Congress BJP Poisonous Politics: ವಿಷ್ಯಕನ್ಯೆ ಎಂದವರನ್ನು ಉಚ್ಛಾಟಿಸಿ ಎಂದ ಸಿದ್ದರಾಮಯ್ಯ
ಬೆಂಗಳೂರು, ಏಪ್ರಿಲ್ 28: ಪ್ರಧಾನಿ ನರೇಂದ್ರ ಮೋದಿಯವರನ್ನು ಖರ್ಗೆಯವರು ಟೀಕಿಸಿದ್ದ ಬೆನ್ನಲ್ಲೆ ಬಿಜೆಪಿ ಶಾಸಕ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು 'ವಿಷ ಕನ್ಯೆ' ಎಂದು ಟೀಕಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರು ಶುಕ್ರವಾರ ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತಕ್ಷಣ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಶಾಸಕ ಬಸನಗೌಡ ಪಾಟೀಲ್ ಪಕ್ಷದಿಂದ ಉಚ್ಛಾಟಿಸಲು ಸೂಚನೆ ನೀಡಬೇಕು. ಇಲ್ಲದೆ ಇದ್ದರೆ ಅವರ (ನರೇಂದ್ರ ಮೋದಿ) ಬೆಂಬಲದಿಂದಲೇ ಯತ್ನಾಳ್ ಅವರು ಇಂತಹ ನೀಚತನದ ಪ್ರದರ್ಶನ ಮಾಡುತ್ತಿದ್ದಾರೆಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಖಾರವಾಗಿ ಹೇಳಿದ್ದಾರೆ.
ಪ್ರಧಾನಿಯವರ ಹೇಳಿಕೆಗಳೇ ಪ್ರಚೋದನೆಯೇ?
ಸೋನಿಯಾ ಗಾಂಧಿಯವರ ವಿರುದ್ಧ ಈ ರೀತಿ ಅವಹೇಳನಕಾರಿಯಾದ ನಿಂದನೆ, ಚಾರಿತ್ರ್ಯಹನನದ ಪ್ರಯತ್ನ ಇದು ಮೊದಲ ಬಾರಿ ಅಲ್ಲ. ಸಾಕ್ಷಾತ್ ಪ್ರಧಾನಿ ನರೇಂದ್ರ ಮೋದಿಯವರೇ ಸೋನಿಯಾ ಗಾಂಧಿಯವರನ್ನು ಕಾಂಗ್ರೆಸಿನ ವಿಧವೆ, ಜರ್ಸಿಕೌ, ಬಾರ್ ಡಾನ್ಸರ್ ಎಂದೆಲ್ಲ ಅವಹೇಳನ ಮಾಡಿದ್ದಾರೆ ಎಂದರು.
ಬಹುಷಃ ಪ್ರಧಾನಿಯವರ ಇಂತಹ ಹೇಳಿಕೆಗಳ ಪ್ರಚೋದನೆಯಿಂದಲೇ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅಂತಹವರು ಈ ರೀತಿಯ ನೀಚ ಬುದ್ಧಿಯನ್ನು ನಿರ್ಭೀತಿಯಿಂದ ಪ್ರದರ್ಶಿಸುತ್ತಿರುವಂತಿದೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ಯತ್ನಾಳ್ ಅವರ ಕೊಳಕು ನಾಲಿಗೆ ವಿರೋಧ ಪಕ್ಷದ ನಾಯಕರ ಮೇಲೆ ಮಾತ್ರ ಹರಿದಾಡಿರುವುದು ಮಾತ್ರವಲ್ಲ. ಸ್ವಂತ ಪಕ್ಷದ ನಾಯಕರನ್ನೂ ಅವರು ಅವಾಚ್ಯವಾಗಿ ನಿಂದಿಸುತ್ತಾ ಬಂದಿದ್ದರೂ ಅವರ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಪಕ್ಷದ ಉನ್ನತ ಮಟ್ಟದ ನಾಯಕರ ಆಶೀರ್ವಾದ ಬಲದಿಂದಲೇ ಯತ್ನಾಳ್ ಅವರು ಈ ರೀತಿಯ ದುರ್ಬುದ್ಧಿಯನ್ನು ತೋರಿಸುತ್ತಿರುವಂತಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್-ಬಿಜೆಪಿ ಪರಸ್ಪರ ಆಕ್ರೋಶ
ಶುಕ್ರವಾರ ಶಾಸಕ ಬಸನಗೌಡ ಯತ್ನಾಳ್ ಅವರು ಸೋನಿಯಾ ಗಾಂಧಿಯವರನ್ನು ವಿಷಕನ್ಯೆ ಎಂದು ಕರೆದಿದ್ದಾರೆ. ಈ ಹೇಳಿಕೆ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷ ಮತ್ತದರ ನಾಯಕರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ. ರಾಜ್ಯದಲ್ಲಿ ಬಿಜೆಪಿ ನಾಯಕತ ತಮ್ಮ ಮಾನಸಿಕ ಮತ್ತ ರಾಜಕೀಯ ಸಮತೋಲ ಕಳೆದುಕೊಳ್ಳುತ್ತಿದ್ದಾರೆ ಎಂದೆಲ್ಲ ವಾಗ್ದಾಳಿ ನಡೆಸಿದೆ. ವಿಷ್ಯಕನ್ಯೆ ಎಂದ ಶಾಸಕನನ್ನು ಕೂಡಲೇ ಉಚ್ಛಾಟಿಸಬೇಕು ಎಂದು ಕೈ ನಾಯಕರ ಪಡೆ ಆಗ್ರಹಿಸಿದೆ.
ಗುರುವಾರ ಗದಗಿನಲ್ಲಿ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕಿಸಿದ್ದರು. ಪ್ರಧಾನಿ ಮೋದಿ ವಿಷ ಸರ್ಪ ಇದ್ದಂತೆ. ಹೌದು ಅಲ್ಲವೋ ಎಂದು ನೀವು ನೆಕ್ಕಿ ನೋಡಿದರೆ ನೀವು ಸತ್ತಂತೆ ಅವರು ಟೀಕಿಸಿದ್ದರು.
ಖರ್ಗೆಯವರು ಹೇಳಿಕೆಗೆ ವ್ಯಾಪಕವಾಗಿ ಬಿಜೆಪಿ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಖರ್ಗೆ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದರು. ಅದಾದ ಬಳಿಕ ಇಂದು ಬಿಜೆಪಿ ನಾಯಕ ಯತ್ನಾಳ್ ಸೋನಿಯಾರನ್ನು ವಿಷಕನ್ಯೆ ಎಂದು ಕರೆಯುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.












Click it and Unblock the Notifications