Shivrajkumar: ಪತ್ನಿ ಗೀತಾ ನಿರ್ಧಾರಕ್ಕೆ ಬೆಂಬಲ ನೀಡಿದ ಶಿವರಾಜಕುಮಾರ್: ನಾಳೆ ಪ್ರಚಾರದ ಕಣಕ್ಕೆ ಹ್ಯಾಟ್ರಿಕ್ ಹೀರೋ ಎಂಟ್ರಿ
ಬೆಂಗಳೂರು ಏಪ್ರಿಲ್ 28: ದೊಡ್ಮನೆ ಸೊಸೆ ಹಾಗೂ ನಟ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಇಂದು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಪತ್ನಿ ಗೀತಾ ನಿರ್ಧಾರಕ್ಕೆ ಶಿವರಾಜ್‌ಕುಮಾರ್ ಕೂಡ ಬೆಂಬಲವನ್ನು ಸೂಚಿಸಿದ್ದಾರೆ.
ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇಂದು ಗೀತಾ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. 12 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಅವರು ಪಕ್ಷ ಸೇರುತ್ತಾರೆ. ಅವರ ನಿರ್ದಾಕ್ಕೆ ನನ್ನ ಬೆಂಬಲ ಇದೆ. ನಾಳೆಯಿಂದಲೇ ಅವರು ಪ್ರಚಾರ ನಡೆಸಲಿದ್ದಾರೆ. ಅವರೊಂದಿಗೆ ನಾನೂ ಕೂಡ ಪ್ರಚಾರದಲ್ಲಿ ಭಾಗಿಯಾಗುತ್ತೇನೆ' ಎಂದು ಶಿವರಾಜ್‌ಕುಮಾರ್ ಹೇಳಿದರು.

ನಾಳೆ ಸೊರಬ ಕ್ಷೇತ್ರದಲ್ಲಿ ಮಧುಬಂಗಾರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಗೀತಾ ಪ್ರಚಾರ ನಡೆಸಲಿದ್ದಾರೆ. ಪ್ರಚಾರದಲ್ಲಿ ನಾನೂ ಕೂಡ ಭಾಗಿಯಾಗಲಿದ್ದೇನೆ ಎಂದು ಅವರು ಹೇಳಿದರು. ಇದರಿಂದ ಕಾಂಗ್ರೆಸ್‌ಗೆ ಆನೆಬಲ ಬಂದಂತಾಗಿದೆ. ಸಾಕಷ್ಟು ಅಭಿಮಾನಿ ಬಲವನ್ನು ಹೊಂದಿರುವ ಶಿವರಾಜ್‌ಕುಮಾರ್ ಅವರ ಪ್ರಚಾರ ಕಾಂಗ್ರೆಸ್ ಗೆಲುವಿಗೆ ಪುಷ್ಠಿ ನೀಡುವುದರಲ್ಲಿ ಅನುಮಾನವೇ ಇಲ್ಲ.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕುಟುಂಬದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಈ ಬಾರಿಯ ಚುನಾವಣೆಗೆ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. 2013ರ ಚುನಾವಣೆಯಲ್ಲಿ ಮಧು ಬಂಗಾರಪ್ಪ ಸೊರಬದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಕಂಡಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ಕುಮಾರ್ ಬಂಗಾರಪ್ಪ ವಿರುದ್ಧ ಸೋಲು ಕಂಡಿದ್ದರು.

ಮಧು ಬಂಗಾರಪ್ಪ ಸಹೋದರ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ. ಹಾಲಿ ಸೊರಬ ಕ್ಷೇತ್ರದ ಶಾಸಕರು. ಕಾಂಗ್ರೆಸ್‌ನಲ್ಲಿದ್ದ ಅವರು 2018ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸೇರಿದ್ದರು. ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಅವರು ಈ ಬಾರಿಯ ಚುನಾವಣೆಯಲ್ಲಿಯೂ ಸೊರಬದ ಬಿಜೆಪಿ ಅಭ್ಯರ್ಥಿ. ಗೀತಾ ಶಿವರಾಜ್ ಕುಮಾರ್ ಮೊದಲಿನಿಂದಲೂ ರಾಜಕೀಯವಾಗಿ ಮಧು ಬಂಗಾರಪ್ಪ ಜೊತೆ ಗುರುತಿಸಿಕೊಂಡಿದ್ದಾರೆ.
ಅವರು 2014ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಮಧು ಬಂಗಾರಪ್ಪ ಅವರ ಜೊತೆ ಪ್ರಚಾರ ಮಾಡಿದ್ದರು. 2018ರ ಚುನಾವಣೆಯಲ್ಲಿ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ಸೊರಬದಲ್ಲಿ ಕಣದಲ್ಲಿದ್ದಾಗ ಗೀತಾ ಶಿವರಾಜ್ ಕುಮಾರ್ ಸಹ ಚುನಾವಣಾ ಪ್ರಚಾರ ನಡೆಸಿದ್ದರು.
ಶಿವಮೊಗ್ಗದ ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಗೀತಾ ಶಿವಕುಮಾರ್, ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಗೀತಾ ಶಿವಕುಮಾರ್ ಕುಮಾರ್ ಅವರ ಜೆಡಿಎಸ್ ಪಕ್ಷದಿಂದ ಈ ಹಿಂದೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.

ಗೀತಾ ಶಿವರಾಜ್‌ಕುಮಾರ್ ಅವರು ಕಾಂಗ್ರೆಸ್ ಸೇರ್ಪಡೆಯಿಂದ ಕ್ಷೇತ್ರದಲ್ಲಿ ಸ್ಥಳೀಯವಾಗಿ ಸಂದೇಶ ರವಾನೆ ಆಗಲಿದೆ ಹಾಗೂ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಲಿದೆ ಎನ್ನಲಾಗಿದೆ. ಸದ್ಯ ಇವರೊಂದಿಗೆ ಶಿವರಾಜ್‌ಕುಮಾರ್ ಕೂಡ ಪ್ರಚಾರದಲ್ಲಿ ಭಾಗವಹಿಸುತ್ತಿರುವುದು ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆದಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವೂ ಮುಗಿದಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications