Karnataka Railways: ಈ ಮಾರ್ಗಗಳಲ್ಲಿ ಪ್ರತಿ ಗಂಟೆಗೆ 130 ಕಿಮೀ ವೇಗದಲ್ಲಿ ಓಡಲಿವೆ ರೈಲುಗಳು
ಭಾರತೀಯ ರೈಲ್ವೇ ಇಲಾಖೆ ಕರ್ನಾಟಕದ ಕೆಲವು ಮಾರ್ಗಗಳಲ್ಲಿ ರೈಲುಗಳ ವೇಗದ ಗರಿಷ್ಠಿ ಮಿತಿ ಹೆಚ್ಚಳಕ್ಕೆ ನಿರ್ಧರಿಸಿದೆ. ಹಳಿಗಳ ಬಲ ವರ್ಧನೆಯಂತಹ ಮಹತ್ವದ ಕ್ರಮ ಕೈಗೊಳ್ಳುತ್ತಿದೆ.
ಬೆಂಗಳೂರು, ಮಾರ್ಚ್ 06: ಭಾರತೀಯ ರೈಲ್ವೇ ಇಲಾಖೆ ಕರ್ನಾಟಕದ ಕೆಲವು ಮಾರ್ಗಗಳಲ್ಲಿ ರೈಲುಗಳ ವೇಗದ ಮಿತಿ ಹೆಚ್ಚಳಕ್ಕೆ ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳುತ್ತಿದೆ.
ಉದ್ದೇಶಿತ ರೈಲ್ವೆ ಮಾರ್ಗಗಳ ವೇಗ ಹೆಚ್ಚಳಕ್ಕೆ ಇಲಾಖೆಯು ಈಗಾಗಲೇ ರೈಲ್ವೆ ಹಳಿಗಳ (ಟ್ರ್ಯಾಕ್) ಬಲವರ್ಧನೆ, ಇಂಜಿನ್ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ನೈಋತ್ಯ ರೈಲ್ವೆ (SWR) ವಿಭಾಗದಿಂದ ವಿವಿಧೆಡೆಗೆ ತೆರಳುವ ಕೆಲವು ರೈಲುಗಳ ಪ್ರತಿ ಗಂಟೆಗೆ 130 (kmph) ವೇಗದಲ್ಲಿ ಓಡಾಡಲಿವೆ. ಯಾವ ಮಾರ್ಗದ ರೈಲುಗಳ ವೇಗ ಹೆಚ್ಚಾಗಿದೆ ಎಂಬ ಪಟ್ಟಿ ಇಲ್ಲಿದೆ.

ಮೊದಲು ಇಲಾಖೆ ರೈಲ್ವೆ ಹಳಿಗಳನ್ನು ಬಲಪಡಿಸಿದ ನಂತರ ಅಗತ್ಯ ಸಿಗ್ನಲ್‌ಗಳಲ್ಲಿ ಸುಧಾರಣೆ ತರಲಿದೆ. ಈ ವೆಲ್ಲವುಗಳು ಪೂರ್ಣಗೊಂಡ ನಂತರ 130 kmph ವೇಗದಲ್ಲಿ ರೈಲುಗಳನ್ನು ನಿರ್ವಹಿಸಿ ಹಳಿಗಳ ಸಾಮರ್ಥ್ಯ ಪರೀಶೀಲಿಸಲಿದೆ. ಇಲ್ಲವಾದರೆ ಮತ್ತೆ ಅಗತ್ಯ ಬದಲಾವಣೆಗಳನ್ನು ಮಾಡಲು ಇಲಾಖೆ ಯೋಜಿಸಿದೆ.
ವೇಗ ಹೆಚ್ಚಾಗಲಿರುವ ಮಾರ್ಗ/ರೈಲು ಪಟ್ಟಿ
1) ಬೆಂಗಳೂರು - ಗುಂತಕಲ್
2) ಬೆಂಗಳೂರು - ರಾಮನಗರ - ಮಂಡ್ಯ-ಮೈಸೂರು
3) ಶಿವಮೊಗ್ಗ ಪಟ್ಟಣ - ಬೆಂಗಳೂರು
4) ಧಾರವಾಡ - ಬೀರೂರು
5) ಬೆಂಗಳೂರು - ಜೋಲಾರಪೇಟೆ
ವಂದೇ ಭಾರತ್ ರೈಲು ನಿಯೋಜನೆ

ಇದೇ ವರ್ಷ ಮುಂದಿನ ಜುಲೈ ಅಥವಾ ಆಗಸ್ಟ್ ತಿಂಗಳ ವೇಳಗೆ ರೈಲ್ವೇ ವೇಗದ ಉನ್ನತೀಕರಣ ಕಾರ್ಯಗಳು ಆರಂಭವಾಗಲಿವೆ. ವಕ್ರಾಕೃತಿಗಳ ಮರುಜೋಡಣೆ, ಅಸ್ತಿತ್ವದ ಟ್ರ್ಯಾಕ್‌ಗಳ ಬಲವರ್ಧನೆ, ಟ್ರ್ಯಾಕ್‌ಗಳ ಉದ್ದಕ್ಕೂ ಹಳೆಯ ಸ್ಲೀಪರ್‌ಗಳ ಬದಲಾವಣೆ ಇನ್ನಿತರ ಕೆಲಸಗಳು ಶುರುವಾಗಲಿವೆ. ಇದನ್ನು ಅನುಸರಿಸಿ, ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ 130 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ರೈಲುಗಳನ್ನು ಈ ಮಾರ್ಗಗಳಲ್ಲಿ ನಿಯೋಜನೆಗೊಳ್ಳಲಿವೆ.
ಉದ್ದೇಶಿತ 130kmph ವೇಗವು ರೈಲುಗಳ ಗರಿಷ್ಠ ಮಿತಿ ಆಗಿರುತ್ತದೆ. ಇಷ್ಟು ವೇಗದಲ್ಲಿ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲಿರುವ ದೇಶದ 53 ಮಾರ್ಗಗಳ ಪೈಕಿ ಈ ಮೇಲೆ ಹೇಳಲಾದ ಕರ್ನಾಟಕ ಐದು ಮಾರ್ಗಗಳು ಹೌದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಅದರಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳ ಪರಿಚಯದ ನಂತರ ಹಳಿ ಬಲವರ್ಧನೆಗೆ ರೈಲ್ವೆ ಇಲಾಖೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ.
ಇತ್ತೀಚೆಗೆ ಆರಂಭವಾದ ವಂದೇ ಭಾರತ್ ರೈಲು ಒಳಗೊಂಡಂತೆ ಭಾರತದಲ್ಲಿ ಪ್ರಮುಖ ರೈಲ್ವೆ ಮಾರ್ಗಗಳಲ್ಲಿನ ವೇಗದ ಮಿತಿ ಹೆಚ್ಚಳ ಸ್ವಾಗತಾರ್ಹ. ಆದರೆ ಯಾವ ಮಾರ್ಗದಲ್ಲೂ ಈವರೆಗೆ ಗರಿಷ್ಠ ವೇಗದ ರೈಲುಗಳಿಗೆ ಅನುಮತಿಸಿಲ್ಲ. ಕಾರಣ ಹಳಿಗಳ ಸಾಮರ್ಥ್ಯ, ಜೋಡಣೆ ಮತ್ತು ಸಿಗ್ನಲಿಂಗ್ ನಂತರ ಹಲವು ಸಮಸ್ಯೆಗಳು ಇವೆ. ಅದನ್ನು ಮೊದಲು ಪರಿಹರಿಸಬೇಕಿದೆ ಎಂದು ಬೆಂಗಳೂರು ಪ್ರಯಾಣಿಕರೊಬ್ಬರು ತಿಳಿಸಿದರು.












Click it and Unblock the Notifications