SM Krishna: ಎಸ್. ಎಂ. ಕೃಷ್ಣ ಸದಾ ನನ್ನ ಹಿತೈಷಿಗಳಾಗಿದ್ದರು: ಸಿದ್ದರಾಮಯ್ಯ ಸಂತಾಪ
ಬೆಂಗಳೂರು, ಡಿಸೆಂಬರ್ 10: ಕೇಂದ್ರದ ಮಾಜಿ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕಷ್ಣ (92) ವಿಧಿವಶರಾಗಿದ್ದಾರೆ. ಬೆಂಗಳೂರಿನಲ್ಲಿ ಅವರು ಕೊನೆಯುಸಿರೆಳೆದಿದ್ದು, ವಿವಿಧ ಪಕ್ಷಗಳ ಹಲವಾರು ನಾಯಕರು ಅಗಲಿದ ನಾಯಕನಿಗೆ ಸಂತಾಪವನ್ನು ಸೂಚಿಸುತ್ತಿದ್ದಾರೆ. ರಾಜಕೀಯ ನಾಯಕರು ಬೆಳಗಾವಿಯಲ್ಲಿದ್ದು, ಹಲವಾರು ಗಣ್ಯರು ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಎಸ್. ಎಂ. ಕೃಷ್ಣ ಅವರ ಅಂತ್ಯಕ್ರಿಯೆ ಬುಧವಾರ ನಡೆಯಲಿದೆ.
ಚಳಿಗಾಲದ ಅಧಿವೇಶನದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್. ಎಂ. ಕೃಷ್ಣ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. 5 ದಶಕಗಳ ಕಾಲ ಎಸ್. ಎಂ. ಕೃಷ್ಣ ಕಾಂಗ್ರೆಸ್ ಪಕ್ಷದಲ್ಲಿದ್ದರು. ಸಿದ್ದರಾಮಯ್ಯ ಎಸ್. ಎಂ. ಕೃಷ್ಣ ಜೊತೆಗಿನ ಒಡನಾಟ ನೆನಪು ಮಾಡಿಕೊಂಡಿದ್ದಾರೆ. ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ.

ಸಿದ್ದರಾಮಯ್ಯ ಸಂತಾಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, "ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ" ಎಂದು ಹೇಳಿದ್ದಾರೆ.
"ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ ನನಗೆ ಮಾರ್ಗದರ್ಶಕರಾಗಿದ್ದ ಕೃಷ್ಣ ಅವರು ಸದಾ ನನ್ನ ಹಿತೈಷಿಗಳಾಗಿದ್ದರು. ಕೃಷ್ಣ ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿಯಾಗಿದೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
"ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ" ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಬುಧವಾರ ಅಂತ್ಯಕ್ರಿಯೆ: ಎಸ್. ಎಂ. ಕೃಷ್ಣ ಪಾರ್ಥೀವ ಶರೀರ ಸದ್ಯ ಸದಾಶಿವನಗರದಲ್ಲಿ ನಿವಾಸದಲ್ಲಿದೆ. ವಿವಿಧ ಗಣ್ಯರು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಬುಧವಾರ ಎಸ್. ಎಂ. ಕೃಷ್ಣ ಅಂತ್ಯಕ್ರಿಯೆ ಬೆಂಗಳೂರು ಅಥವ ಮಂಡ್ಯದಲ್ಲಿ ನಡೆಯುವ ಸಾಧ್ಯತೆ ಇದೆ.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಬೆಳಗಾವಿಯಿಂದ ಆಗಮಿಸಲು ಎಲ್ಲರೂ ಕಾಯುತ್ತಿದ್ದಾರೆ. ಅವರು ಆಗಮಿಸಿದ ಬಳಿಕ ಎಸ್. ಎಂ. ಕೃಷ್ಣ ಕುಟುಂಬಸ್ಥರ ಜೊತೆ ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.
ಮಂಡ್ಯದ ಸೋಮನಹಳ್ಳಿಯಲ್ಲಿ ಎಸ್. ಎಂ. ಕೃಷ್ಣ ತಂದೆ ಮತ್ತು ತಾಯಿಯ ಸಮಾಧಿ ಇದೆ. ಇದೇ ಸ್ಥಳದಲ್ಲಿಯೇ ಎಸ್. ಎಂ. ಕೃಷ್ಣ ಅಂತ್ಯಕ್ರಿಯೆ ನಡೆಸುವ ನಿರೀಕ್ಷೆ ಇದೆ. ಸ್ಥಳದ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ.
ಎಸ್. ಎಂ. ಕೃಷ್ಣ ನಿಧನಕ್ಕೆ ಮಾಜಿ ಸಂಸದ ಡಿ. ಕೆ. ಸುರೇಶ್ ಸಂತಾಪ ಸೂಚಿಸಿದ್ದಾರೆ. 'ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ, ಕೇಂದ್ರ ಮಂತ್ರಿಗಳಾಗಿದ್ದ ಶ್ರೀ ಎಸ್. ಎಂ. ಕೃಷ್ಣ ಅವರು ನಿಧನರಾದ ಸುದ್ದಿ ಬಹಳ ನೋವು ತಂದಿದೆ. ಎಸ್. ಎಂ. ಕೃಷ್ಣ ಅವರ ದೂರದೃಷ್ಟಿ ಮತ್ತು ನಾಯಕತ್ವ ನಮ್ಮ ಬೆಂಗಳೂರು ಭಾರತದ ಟೆಕ್ ರಾಜಧಾನಿಯಾಗಲು ಹಾಗೂ ಐಟಿ ಯಶಸ್ಸಿಗೆ ಅಡಿಪಾಯ ಹಾಕಿತು. ಪಕ್ಷ ಬೇಧ ಮಾಡದೇ, ಅಜಾತ ಶತ್ರುವಾಗಿ, ಸಜ್ಜನ ರಾಜಕಾರಣಿಯಾಗಿ ಶ್ರೀಯುತರು ಹೆಸರು ಗಳಿಸಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.












Click it and Unblock the Notifications