ಗೌರಿ ಹತ್ಯೆ: ನವೀನ್ ಕುಮಾರ್ ಹೇಳಿಕೆಯಲ್ಲಿದೆ ಮತ್ತೊಂದು ಹೆಸರು
ಬೆಂಗಳೂರು, ಜೂನ್ 14: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ 6 ಜನರನ್ನು ಬಂಧಿಸಿರುವ ಎಸ್‌ಐಟಿ ಪೊಲೀಸರು ಈಗ ಮತ್ತೊಬ್ಬ ಆರೋಪಿಯನ್ನು ಬಂಧಿಸುವ ಸಾಧ್ಯತೆ ಇದೆ.
ಆರೋಪಿ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜ ನೀಡಿರುವ ಸ್ವ-ಇಚ್ಛಾ ಹೇಳಿಕೆಯಲ್ಲಿ ಸಹ ಮೋಹನ್ ಗೌಡ ಹೆಸರು ಉಲ್ಲೇಖಿಸಿದ್ದು, ಆತನೇ ಮತ್ತೊಬ್ಬ ಆರೋಪಿ ಪ್ರವೀಣ್‌ನನ್ನು ಪರಿಚಯಿಸಿದ್ದ ಎಂದು ಹೇಳಿದ್ದಾರೆ.
ಮೋಹನ್ ಗೌಡ ಬೆಂಗಳೂರಿನವರೇ ಆಗಿದ್ದು, ಹಿಂದೂ ಜನ ಜಾಗೃತಿ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಇವರು ಬಲಿದಾನ್ ಕಾರ್ಯಕ್ರಮದಲ್ಲಿ ನವೀನ್ ಕುಮಾರ್ ಅವರ ಭಾಷಣದಿಂದ ಪ್ರೇರಿತರಾಗಿ ಅಲ್ಲಿಂದ ಪರಿಚಯ ಬೆಳೆಸಿಕೊಂಡಿದ್ದಾರೆ.

ಆ ನಂತರ ಮೋಹನ್ ಗೌಡ ಅವರು ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ನವೀನ್ ಕುಮಾರ್ ನನ್ನು ಆಹ್ವಾನಿಸಿ ಅಲ್ಲಿ ಪ್ರವೀಣ್ ಅವರನ್ನು ಪರಿಚಯ ಮಾಡಿಸಿದ್ದರು ಎಂದು ನವೀನ್ ಹೇಳಿದ್ದಾರೆ. ಆದರೆ ಪರಿಚಯಿಸಿದ ಉದ್ದೇಶ ಹತ್ಯೆಯೇ ಆಗಿದಿಯೇ ಎಂಬುದು ಸ್ಪಷ್ಟವಾಗಿಲ್ಲ.
ಗೌರಿ ಹತ್ಯೆಗೆ ಭಾರಿ ತಯಾರಿ ನಡೆಸಲಾಗಿತ್ತು ಎಂಬುದನ್ನು ಎಸ್‌ಐಟಿ ಮೂಲಗಳು ಬಹಿರಂಗ ಪಡಿಸಿದ್ದು, ಹಲವು ತಿಂಗಳುಗಳ ಕಾಲ ಇದರ ಪೂರ್ವ ಯೋಜನೆ ನಡೆದಿತ್ತು ಎನ್ನಲಾಗಿದೆ. ಒಟ್ಟು ಮೂರು ತಂಡಗಳು ಗೌರಿ ಹತ್ಯೆಯ ಹಿಂದೆ ಕೆಲಸ ಮಾಡಿದ್ದಾವೆ ಎನ್ನಲಾಗಿದೆ.












Click it and Unblock the Notifications