ಸೋನಿಯಾ ಗಾಂಧಿ ಮನೆ ಬಳಿ ಸಿದ್ದರಾಮಯ್ಯಗೆ ಅವಮಾನ?
ನವದೆಹಲಿ: ಸಂಪುಟ ವಿಸ್ತರಣೆಗಾಗಿ ಚರ್ಚೆ ನಡೆಸಲು ರಾಷ್ಟ್ರ ರಾಜಧಾನಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಮನೆ ಎದುರು ಅವಮಾನವಾಯ್ತಾ? ಎಂಬ ಡೌಟ್ ಶುರುವಾಗಿದೆ. ನಿನ್ನೆಯಿಂದ ರಾಜ್ಯ ಸಂಪುಟ ವಿಸ್ತರಣೆ ಸರ್ಕಸ್ ದೆಹಲಿಯಲ್ಲಿ ಆರಂಭವಾಗಿತ್ತು. ಈ ವೇಳೆ ಸಿದ್ದರಾಮಯ್ಯ ಅವರು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಮನೆಗೆ ತೆರಳಿದ್ದರು, ಆಗ ಈ ಘಟನೆ ನಡೆದಿದೆ.
ದಕ್ಷಿಣದ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಪೂರ್ಣ ಸರ್ಕಾರ ರಚಿಸಿದ್ದು ಇದೇ ಖುಷಿಯಲ್ಲಿ ಈಗ ಕಾಂಗ್ರೆಸ್‌ನ ಕೇಂದ್ರ ನಾಯಕರು ಮೈಕೊಡವಿ ನಿಂತಿದ್ದಾರೆ. ಮತ್ತೊಂದು ಕಡೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತಷ್ಟು ಸಚಿವರ ಸೇರ್ಪಡೆಗೆ ಸರ್ಕಸ್ ಕೂಡ ಆರಂಭವಾಗಿದೆ. ನಿನ್ನೆಯಿಂದ ಡಿಸಿಎಂ ಡಿಕೆ ಶಿವಕುಮಾರ್ & ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲೇ ಸಭೆ ಮೇಲೆ ಸಭೆ ನಡೆಸಿದ್ದಾರೆ. ಆದರೆ ಇಂದು ಸಭೆ ಮತ್ತು ಚರ್ಚೆಗಳ ನಂತರ ಸೋನಿಯಾ ಗಾಂಧಿ ಅವರ ಭೇಟಿಗೆ ಸಿದ್ದರಾಮಯ್ಯ ತೆರಳಿದ್ದರು. ಆಗ ಅಲ್ಲಿ ಭದ್ರತಾ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.

ಕರ್ನಾಟಕದ ಸಿಎಂ ಅಂದರೂ ಒಳಗೆ ಬಿಡಲಿಲ್ವಾ?
ಎಐಸಿಸಿ ನಾಯಕರ ಜೊತೆ ಸಭೆ ನಡೆಸಿದ ನಂತರ ಸಿಎಂ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಮನೆಗೆ ತೆರಳಿದ್ದಾರೆ. ಈ ವೇಳೆ ಮನೆ ಗೇಟ್ ಬಳಿ ಸಿದ್ದರಾಮಯ್ಯ ಅವರ ಕಾರನ್ನ ನಿಲ್ಲಿಸಿದ ಸೋನಿಯಾ ಗಾಂಧಿ ನಿವಾಸದ ಭದ್ರತಾ ಸಿಬ್ಬಂದಿ, ಸಿಎಂ ಸಿದ್ದರಾಮಯ್ಯ ಅವರನ್ನ ಮನೆ ಒಳಗೆ ಹೋಗಲು ಬಿಟ್ಟಿಲ್ಲ. ಆಗ ಅಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ ಅವರ ಸಹಾಯಕರು ಭದ್ರತಾ ಸಿಬ್ಬಂದಿಗೆ ತಿಳಿಸಿ ಹೇಳಿದ್ದಾರೆ. ಆದರೂ ಅದನ್ನ ನಂಬದ ಭದ್ರತಾ ಸಿಬ್ಬಂದಿ ಸಿದ್ದರಾಮಯ್ಯ ಅವರ ಕಾರನ್ನು ಒಳಗೆ ಬಿಡಲೇ ಇಲ್ಲ.
ಕೆಲಕಾಲ ಹೊರಗಡೆಯೇ ಪರದಾಟ!
ಸೋನಿಯಾ ಗಾಂಧಿ ಮನೆ ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು ಮನೆ ಒಳ ಬಿಡದ ಕಾರಣ ಸ್ವಲ್ಪಹೊತ್ತು ಮನೆ ಗೇಟ್ ಬಳಿ ಕಾರಲ್ಲಿ ಕಾಯಬೇಕಾದ ಪರಿಸ್ಥಿತಿ ಬಂತು. ಕಡೆಗೆ ಸಿಎಂ ಸಿದ್ದರಾಮಯ್ಯ ಅವರ ಸಹಾಯಕರು ಸೋನಿಯಾ ಗಾಂಧಿ ಮನೆಯ ಭದ್ರತಾ ಸಿಬ್ಬಂದಿಗೆ ತಿಳಿಸಿ ಹೇಳಿದರು. ಆಗ ಒಳಗೆ ಬಿಟ್ಟ ಭದ್ರತಾ ಸಿಬ್ಬಂದಿ, ಗೇಟ್ ಬಾಗಿಲು ಹಾಕಿಕೊಂಡರು. ಹೀಗೆ ಸೋನಿಯಾ ಗಾಂಧಿ ಮನೆಯ ಭದ್ರತಾ ಸಿಬ್ಬಂದಿ ಸಿಎಂ ಸಿದ್ದರಾಮಯ್ಯ ಅವರನ್ನ ನೇರವಾಗಿ ಒಳಗೆ ಬಿಡದ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.

24 ಸಚಿವರ ಪಟ್ಟಿ ಫೈನಲ್ ಆಯ್ತಾ?
ಇಂದು ಬೆಳಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಚರ್ಚೆ ಬಳಿಕ 24 ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ನಾಳೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಕೂಡ ನೆರವೇರಬಹುದು. ಈ ನಡುವೆ ಬಣ ಬಡಿದಾಟ ನಿಯಂತ್ರಿಸಿ, ಸಚಿವ ಸಂಪುಟ ವಿಸ್ತರಣೆ ಮಾಡುವುದೇ ಕೇಂದ್ರದ ಕಾಂಗ್ರೆಸ್ ನಾಯಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಕಾಂಗ್ರೆಸ್ ಸಚಿವರ ಸಂಭವ್ಯ ಪಟ್ಟಿ?
ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಕೆ.ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಈಶ್ವರ ಖಂಡ್ರೆ, ರಹೀಂ ಖಾನ್, ಬಿ.ನಾಗೇಂದ್ರ, ಮಂಕಾಳು ವೈದ್ಯ, ಬೋಸರಾಜು, ಮಧು ಬಂಗಾರಪ್ಪ, ಕೆ.ಎನ್.ರಾಜಣ್ಣ, ಶಿವಾನಂದ ಪಾಟೀಲ್, ಪಿರಿಯಾಪಟ್ಟಣ ವೆಂಕಟೇಶ್, ಶಿವರಾಜ ತಂಗಡಗಿ, ಎಸ್.ಎಸ್.ಮಲ್ಲಿಕಾರ್ಜುನ, ಸಿ.ಪುಟ್ಟರಂಗಶೆಟ್ಟಿ, ಚಲುವರಾಯ ಸ್ವಾಮಿ, ಆರ್.ಬಿ.ತಿಮ್ಮಾಪುರ, ರುದ್ರಪ್ಪ ಲಮಾಣಿ, ಡಾ.ಹೆಚ್.ಸಿ.ಮಹದೇವಪ್ಪ ಸಂಭಾವ್ಯ ಸಚಿವರ ಪಟ್ಟಿಯಲ್ಲಿದ್ದಾರೆ.

ಒಟ್ನಲ್ಲಿ ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ ಬಹುತೇಕ ಮುಗಿದಿದ್ದು, ನೂತನ ಸಚಿವರ ಕುರಿತು ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ನಾಳೆಯೇ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೂ ಸಕಲ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ. ಈ ಮೂಲಕ ಮತ್ತೊಂದು ಟೆನ್ಷನ್ ಕಳೆದುಕೊಂಡಿದ್ದಾರೆ ಕೇಂದ್ರದ ಕಾಂಗ್ರೆಸ್ ನಾಯಕರು. ಇದರ ಜೊತೆಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ತವಾಗುವ ಸಾಧ್ಯತೆ ಕೂಡ ದಟ್ಟವಾಗಿದೆ.












Click it and Unblock the Notifications