಾಗಿ ತನಿಖೆ ಚುರುಕಾಗಿ ಮತ್ತು ದಕ್ಷತೆಯಿಂದ ನಡೆದಿಲ್ಲ - ವಸಂತ ಬಂಗೇರ.

ಧರ್ಮಸ್ಥಳಕ್ಕೆ ಕೆಟ್ಟ ಹೆಸರು
ಎಸೈ ಯೋಗೀಶ್ ಕುಮಾರಿಗೆ ಯಾರಿಂದಲೂ ಒತ್ತಡವಿರಲಿಲ್ಲ. ಆದರೂ ಸರಿಯಾಗಿ ತನಿಖೆ ನಡೆಸಲಿಲ್ಲ. ಒಟ್ಟಿನಲ್ಲಿ ಇಂದು ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರಲು ಬಿಜೆಪಿಯೇ ನೇರ ಕಾರಣ - ವಸಂತ ಬಂಗೇರ.

ಸಿಎಂ ಭೇಟಿ
ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಎಲ್ಲಾ ವಿಷಯಗಳನ್ನು ಅವರಿಗೆ ವಿವರಿಸುತ್ತೇನೆ. ಸೌಜನ್ಯ ಕೊಲೆ ಪ್ರಕರಣ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ ಸಿಬಿಐ ತನಿಖೆ ನಡೆಸುವುದೇ ಸೂಕ್ತ ಎಂದು ಸಿಎಂ ಅವರನ್ನು ಒತ್ತಾಯಿಸುತ್ತೇನೆ - - ವಸಂತ ಬಂಗೇರ.

ಸಿಬಿಐ ತನಿಖೆಯಾಗಲಿ
ನಾನು ಈ ಕ್ಷೇತ್ರದ ಶಾಸಕ. ಹಲವಾರು ಬಾರಿ ಮಾನ್ಯ ಹೆಗ್ಗಡೆಯವರೇ ಸಿಬಿಐ ತನಿಖೆಯಾಗಲಿ ಎಂದಿದ್ದಾರೆ. ನಾನು ಯಾರ ಪರವಾಗಿಯೂ ಇಲ್ಲಿ ಕೆಲಸ ಮಾಡುತ್ತಿಲ್ಲ. ಸೌಜನ್ಯ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆನ್ನುವುದು ನನ್ನ ಉದ್ದೇಶ - ವಸಂತ ಬಂಗೇರ.












Click it and Unblock the Notifications