ಮತ್ತಷ್ಟು ಜೆಡಿಎಸ್ ಶಾಸಕರು ಕಾಂಗ್ರೆಸ್ಸಿನತ್ತ? ಎಚ್‌ಡಿಕೆಗೆ ಸಿಂಹಸ್ವಪ್ನವಾಗುತ್ತಿರುವ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಮಾತನ್ನು ಆಡುತ್ತಿದ್ದಾರೆ. ಆದರೆ, ಕುಮಾರಸ್ವಾಮಿಯವರ ಮಾತಿನ ಮೇಲೆ ಖುದ್ದು ಜೆಡಿಎಸ್ ಶಾಸಕರಿಗೆ ನಂಬಿಕೆ ಇದ್ದಂತಿಲ್ಲ.
ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲು ಬಯಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈಗಾಗಲೇ, ಬಹಿರಂಗವಾಗಿಯೇ ಜೆಡಿಎಸ್ ಬಿಡುವುದಾಗಿ ನಾಲ್ಕೈದು ಶಾಸಕರು ಹೇಳಿದ್ದಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಹಿರಂಗವಾಗಿಯೇ ಕಾಂಗ್ರೆಸ್ ಪರ ಕೆಲವರು ಕೆಲಸ ಮಾಡಿದವರೂ ಇದ್ದಾರೆ.
ಆದರೆ, ಇದ್ಯಾವುದಕ್ಕೂ ಕುಮಾರಸ್ವಾಮಿ ಬಹಿರಂಗವಾಗಿ ಹೇಳುವುದಾದರೆ ಅಷ್ಟು ತಲೆಕೆಡಿಸಿಕೊಂಡಂತಿಲ್ಲ. ಇನ್ನು, ನಾಲ್ಕು ಗೋಡೆಯ ಮಧ್ಯೆ ಏನು ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ಕದ ತಟ್ಟುತ್ತಿರುವವರ ಸಂಖ್ಯೆ ಇನ್ನೂ ಇದೆ ಎನ್ನುವ ಅನುಮಾನ ಕಾಡಲು ಶುರುವಾಗಿದ್ದು ಹಾಲೀ ಬೆಳಗಾವಿ ಅಧಿವೇಶನದಲ್ಲಿ.
ಜೆಡಿಎಸ್ ಬಿಡಲು ಮುಂದಾಗಿರುವ ಶಾಸಕರು ಹೆಚ್ಚು ಆಪ್ತತೆಯಿಂದ ಇರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗಿಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆಗೆ. ಇದು ಮತ್ತೆ ರುಜುವಾಗಿದ್ದು ಅಧಿವೇಶನದ ಮೊಗಶಾಲೆಯಲ್ಲಿ.

ಶಿವಲಿಂಗೇಗೌಡ್ರಿಗೆ ಯಾವುದೇ ಪಕ್ಷದ ಬ್ಯಾರಿಯರ್ ಕಾಡುತ್ತಿಲ್ಲ
ಈಗಾಗಲೇ, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ, ಕೋಲಾರ ಶಾಸಕ ಶ್ರೀನಿವಾಸ ಗೌಡ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಬಹಿರಂಗವಾಗಿಯೇ ಕಾಂಗ್ರೆಸ್ ಸೇರುವ ವಿಚಾರವನ್ನು ಸ್ಪಷ್ಟ ಪಡಿಸಿದ್ದಾಗಿದೆ. ಇನ್ನು, ಅರಸೀಕೆರೆ ಶಾಸಕರಾದ ಶಿವಲಿಂಗೇಗೌಡ ಅವರು ಯಾವುದೇ ಅಧಿವೇಶನವಿರಲಿ ಅಲ್ಲಿ ಸಿದ್ದರಾಮಯ್ಯನವರನ್ನು ಹೊಗಳದೇ ಸುಮ್ಮನಿದ್ದ ಉದಾಹರಣೆಗಳಿಲ್ಲ. ಸಿದ್ದರಾಮಯ್ಯನವರ ಅವಧಿಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಂದಿತ್ತು ಎನ್ನುವುದನ್ನು ಒಪ್ಪಿಕೊಳ್ಳಲು ಶಿವಲಿಂಗೇಗೌಡ್ರಿಗೆ ಯಾವುದೇ ಪಕ್ಷದ ಬ್ಯಾರಿಯರ್ ಅಡ್ಡ ಬರುತ್ತಿಲ್ಲ ಎನ್ನುವುದು ಸ್ಪಷ್ಟ.

ಜೆಡಿಎಸ್ ಶಾಸಕರು ಸಿದ್ದರಾಮಯ್ಯನವರ ಜೊತೆಗೆ ಆಪ್ತರಾಗುತ್ತಿದ್ದಾರೆ
ಹಾಲೀ ಅಧಿವೇಶನದಲ್ಲಿ ಹಲವು ಜೆಡಿಎಸ್ ಶಾಸಕರು ಸಿದ್ದರಾಮಯ್ಯನವರ ಜೊತೆಗೆ ಆಪ್ತರಾಗುತ್ತಿದ್ದಾರೆ. ನಿಮ್ಮಿಂದಾಗಿಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅಷ್ಟು ಸ್ಥಾನ ಬಂದಿದ್ದು ಎಂದು ಅವರನ್ನು ಅಭಿನಂದಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಎಲ್ಲರನ್ನೂ ಕರೆಸಿ ಆದರದಿಂದ ಮಾತನಾಡಿ ಕಳುಹಿಸುತ್ತಿದ್ದಾರೆ. ಜೆಡಿಎಸ್ ಬಿಡಲು ಇನ್ನಷ್ಟು ಶಾಸಕರು ಮುಂದಾಗಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತಿತ್ತು. ಕುಮಾರಸ್ವಾಮಿಯವರ ಪ್ರತಿಕ್ರಿಯೆ ಕೂಡಾ ಅದೇ ದಿಕ್ಕಿನಲ್ಲಿ ಸಾಗುತ್ತಿದೆ.

ಕೆ.ಸಿ.ಕೋನರೆಡ್ಡಿಯವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು
ಇನ್ನೊಂದು ಕಡೆ, ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ ಕೆ.ಸಿ.ಕೋನರೆಡ್ಡಿಯವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಆ ವೇಳೆ, ಕಾಂಗ್ರೆಸ್ಸಿನ ಎಲ್ಲಾ ಪ್ರಮುಖ ನಾಯಕರು ಹಾಜರಿದ್ದು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಇದು ಇದೇ ರೀತಿಯ ಸ್ವಾಗತ ನಮಗೂ ಸಿಗುತ್ತದೆ ಎನ್ನುವುದು ಜೆಡಿಎಸ್ ಮುಖಂಡರಿಗೆ ತಲುಪಬೇಕಾಗಿರುವ ಸ್ಪಷ್ಟ ಉದ್ದೇಶವನ್ನು ಕಾಂಗ್ರೆಸ್ ಈ ಕಾರ್ಯಕ್ರಮದ ಮೂಲಕ ಹೊಂದಿತ್ತು ಎನ್ನುವುದು ಖಾತ್ರಿಯಾಗುತ್ತದೆ. ಇದು, ಮಂಡ್ಯ ಭಾಗದ ಶಾಸಕರನ್ನು ಸೆಳೆಯಲು ಸಹಾಯಕವಾಗಬಲ್ಲದು.

ಪಕ್ಷಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದರೆ, ಅದಕ್ಕೆ ನನ್ನ ಸಂಪೂರ್ಣ ಬೆಂಬಲ
ಪಕ್ಷಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದರೆ, ಅದಕ್ಕೆ ನನ್ನ ಸಂಪೂರ್ಣ ಬೆಂಬಲ
"ಹದಿನೈದು ಅಲ್ಲ ಎಲ್ಲರನ್ನೂ ಕಾಂಗ್ರೆಸ್ಸಿನವರು ಕರೆದುಕೊಂಡು ಹೋಗಲಿ. ಅವರ ದಯನೀಯ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಅವರಿಗೆ ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಇನ್ನೊಂದು ಪಕ್ಷದ ಮುಖಂಡರನ್ನು ಸೇರಿಸಿಕೊಂಡು ಅಧಿಕಾರಕ್ಕೆ ಬರುವ ಕನಸನ್ನು ಕಾಣುತ್ತಿದ್ದಾರೆ. ಸರಕಾರ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರುವ ಬದಲು ಪಕ್ಷಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದರೆ, ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ"ಎಂದು ಎಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್ ನಾಯಕರು ಕಾಂಗ್ರೆಸ್ ಕದ ತಟ್ಟುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.












Click it and Unblock the Notifications