1ನೇ ತರಗತಿಗೆ ಸೇರಲು 6 ವರ್ಷ ಕಡ್ಡಾಯ: ಸರ್ಕಾರದ ಆದೇಶಕ್ಕೆ ಪೋಷಕರ ಆಕ್ರೋಶ
ಬೆಂಗಳೂರು, ಮಾರ್ಚ್ 03: ಜೂನ್ 1ರಿಂದ ಒಂದನೇ ತರಗತಿಗೆ ಮಕ್ಕಳು ದಾಖಲಾಗಲು 6 ವರ್ಷ ಕಡ್ಡಾಯ ಎಂಬ ನಿಯಮ ಈಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಈ ನಿಯಮವನ್ನು ಸಡಿಲಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಖಾಸಗಿ ಶಾಲೆಗಳ ಪ್ರವೇಶ ಪ್ರಕ್ರಿಯೆ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಮುಗಿಯಲಿದೆ. ಆದ್ದರಿಂದ ಪೋಷಕರು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡುತ್ತಿದ್ದಾರೆ.
2025-26ನೇ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ಮಕ್ಕಳು ದಾಖಲಾಗಲು ಜೂನ್ 1ಕ್ಕೆ 6 ವರ್ಷ ತುಂಬಿರಬೇಕು ಎಂದು ಸರ್ಕಾರ ಆದೇಶವನ್ನು ಹೊರಡಿಸಿದೆ. ಕೇಂದ್ರ ಶಿಕ್ಷಣ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ ನಿರ್ದೇಶನದ ಅನ್ವಯ 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿಯನ್ನು 6 ವರ್ಷ ಎಂದು ನಿಗದಿಪಡಿಸಲಾಗಿದೆ.

ಆದರೆ ಈ ನಿಯಮ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರದ ಈ ನಿಯಮದಿಂದ 2019ರ ಜೂನ್‌ನಿಂದ ಡಿಸೆಂಬರ್ ತನಕ ಹುಟ್ಟಿದ ಮತ್ತು 2022ರಲ್ಲಿ ಪ್ರಿಕೆಜೆ, ಮಾಂಟೆಸ್ಸರಿಗೆ ಸೇರಿದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಸರ್ಕಾರ ನಿಯಮ ಸಡಿಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಚಿವರು ಹೇಳಿದ್ದೇನು?: ಈ ಕುರಿತು ಕೆಲವು ದಿನಗಳ ಹಿಂದೆ ಮಾತನಾಡಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, "ಒಂದನೇ ತರಗತಿ ದಾಖಲಾತಿಗೆ 6 ವರ್ಷ ವಯಸ್ಸು ಕಡ್ಡಾಯ ನಿಯಮ ಸಡಿಲಿಕೆ ಸಾಧ್ಯವಿಲ್ಲ. 6 ವರ್ಷದ ನಿಯಮ ಸಡಿಲಿಕೆ ಆಗುವುದಿಲ್ಲ" ಎಂದು ಹೇಳಿದ್ದರು.
ರಾಜ್ಯ ಸರ್ಕಾರ 2018ರಲ್ಲಿ ಒಂದನೇ ತರಗತಿ ಪ್ರವೇಶದ ವಯಸ್ಸನ್ನು 5 ವರ್ಷ 5 ತಿಂಗಳಿಗೆ ನಿಗದಿ ಮಾಡಿತ್ತು. ಪೂರ್ವ ಪ್ರಾಥಮಿಕ ಶಿಕ್ಷಣ 2.5 ವರ್ಷದಿಂದ ಆರಂಭಿಸಲು ಅವಕಾಶ ನೀಡಿತ್ತು. ಆದರೆ 2022ರ ಡಿಸೆಂಬರ್‌ನಲ್ಲಿ 1ನೇ ತರಗತಿ ಪ್ರವೇಶವನ್ನು 6 ವರ್ಷಕ್ಕೆ ನಿಗದಿ ಮಾಡಲಾಯಿತು ಎಂದು ಪೋಷಕರು ತಿಳಿಸಿದ್ದಾರೆ.
2020, 2021ರಲ್ಲಿ ಪ್ರವೇಶ ಪಡೆದ ಮಕ್ಕಳಿಗೆ ಎರಡು ವರ್ಷ ಸಡಿಲಿಕೆ ನೀಡಿ 1ನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ 2022ರಲ್ಲಿ ಪ್ರವೇಶ ಪಡೆದ 6 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಈ ಸಡಿಲಿಕೆ ನೀಡಲಾಗಿಲ್ಲ. ಇದರಿಂದ 2022ರಲ್ಲಿ ಪ್ರಿಕೆಜಿ, ಮಾಂಟೆಸ್ಸರಿಗೆ ಸೇರಿದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ಪೂರ್ವ ಪ್ರಾಥಮಿಕ ಶಿಕ್ಷಣ ಮುಗಿಸಿದರೂ ಸಹ 1ನೇ ತರಗತಿಗೆ ಸೇರಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಪೂರ್ವ ಪ್ರಾಥಮಿಕ ಶಿಕ್ಷಣ ಮುಗಿಸಿದರೂ ಸಹ ಒಂದು ವರ್ಷ ಮಕ್ಕಳು ಮನೆಯಲ್ಲಿ ಇರಬೇಕಿದೆ ಇಲ್ಲವೇ ಪುನಃ ಯುಕೆಜಿಗೆ ಹೋಗಬೇಕಿದೆ. 2019ರ ಡಿಸೆಂಬರ್ ತನಕ ಹುಟ್ಟಿದ ಮಕ್ಕಳು, 2022ರಲ್ಲಿ ಪ್ರಿಕೆಜೆ, ಮಾಂಟೆಸ್ಸರಿಗೆ ಸೇರಿದ ಮಕ್ಕಳಿಗೆ ಮುಂದಿನ ತರಗತಿಗೆ ದಾಖಲಾಗಲು ಅವಕಾಶ ನೀಡಬೇಕು ಎಂದು ಪೋಷಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಹಲವು ಶಾಲೆಗಳಲ್ಲಿ 1ನೇ ತರಗತಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದ ಕಾರಣ ಸರ್ಕಾರ ಈ ಕುರಿತು ತ್ವರಿತವಾಗಿ ಕ್ರಮವನ್ನು ಕೈಗೊಂಡು ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.












Click it and Unblock the Notifications