Railway New Line: ನೈಋತ್ಯ ರೈಲ್ವೆಯಿಂದ ಹೊಸ ರೈಲು ಮಾರ್ಗ ಯೋಜನೆ
ಬೆಂಗಳೂರು, ಮೇ 27: ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ರೈಲ್ವೆ ವಲಯದಲ್ಲಿ ಸಾಕಷ್ಟು ಸಾಧನೆ ಆಗುತ್ತಿದೆ. ವಿದ್ಯುದೀಕರಣ, ಡಬಲ್ ಲೈನ್, ಹೊಸ ಲೈನ್ ಸ್ಥಾಪಿಸಲಾಗುತ್ತಿದೆ. ಇದೀಗ ಕರ್ನಾಟಕದ ನೈಋತ್ಯ ರೈಲ್ವೆ ವಲಯ (SWR) ವ್ಯಾಪ್ತಿಯಲ್ಲಿ ಹೊಸ ಮಾರ್ಗ ನಿರ್ಮಾಣವಾಗಲಿದೆ.
ನೈಋತ್ಯ ರೈಲ್ವೆ (SWR) ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗದ ಉಪಕ್ರಮದ ಭಾಗವಾಗಿ 'ಪಾವಗಡ-ಮಡಕಶಿರಾ' ಹೊಸ ರೈಲು ಮಾರ್ಗವನ್ನು ನಿರ್ಮಿಸಲು ಟೆಂಡರ್ ಆಹ್ವಾನಿಸಿದೆ. ಆಸಕ್ತ ಗುತ್ತಿಗೆದಾರ ಕಂಪನಿಗಳು ಪಾಲ್ಗೊಳ್ಳುವಂತೆ ತಿಳಿಸಿದೆ. ಈ ಹೊಸ ಮಾರ್ಗ 22 ಕಿಲೋಮೀಟರ್ ಉದ್ದವಿದೆ.

ಈ ಹೊಸ ರೈಲ್ವೆ ಲೈನ್ ಚೈನೇಜ್ 84/000 ಮತ್ತು ಚೈನೇಜ್ 106/000 ನಡುವೆ ಸಾಗುತ್ತದೆ. ಪಾವಗಡ ಮತ್ತು ಮಡಕಸಿರಾ ಇವು ಪ್ರಮುಖ ರೈಲು ನಿಲ್ದಾಣಗಳಾಗಿವೆ. ಹೊಸ ರೈಲ್ವೆ ಮಾರ್ಗ ನಿರ್ಮಾಣದಿಂದ ಈ ಭಾಗದಲ್ಲಿ ಸಾರಿಗೆ ಸಂಪರ್ಕ ಹೆಚ್ಚಿಸುವ ಉದ್ದೇಶ ಈಡೇರಿದಂತಾಗುತ್ತದೆ. ಇಲ್ಲಿನ ರೈಲ್ವೆ ಮಾರ್ಗವನ್ನು ಪ್ರತಿ ಗಂಟೆಗೆ ಒಂದು ರೈಲು 110 ಕಿಮೀ ವೇಗದಲ್ಲಿ ಚಲಿಸಿದರೂ ಸುರಕ್ಷಿತವಾಗಿರುವಂತೆ, ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.
ಯೋಜನೆಯು ಯಾವೆಲ್ಲ ಕೆಲಸ ಒಳಗೊಂಡಿರಲಿದೆ?
ಸ್ವಾಧೀನಪಡಿಸಿಕೊಂಡ ನಿಗದಿತ ಭೂಮಿಯಲ್ಲಿ ಸಿವಿಲ್ ಕಾಮಗಾರಿ ಆರಂಭಿಸಬೇಕು. ಕಟ್ಟಡ, ವಿದ್ಯುತ್ ಮತ್ತು ದೂರಸಂಪರ್ಕ ಕಾರ್ಯಗಳು, ಹಳಿಗಳ ಸ್ಥಾಪನೆ ಸೇರಿದಂತೆ ರೈಲ್ವೆ ಮಾರ್ಗಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಬೇಕಿದೆ.
ಈ ಮಾರ್ಗದಲ್ಲಿ ಮೂರು ಪ್ರಮುಖ ಸೇತುವೆಗಳು ಮತ್ತು 32 ಚಿಕ್ಕ ಸೇತುವೆಗಳನ್ನು ನಿರ್ಮಾಣಕ್ಕೆ ಸಮಗ್ರ ಯೋಜನೆ ರೂಪಿಸಲಾಗಿದೆ. ಇನ್ನೂ ತಡೆ ರಹಿತ ರೈಲು ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆಗಳ ಅಡಿಯಲ್ಲಿ 21 ರಸ್ತೆ, ನಾಲ್ಕು ರಸ್ತೆಗಳ ಮೇಲಿನ ಸೇತುವೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಟ್ರ್ಯಾಕ್ ವಿದ್ಯುದ್ದೀಕರಣ- ಸಿಗ್ನಲಿಂಗ್
ಟ್ರ್ಯಾಕ್ ಹಾಕುತ್ತಿದ್ದಂತೆ ಹಿಂದೆ ವಿದ್ಯುದ್ದೀಕರಣ ಮಾಡುವುದು. ವಿದ್ಯುತ್ ವ್ಯವಸ್ಥೆ ಜೊತೆ ಜೊತೆಗೆ ಸಿಗ್ನಲಿಂಗ್ (ಸಂಕೇತ) ವ್ಯವಸ್ಥೆ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ತ್ವರಿತಗತಿಯಲ್ಲಿ ಹೊಸ ರೈಲ್ವೆ ಲೈನ್ ನಿರ್ಮಿಸಲು ನೈಋತ್ಯ ರೈಲ್ವೆ ಅಧಿಕಾರಿಗಳು ಗುರಿ ಹೊಂದಿದ್ದಾರೆ.
ಹೊಸ ಮಾರ್ಗದ ಪ್ರಾಜೆಕ್ಟ್ ವೆಚ್ಚ?
'ಪಾವಗಡ-ಮಡಕಶಿರಾ' ಹೊಸ ರೈಲು ಮಾರ್ಗ ಯೋಜನೆಗೆ ಎಲ್ಲ ಕಾರ್ಯ ಪೂರ್ಣಗೊಳಿಸಲು ಸದ್ಯಕ್ಕೆ 265.92 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಸಿವಿಲ್ ಎಂಜಿನಿಯರಿಂಗ್, ಪ್ರೊಕ್ಯೂರ್‌ಮೆಂಟ್ ಸೇರಿ ಎಲ್ಲ ಕಾಮಗಾರಿಯನ್ನು ಈ ಹಣದಲ್ಲಿ ಮುಂದಿನ ಒಂದೂವರೆ ವರ್ಷ (18 ತಿಂಗಳು) ದಲ್ಲಿ ಪೂರ್ಣಗೊಳಿಸಲು ಯೋಚನೆ ಇದೆ.
ತುಮಕೂರು-ರಾಯದುರ್ಗ ಹೊಸ ಬ್ರಾಡ್ ಗೇಜ್ (ಬಿಜಿ) ಮಾರ್ಗವು ಕರ್ನಾಟಕದಲ್ಲಿ ಮಹತ್ವದ ರೈಲ್ವೆ ಯೋಜನೆಯಾಗಿದೆ. ಇದರ ಅಡಿ ಈ ಹೊಸ ರೈಲು ಮಾರ್ಗ ಬರಲಿದ್ದು, ಅದರಲ್ಲಿ ಪಾವಗಡ ರೈಲು ನಿಲ್ದಾಣ, ಕೊಟ್ಟಾಲಮ್ ಮತ್ತು ಮಡಕಶಿರಾ ರೈಲು ನಿಲ್ದಾಣಗಳು ಬರುತ್ತವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಧಾನಿ ಬೆಂಗಳೂರು ಮತ್ತು ಬಳ್ಳಾರಿ ಮತ್ತು ತುಮಕೂರು ಹಾಗೂ ನೆರೆಯ ಆಂಧ್ರಪ್ರದೇಶದ ರಾಯದುರ್ಗ ಮೂಲಕ ಸಂಪರ್ಕವನ್ನು ಹೆಚ್ಚಿಸಲು ರೈಲ್ವೆ ಮಾರ್ಗ ನಿರ್ಮಿಸಲಾಗಿದೆ. ಇದು ಒಟ್ಟು ಸುಮಾರು 213 ಕಿಲೋಮೀಟರ್ ಉದ್ದವಿದೆ. ಮಾರ್ಗದ ಉದ್ದಕ್ಕೂ ಬರುವ ಹಳ್ಳಿ, ತಾಲೂಕು ಮತ್ತು ಜಿಲ್ಲೆಗಳಿಗೆ ಸಾರಿಗೆ ಅನುಕೂಲ, ಆರ್ಥಿಕ ಸುಧಾರಣೆಗೆ ಈ ಮಾರ್ಗ ನೆರವಾಗಿದೆ.
ಸದ್ಯ ಕರ್ನಾಟಕ ವ್ಯಾಪ್ತಿಯಲ್ಲಿ ಬಹುತೇಕ ಕಡೆಗಳಲ್ಲಿ ರೈಲ್ವೆ ಟ್ರ್ಯಾಕ್ ವಿದ್ಯುದ್ಧೀಕರಣ ಪೂರ್ಣಗೊಂಡಿದೆ. ಇದು ರಾಜ್ಯದ ರೈಲ್ವೆ ಸಾರಿಗೆಯನ್ನು ಸುಧಾರಿಸಲಿದೆ. ಜೋಡಿ ಟ್ರ್ಯಾಕ್ ನಿರ್ಮಾಣವು ಪ್ರಯಾಣದ ಸಮಯ ಉಳಿತಾಯವಾಗಿದೆ.












Click it and Unblock the Notifications