3 ತಿಂಗಳಲ್ಲಿ ನೈಋತ್ಯ ರೈಲ್ವೆ ಸಂಗ್ರಹಿಸಿದ ದಂಡವೆಷ್ಟು?
ಬೆಂಗಳೂರು, ಅಕ್ಟೋಬರ್ 19:ನೈಋತ್ಯ ರೈಲ್ವೆಯು ಕೇವಲ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 5 ಕೋಟಿ ರೂ . ದಂಡ ಸಂಗ್ರಹಿಸಿದೆ.
ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ನೈರುತ್ಯ ರೈಲ್ವೆ ತಪಾಸಣಾ ಸಿಬ್ಬಂದಿಯಿಂದ ನಡೆದ ವಿಶೇಷ ತಪಾಸಣಾ ಕಾರ್ಯದಲ್ಲಿ 5 ಕೋಟಿ ರೂ.ಗೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.
ರೈಲ್ವೆ ಕಾಯ್ದೆ 1989ರ ಅನುಚ್ಛೇದ 138ರ ಅನುಸಾರ, ಯಾವುದೇ ಪ್ರಯಾಣಿಕರು ಪಾಸ್/ಟಿಕೆಟ್ ಹೊಂದಿರದೇ ಪ್ರಯಾಣಿಸುತ್ತಿದ್ದಲ್ಲಿ ರೂ. 250 ದಂಡ ಅಥವಾ ಟಿಕೆಟ್ ದರಕ್ಕೆ ಸಮಾನವಾದ ಮೊತ್ತ (ಪ್ರಯಾಣಿಕನು ಪ್ರಯಾಣಿಸಿದ ದೂರ ಅಥವಾ ರೈಲು ಪ್ರಾರಂಭವಾದ ನಿಲ್ದಾಣದಿಂದ ಕ್ರಮಿಸಿದ ದೂರಕ್ಕೆ ಅನುಗುಣವಾದ ಸಾಮಾನ್ಯ ಏಕ ದರ ಹಾಗೂ ರೂ. 250 ಗಳ ಹೆಚ್ಚುವರಿ ಶುಲ್ಕ) ಇವೆರಡರಲ್ಲಿ ಯಾವುದು ಹೆಚ್ಚು ಅದನ್ನು ದಂಡವಾಗಿ ವಿಧಿಸಲಾಗುತ್ತದೆ.

ಮೂರು ತಿಂಗಳ ಅವಧಿಯಲ್ಲಿ ನೈರುತ್ಯ ರೈಲ್ವೆಯು 1,16,521 ಟಿಕೆಟ್‌ರಹಿತ ಪ್ರಯಾಣದ ಪ್ರಕರಣಗಳನ್ನು ದಾಖಲಿಸಿದೆ. ಇದರಿಂದ 5 ಕೋಟಿ 52 ಲಕ್ಷದ 27 ಸಾವಿರ ರೂ. ದಂಡದ ಹಣವನ್ನು ಸಂಗ್ರಹಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 2,435 ಪ್ರಕರಣಗಳನ್ನು ದಾಖಲಿಸಲಾಗಿದ್ದು, ತಪ್ಪಿತಸ್ಥರಿಂದ ರೂ. 13.74 ಲಕ್ಷ ಮೊತ್ತದ ದಂಡವನ್ನು ಸಂಗ್ರಹಿಸಲಾಗಿತ್ತು. ಕೇಂದ್ರ ಕಚೇರಿಯ ಟಿಕೆಟ್ ಪರೀಕ್ಷಕರ ತಪಾಸಣಾ ದಳ(ಫ್ಲೈಯಿಂಗ್ ಸ್ಕ್ವಾಡ್)ವು 3,825 ಪ್ರಕರಣಗಳನ್ನು ದಾಖಲಿಸಿ ರೂ. 15.44 ಲಕ್ಷ ಮೊತ್ತದ ದಂಡವನ್ನು ಸಂಗ್ರಹಿಸಿತ್ತು.
ಪ್ರಯಾಣಿಕರು ಊರ್ಜಿತವಾದ ಪಾಸ್ ಅಥವಾ ಟಿಕೆಟ್ ಹೊಂದಿರದೇ ಪ್ರಯಾಣಿಸುತ್ತಿದ್ದಲ್ಲಿ 250 ರೂಪಾಯಿ ದಂಡ ಅಥವಾ ಟಿಕೆಟ್ ದರಕ್ಕೆ ಸಮಾನವಾದ ಮೊತ್ತ ಇವೆರಡರಲ್ಲಿ ಯಾವುದೋ ಹೆಚ್ಚೋ ಅದನ್ನು ದಂಡ ರೂಪದಲ್ಲಿ ವಿಧಿಸಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.
2023ಕ್ಕೆ ವಿದ್ಯುತ್ ಚಾಲಿತ ರೈಲು ಸಂಚಾರ : ಪ್ರಯಾಣಿಕರಿಗೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಹೆಸರುವಾಸಿಯಾಗಿರುವ ನೈಋತ್ಯ ರೈಲ್ವೆ ಈಗ ಮತ್ತಷ್ಟು ಆಧುನೀಕರಣದತ್ತ ಚಿಂತನೆ ನಡೆಸಿದ್ದು, ಈ ಚಿಂತನೆ ಪ್ರಯಾಣಿಕರ ಚಿಂತೆಯನ್ನು ದೂರ ಮಾಡಲಿದೆ. ಅಲ್ಲದೇ ಸಾಕಷ್ಟು ಪ್ರಮಾಣದಲ್ಲಿ ನೈಋತ್ಯ ರೈಲ್ವೆಗೆ ಆರ್ಥಿಕ ಹೊರೆ ತಗ್ಗಲಿದೆ. ಇಷ್ಟು ದಿನ ಡಿಸೇಲ್ ಮೂಲಕ ಚಲಿಸುತ್ತಿದ್ದ ರೈಲು ಇನ್ನು ಮುಂದೆ ಸಂಪೂರ್ಣ ವಿದ್ಯುತ್ ಚಾಲಿತ ರೈಲುಗಳಾಗಿ ಪರಿವರ್ತನೆ ಆಗುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ.
ಈಗಾಗಲೇ ಎಲೆಕ್ಟ್ರಿಕ್ ಕಾಮಗಾರಿ ಚುರುಕುಗೊಂಡಿದ್ದು, 2023 ಮಾರ್ಚ್ ಅಂತ್ಯದೊಳಗೆ ನೈಋತ್ಯ ರೈಲ್ವೆ ಸಂಪೂರ್ಣ ವಿದ್ಯುತ್ ಚಾಲಿತ ರೈಲುಗಳಾಗಿ ಪರಿವರ್ತನೆಗೊಳ್ಳಲಿದೆ. ಇದರಿಂದ ಇಂಧನದ ಬಹುದೊಡ್ಡ ಆರ್ಥಿಕ ಹೊರೆ ನೈಋತ್ಯ ರೈಲ್ವೆಗೆ ತಪ್ಪಲಿದೆ.
ಈಗಾಗಲೇ ಕೊವಿಡ್ ಸಂದರ್ಭದಲ್ಲಿ ಕೊವಿಡ್ ಎಕ್ಸ್‌ಪ್ರೆಸ್, ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಹಾಗೂ ಹಲವಾರು ಯೋಜನೆ ಮತ್ತು ಜನಪರ ಕಾರ್ಯದ ಮೂಲಕ ಜನರಿಗೆ ಉತ್ಕೃಷ್ಟ ಮಟ್ಟದ ಸಾರಿಗೆ ಸೇವೆಯನ್ನು ನೀಡುತ್ತ ಬಂದಿರುವ ರೈಲ್ವೆ 2023ರ ಹೊತ್ತಿಗೆ ಜೀರೋ ಕಾರ್ಬನ್ ಎಮಿಟರ್ ಚಿಂತನೆಯನ್ನು ನಡೆಸಿದ್ದು, ಪರಿಸರ ಸಂರಕ್ಷಣೆ ಬಹುದೊಡ್ಡ ಹೊಣೆಯನ್ನು ನೈಋತ್ಯ ರೈಲ್ವೆ ಹೊಂದಿದೆ. ಅದಕ್ಕೆ ತಕ್ಕನಾಗಿ ಕಾರ್ಯವೈಖರಿಯನ್ನು ಮೈಗೂಡಿಸಿಕೊಂಡಿದೆ.
2030ರ ಹೊತ್ತಿಗೆ ಭಾರತೀಯ ರೈಲ್ವೆ ಸಂಪೂರ್ಣವಾಗಿ ವಿದ್ಯುತ್ತೀಕರಣಗೊಳ್ಳಲಿದೆ. ಈ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಈಗಾಗಲೇ ಕಾರ್ಯ ಪ್ರವೃತ್ತವಾಗಿದ್ದು, 2023ರ ಹೊತ್ತಿಗೆ ನಮ್ಮ ವಿಭಾಗ ಸಂಪೂರ್ಣವಾಗಿ ವಿದ್ಯುತ್ತೀಕರಣಗೊಳ್ಳಲಿದೆ. ಇದರಿಂದ ಪರಿಸರ ಸಂರಕ್ಷಣೆ ಆಗಲಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗ್ಡೆ ಹೇಳಿದ್ದಾರೆ.
ಒಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಈಗಾಗಲೇ ಎಲೆಕ್ಟ್ರಿಕ್ ರೈಲುಗಳು ಸಿದ್ಧವಾಗುತ್ತಿವೆ. ಅಲ್ಲದೇ ಎಲೆಕ್ಟ್ರಿಕ್ ಕಾಮಗಾರಿ ಕೂಡ ಪೂರ್ಣಗೊಳ್ಳುವ ಹಂತದಲ್ಲಿವೆ. ಈ ನಿಟ್ಟಿನಲ್ಲಿ ಕೂಡಲೇ ಎಲೆಕ್ಟ್ರಿಕ್ ಕಾಮಗಾರಿ ಪೂರ್ಣಗೊಂಡು ಭಾರತೀಯ ರೈಲ್ವೆಯ ಪರಿಸರ ಸಂರಕ್ಷಣೆ ಕನಸು ನನಸಾಗಲಿ ಎಂಬುವುದು ನಮ್ಮ ಆಶಯ.












Click it and Unblock the Notifications