Breaking: ಹೈಕಮಾಂಡ್ ಸ್ಪಷ್ಟ ಆದೇಶ, ಈಶ್ವರಪ್ಪ ರಾಜೀನಾಮೆ?
ಬೆಂಗಳೂರು, ಏಪ್ರಿಲ್ 13: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರು ರಾಜೀನಾಮೆ ನೀಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಈಶ್ವರಪ್ಪನವರ ರಾಜೀನಾಮೆಯನ್ನು ಈ ಕೂಡಲೇ ಪಡೆಯುವಂತೆ ಹೈಕಮಾಂಡ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸ್ಪಷ್ಟ ಸೂಚನೆಯನ್ನು ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗ ಪ್ರವಾಸದಲ್ಲಿರುವ ಈಶ್ವರಪ್ಪನವರು ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ದೌಡಾಯಿಸುತ್ತಿದ್ದು, ಬೊಮ್ಮಾಯಿಯವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆಂದು ಕನ್ನಡ ಸುದ್ದಿವಾಹಿನಿಗಳೂ ಸುದ್ದಿ ಬಿತ್ತರಿಸುತ್ತಿವೆ.

ಬುಧವಾರ (ಏ 13) ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೊಮ್ಮಾಯಿಯವರ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈಶ್ವರಪ್ಪನವರಿಂದ ರಾಜೀನಾಮೆ ಪಡೆಯಿರಿ ಎನ್ನುವ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆಂದು ವರದಿಯಾಗುತ್ತಿದೆ.
ವಿರೋಧ ಪಕ್ಷಗಳಿಗೆ ಸುಮ್ಮನೆ ಆಹಾರವಾಗುವುದು ಬೇಡ, ಚುನಾವಣಾ ವರ್ಷವಾಗಿರುವುದರಿಂದ ಈಶ್ವರಪ್ಪನವರಿಂದ ರಾಜೀನಾಮೆ ಪಡೆದುಕೊಳ್ಳಿ ಎಂದು ಹೈಕಮಾಂಡ್, ಮುಖ್ಯಮಂತ್ರಿಗಳಿಗೆ ಸೂಚಿಸಿದೆ.
ಮುಖ್ಯಮಂತ್ರಿಯವರು ಸೂಚಿಸಿದರೆ ತಕ್ಷಣವೇ ರಾಜೀನಾಮೆ ನೀಡುವುದಾಗಿ ಈಶ್ವರಪ್ಪನವರು ಬೆಳಗ್ಗೆ ಮಾಧ್ಯಮದವರಿಗೆ ಹೇಳಿದ್ದರು. ಇಂದು ಮಧ್ಯಾಹ್ನ ಈಶ್ವರಪ್ಪನವರು ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ, ಈ ವೇಳೆ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ.
ಇಂದು ಅಥವಾ ನಾಳೆ ಮಧ್ಯಾಹ್ನದೊಳಗೆ ಈಶ್ವರಪ್ಪನವರು ರಾಜೀನಾಮೆಯನ್ನು ನೀಡಬಹುದು. ಈಶ್ವರಪ್ಪನವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಇಂದು ರಾಜಭವನಕ್ಕೆ ತೆರಳಿ ಸಚಿವರ ವಿರುದ್ದ ಕ್ರಮಕ್ಕೆ ಆಗ್ರಹಿಸುವ ಕಾರ್ಯಕ್ರಮ ನಿಗದಿಯಾಗಿದೆ.












Click it and Unblock the Notifications