'ಕರ್ನಾಟಕ ಜರ್ಮನ್ ಬಹುಕೌಶಲ್ಯ ತರಬೇತಿ ಕೇಂದ್ರ'ದಿಂದ 4,000 ಮಂದಿಗೆ ಕೌಶಲ ತರಬೇತಿ: ಅಶ್ವಥ್ ನಾರಾಯಣ
ಬೆಳಗಾವಿ, ಡಿಸೆಂಬರ್ 28: ಕರ್ನಾಟಕದಲ್ಲಿ ಹೊಸದಾಗಿ ಸ್ಥಾಪನೆಯಾಗಲಿರುವ 'ಕರ್ನಾಟಕ ಜರ್ಮನ್ ಬಹುಕೌಶಲ್ಯ ತರಬೇತಿ ಕೇಂದ್ರ' (ಕೆಜಿಟಿಟಿಐ)ದಿಂದ ಪ್ರತಿ ವರ್ಷ 4,000 ಯುವಜನರಿಗೆ ತರಬೇತಿ ನೀಡಲಾಗುವುದು ಎಂದು ಕೌಶಲಾಭಿವೃದ್ಧಿ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ ತಿಳಿಸಿದರು.
ಬುಧವಾರ ಗುರುವಾರ ಬೆಳಗಾವಿಯಲ್ಲಿ ಒಟ್ಟು ಸುಮಾರು 15.5 ಕೋಟಿ ರೂಪಾಯಿ ವೆಚ್ಚದ 'ಕರ್ನಾಟಕ ಜರ್ಮನ್ ಬಹುಕೌಶಲ್ಯ ತರಬೇತಿ ಕೇಂದ್ರ' (ಕೆಜಿಟಿಟಿಐ) ಕಟ್ಟಡ ನಿರ್ಮಾಣಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಕೋರ್ಸ್ ಗಳಿಗೆ ಸಂಬಂಧಿಸಿದಂತೆ ತರಬೇತಿ ಕೊಡಲಾಗುವುದು. ಈ ಕೋರ್ಸ್‌ಗಳು ಪ್ರವರ್ಧಮಾನಕ್ಕೆ ಬರುತ್ತಿರುವ ಎಲೆಕ್ಟ್ರಿಕ್ ವೆಹಿಕಲ್ಸ್, ವಾಹನ ತಾಂತ್ರಿಕತೆಯಂತಹ ವಿಷಯಗಳನ್ನು ಒಳಗೊಂಡಿರಲಿವೆ ಎಂದು ತಿಳಿಸಿದರು.

ತಯಾರಿಕಾ ಕ್ಷೇತ್ರವು ಇಂದು ಊಹೆಗೂ ನಿಲುಕುದಷ್ಟು ಮುಂದುವರೆದಿದೆ. ಅದಕ್ಕೆ ಅನುಗುಣವಾಗಿ ಈ ಕೇಂದ್ರದಲ್ಲಿ ಆತ್ಯಾಧುನಿಕ ರೀತಿಯಲ್ಲಿ ತರಬೇತಿ ನೀಡಲಾಗುವುದು. ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಕರ್ನಾಟಕವು ಇಡೀ ಪ್ರಪಂಚದಲ್ಲೇ ಭರವಸೆಯ ತಾಣವಾಗಿದೆ. ಆದರೆ, ಇದರ ಲಾಭವು ನಮಗೆ ಸಿಗಬೇಕೆಂದರೆ ನಮ್ಮ ಯುವಕರು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇದನ್ನು ಗಮನದಲ್ಲಿರಿಸಿಕೊಂಡು ಇಂತಹ ಕೇಂದ್ರಗಳನ್ನು ಸರ್ಕಾರವು ಆದ್ಯತೆಯ ಮೇರೆಗೆ ಸ್ಥಾಪಿಸುತ್ತಿದೆ ಎಂದು ವಿವರಿಸಿದರು.
ಬೆಂಗಳೂರಿನ 2 ಕಂಪನಿಗಳಿಂದ ಹೆಚ್ಚು ವಹೀವಾಟು
ದೇಶಕ್ಕೆ ಕೈಗಾರಿಕಾ ಕ್ರಾಂತಿ ಮೊದಲು ಮೂರು (1, 2,3) ಕ್ರಾಂತಿಯ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಈಗ ಕೈಗಾರಿಕಾ ಕ್ರಾಂತಿ 4.0ರ ಅವಕಾಶಗಳನ್ನು ನಾವು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು. ಕರ್ನಾಟಕವು ಅವಕಾಶಗಳ ತಾಣವಾಗಿದ್ದು, ಈ ಮೊದಲು ಮುಂಬೈ ದೇಶದ ಹಣಕಾಸು ರಾಜಧಾನಿಯಾಗಿತ್ತು.

ಸದ್ಯ ಬೆಂಗಳೂರಿನಲ್ಲಿರುವ ಎರಡೇ ಎರಡು ಆನ್‌ಲೈನ್ ಕಂಪನಿಗಳು ದೇಶದ ಶೇ. 50ರಷ್ಟು ಷೇರು ವಹಿವಾಟನ್ನು ನಿರ್ವಹಿಸುತ್ತಿವೆ. ಇನ್ನು ಐದು ವರ್ಷಗಳಲ್ಲಿ ರಾಜ್ಯದ ಫಿನ್ ಟೆಕ್ ಕಂಪನಿಗಳು ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದೇ ರೀತಿಯಾಗಿ, ಶಿಕ್ಷಣ ತಂತ್ರಜ್ಞಾನ ಮೆಡಿ ಟೆಕ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯವು ಅಗ್ರಸ್ಥಾನದಲ್ಲಿದೆ ಎಂದು ತಿಳಿಸಿದರು.
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತಿತರರು ಇದ್ದರು. ಕೆಜಿಎಂಎಸ್ ಡಿಸಿ ಜಂಟಿ ಕಾರ್ಯದರ್ಶಿ ಬಿ.ಎಸ್ ರಘುಪತಿ ಸ್ವಾಗತಿಸಿದರು. ಕೆಜಿಟಿಟಿಐ ಬೆಳಗಾವಿ ನಿರ್ದೇಶಕ ಚಿದಾನಂದ ಬಾಕೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications