SIR: 2029ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದೀರಾ? ಪ್ರಕಾಶ್ ರಾಜ್‌ಗೆ ನೆಟ್ಟಿಗರ ಪ್ರಶ್ನೆ
SIR: ಕರ್ನಾಟಕದಾದ್ಯಂತ ಎಸ್‌ಐಆರ್ ವಿರುದ್ಧ ಅಭಿಯಾನ ಪ್ರಾರಂಭಿಸಿದ ನಟ ಪ್ರಕಾಶ್ ರಾಜ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಶುರುವಾಗಿದೆ. ಹಲವು ನೆಟ್ಟಿಗರು ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ, ನೀವು 2029 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದೀರಾ ಎಂದೂ ಕೆಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಮಹತ್ವದ ಚರ್ಚೆ ನಡೆಯುತ್ತಿದೆ. ಇದೀಗ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಒಂದು ಪಿತೂರಿ ಎಂದು ನಟ, ಸಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರು ಆರೋಪಿಸಿದ್ದು, ಎಸ್‌ಐಆರ್ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದಾದ್ಯಂತ ವಿಶೇಷ ಅಭಿಯಾನ ಪ್ರಾರಂಭಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಫಾರ್ಮ್ 6ಕ್ಕೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದ ಆಯುಕ್ತರಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ, ಮೂವರು ಆಯುಕ್ತರು ಜಂಟಿ ಪತ್ರಿಕಾಗೋಷ್ಠಿಯನ್ನು ನೀಡಿ ಸ್ಪಷ್ಟನೆ ಸಹ ಕೊಟ್ಟಿದ್ದರು. ಆದರೆ ಎಸ್‌ಐಆರ್ ಹಾಗೂ ಇದರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜನರಲ್ಲಿ ಇನ್ನೂ ಗೊಂದಲ ಇದೆ. ವಿರೋಧ ಪಕ್ಷಗಳು ಬಿಜೆಪಿಗೆ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಆರೋಪಿಸಿವೆ.

ಎಸ್‌ಐಆರ್ ವಿರೋಧಿಸಿ ಕರ್ನಾಟಕದಾದ್ಯಂತ ಅಭಿಯಾನ
ಇನ್ನು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯು (SIR) ಪಿತೂರಿ ಎಂದು ನಟ ಪ್ರಕಾಶ್ ರಾಜ್ ಅವರು ಟೀಕೆ ಮಾಡಿದ್ದಾರೆ. ಕರ್ನಾಟಕದಾದ್ಯಂತ 10 ದಿನಗಳ ಕಾಲ ವಿಶೇಷ ಅಭಿಯಾನ ನಡೆಸುವುದಾಗಿ ಹೇಳಿದ್ದಾರೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಅವರು ಅಭಿಯಾನ ಪ್ರಾರಂಭಿಸಿದ್ದಾರೆ. SIR ಎನ್ನುವುದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಕ್ರಮವಷ್ಟೇ. ನೆಲಮಟ್ಟದಲ್ಲಿ ನಡೆಯುತ್ತಿರುವ ಘಟನೆಗಳು, ಜನರ ಅಸಹಾಯಕತೆ ಮತ್ತು SIR ಬಗ್ಗೆ ಕೇಳಿಬರುತ್ತಿರುವ ಹಲವು ಅನುಮಾನಗಳು ಆಘಾತ ಮೂಡಿಸುತ್ತಿವೆ ಎಂದೂ ನಟ ಪ್ರಕಾಶ್ ರಾಜ್ ಅವರು ಹೇಳಿದ್ದಾರೆ. ತುಮಕೂರಿನ ಎನ್‌ಆರ್ ಕಾಲೊನಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ನಿಂದ ಸಮಸ್ಯೆಗೆ ಒಳಪಟ್ಟಿರುವ ಪ್ರದೇಶಗಳ ಜನರೊಂದಿಗೆ ನಟ ಪ್ರಕಾಶ್ ರಾಜ್ ಅವರು ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ಚುನಾವಣಾ ಆಯೋಗ ಹಾಗೂ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲವೂ ಸರಿ ಇದೆ ಎಂದು ಚುನಾವಣಾ ಆಯೋಗವು ಹೇಳುತ್ತಿದೆ. ಆದರೆ, ಇಲ್ಲಿ ಯಾವುದೂ ಸರಿ ಇಲ್ಲ ಅಂತ ಪ್ರಕಾಶ್ ರಾಜ್ ಹೇಳಿದ್ದಾರೆ.
ನೆಟ್ಟಿಗರು ಹೇಳಿದ್ದೇನು ?
ಇನ್ನು ಎಸ್ ಐಆರ್‌ಗೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಅವರು ಕರ್ನಾಟಕದಾದ್ಯಂತ ನಡೆಸುತ್ತಿರುವ ಅಭಿಯಾನಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಎಸ್‌ಐಆರ್ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಪ್ರಜಾಪ್ರಭುತ್ವವನ್ನು ಬಲಪಡಿಸುವ ಕ್ರಮವಾಗಿದೆ. ಅನರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದು, ದೊಡ್ಡ ಪ್ರಮಾಣದ ನಕಲಿ ಮತಗಳು ಹಾಗೂ ನಕಲಿ ಮತದಾರರನ್ನು ಸೃಷ್ಟಿಸುವ ಉದ್ದೇಶಪೂರ್ವಕ ಮತ್ತು ಯೋಜಿತ ತಂತ್ರಗಳಿಂದ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತದೆ. ಇಂತಹ ಕ್ರಮಗಳು ಹಲವು ವಿರೋಧ ಪಕ್ಷಗಳ ಮತಬ್ಯಾಂಕ್ ರಾಜಕೀಯದ ಮೂಲವಾಗಿವೆ. ಇದನ್ನು ಬಿಜೆಪಿ ಸರಿಪಡಿಸಿದೆ ಎಂದೂ ಕೆಲವರು ಹೇಳಿಕೊಂಡಿದ್ದಾರೆ.
ಪ್ರಕಾಶ್ ರಾಜ್ ಅವರೇ, ಎಲ್ಲರಿಗೂ ಒಂದೇ ರೀತಿಯ ಪ್ರಕ್ರಿಯೆ ಅನ್ವಯವಾಗುತ್ತದೆ. ನಾವು ನಮ್ಮ ಅರ್ಜಿಗಳನ್ನು ಭರ್ತಿ ಮಾಡಿದ್ದೇವೆ. ಕೆಲವು ಪ್ರಶ್ನೆಗಳಿದ್ದವು. ಬಿಎಲ್‌ಒ ನಮ್ಮ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಅಗತ್ಯ ದಾಖಲೆಗಳನ್ನು ತೋರಿಸಿ, ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರುಗಳು ಇರುವಂತೆ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೇವೆ. ಎಲ್ಲರೂ ಅನುಸರಿಸಬೇಕಾದ ಒಂದು ನಿಗದಿತ ಪ್ರಕ್ರಿಯೆ ಇದೆ ಅಂತಲೂ ಕೆಲವರು ಹೇಳಿದ್ದಾರೆ.


Click it and Unblock the Notifications
