ಗೃಹ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಒಂದಂಕಿ ಲಾಟರಿ!

single-digit-lottery-in-kanakapura-ramanagara-5-arrested
ರಾಮನಗರ, ಸೆ. 26: ಪ್ರತಿ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ರಾಜ್ಯದಲ್ಲಿ ಮತ್ತೆ ಒಂದಂಕಿ ಲಾಟರಿ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಆರೋಪಿಸಿದ ಬೆನ್ನಲ್ಲೇ ಗೃಹ ಸಚಿವ ಕೆಜೆ ಜಾರ್ಜ್ ಉಸ್ತುವಾರಿ ವಹಿಸಿಕೊಂಡಿರುವ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಲಾಟರಿ ಮಾರಾಟ ದಂಧೆ ಬೆಳಕಿಗೆ ಬಂದಿದೆ.

ಕನಕಪುರದ ಪುರಠಾಣೆ ವ್ಯಾಪ್ತಿಯಲ್ಲಿ ಈ ಅಕ್ರಮ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಹಿರಿಯ ಪೊಲೀಸ್ ಅಧಿಕಾರಿಗಳು ಅಕ್ರಮ ಒಂದಂಕಿ ಲಾಟರಿ ದಂಧೆ ನಡೆಯುತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸಿ 1844 ಒಂದಂಕಿ ಲಾಟರಿ ಚೀಟಿಗಳನ್ನು ವಶಪಡಿಸಿಕೊಂಡು 5 ಮಂದಿಯನ್ನು ಬಂಧಿಸಿದ್ದಾರೆ.

ಒಂದಂಕಿ ಲಾಟರಿ ದಂಧೆಯಲ್ಲಿ ತೊಡಗಿದ್ದ ಮುಜಾಹಿದ್, ಮಂಜುನಾಥ್, ವೀರಸೇನಾ, ದತ್ತ ಮತ್ತು ಕೃಷ್ಣಪ್ಪ ಪೊಲೀಸರ ಅತಿಥಿಯಾದವರು. ಇವರೆಲ್ಲ ಕನಕಪುರ ಪಟ್ಟಣದ ನಿವಾಸಿಗಳು. ಕನಕನಪುರ ಸಿಪಿಐ ಧನಂಜಯ ಮತ್ತು ಪಿಎಸೈ ಅಶೋಕ್ ಬಂಧಿತರಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ.

ಕರ್ನಾಟಕದಲ್ಲಿ ಒಂದಂಕಿ ಲಾಟರಿ ನಿಷೇಧವಾದ ಮೇಲೆ ಒಂದಂಕಿ ಲಾಟರಿ ವ್ಯವಹಾರ ನಡೆಸುತ್ತಿದ್ದವರು ಕಂಗಾಲಾಗಿದ್ದರು. ನಂತರ ಅಲ್ಲಲ್ಲಿ ಕದ್ದುಮುಚ್ಚಿ ದಂಧೆ ನಡೆಸುತ್ತಿದ್ದರೆಂದು ಹೇಳಲಾಗಿದ್ದು, ಈಗ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿಯೇ ಒಂದಂಕಿ ಲಾಟರಿ ದಂಧೆಯನ್ನ ನಡೆಸಲಾಗುತ್ತಿದೆ. ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳಿಂದ ಬರುವಂತಹ ಲಾಟರಿಯನ್ನ ಕಂಪ್ಯೂಟರೀಕರಣಗೊಳಿಸಿದ ಚೀಟಿಯನ್ನಾಗಿ ಮಾಡಿ ಮಾರಾಟ ಮಾಡುವ ಮೂಲಕ ಅಕ್ರಮವಾಗಿ ಒಂದಂಕಿ ಲಾಟರಿ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.

ಬೆಂಗಳೂರಿನ ಕಲಾಸಿಪಾಳ್ಯ ಒಂದಂಕಿ ಲಾಟರಿ ದಂಧೆಯ ಮೂಲ:
ಹೊರರಾಜ್ಯಗಳಿಂದ ಬರುವ ಲಾಟರಿಗಳು ಒಂದೊಂದು ಲಾಟರಿ 50 ರೂ ಮತ್ತು 100 ರೂಪಾಯಿ ಮೌಲ್ಯದ್ದಾಗಿರುತ್ತದೆ. ಈ ಲಾಟರಿಗಳ ಸಂಖ್ಯೆಯನ್ನ ಕಂಪ್ಯೂಟರ್ ಪ್ರಿಂಟ್‌ ಔಟ್ ತೆಗೆದು ಅನುಮಾನ ಬಾರದ ರೀತಿಯಲ್ಲಿ ಬೇರೆಡೆಗೆ ಮಾರಾಟ ಮಾಡಲು ಕಳುಹಿಸಿಕೊಡುತ್ತಾರೆ. ಈ ದಂಧೆ ಆರಂಭವಾಗುವುದು ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.

ಈ ಲಾಟರಿಗಳನ್ನ ಬೆಂಗಳೂರಿನ ಕಲಾಸಿಪಾಳ್ಯದಲ್ಲಿನ ಖಾಸಗಿ ಬಸ್ಸುಗಳ ಮೂಲಕ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ, ಮಂಡ್ಯ, ಕೋಲಾರ, ಕುಣಿಗಲ್ ಸೇರಿದಂತೆ ಹಲವೆಡಗಳಿಗೆ ಖಾಸಗಿ ಬಸ್ಸುಗಳಲ್ಲಿ ರವಾನಿಸಿ ಹಣ ಮಾಡಲಾಗುತ್ತಿದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿವೆ.

ಈ ದಂಧೆಯ ಹಿಂದೆ ದೊಡ್ಡದೊಂದು ಗುಂಪೇ ಇದೆ ಎಂದು ಪೊಲೀಸ್ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಹೊರರಾಜ್ಯಗಳಿಂದ ಬರುವ ಲಾಟರಿಗಳನ್ನು ಮಾರಾಟ ಮಾಡಿದರೆ ಸಿಕ್ಕಿಬೀಳುತ್ತೇವೆಂದು ಬಿಳಿ ಹಾಳೆಯಲ್ಲಿ ಕಂಪ್ಯೂಟರಿನಲ್ಲಿ ಸಂಖ್ಯೆಗಳನ್ನು ಮುದ್ರಿಸುವುದು ದಂಧೆಯ ಮೊದಲನೇ ಹಂತವಾಗಿದೆ. ನಂತರ ಖಾಸಗಿ ಬಸ್ಸುಗಳನ್ನು ಬುಕ್ ಮಾಡಿಕೊಂಡು ಬೇರೆಡೆಗ ಸರಬರಾಜು ಮಾಡುವುದು ದಂಧೆಯ ಎರಡನೇ ಹಂತವಾಗಿದೆ. ನಂತರ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಗುಟ್ಟು ಬಿಟ್ಟುಕೊಡದ ವ್ಯಕ್ತಿಗಳ ಮೂಲಕ ಈ ಒಂದಂಕಿ ಲಾಟರಿ ಮಾರಾಟ ಮಾಡುವುದು ದಂಧೆಯ ಅಂತಿಮ ಹಂತ.

ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಒಂದಂಕಿ ಲಾಟರಿ ದಂಧೆ ಮಾಡುವವರು ಮೊದಲೇ ಅಡ್ವಾನ್ಸ್ ರೂಪದಲ್ಲಿ ಹಣ ನೀಡಿ ಒಂದಂಕಿ ಲಾಟರಿಯನ್ನ ಬೆಂಗಳೂರಿನ ಏಜೆಂಟರ ಮೂಲಕ ಖರೀದಿ ಮಾಡುತ್ತಾರೆ. ನಂತರ ಆ ಲಾಟರಿಗಳನ್ನ ಮಾರಾಟ ಮಾಡಿ ಹಣ ಗಳಿಸುವುದೇ ದಂಧೆಯಾಗಿದ್ದು, ಇದರಲ್ಲಿ ದೊಡ್ಡ ವ್ಯಕ್ತಿಗಳ ಕೈವಾಡ ಇದೆ ಎನ್ನಲಾಗುತ್ತಿದೆ.

ದಿನವೊಂದಕ್ಕೆ ಕನಕಪುರವೊಂದರಲ್ಲೇ 4 ಸಾವಿರ ಒಂದಂಕಿ ಲಾಟರಿಗಳು ಮಾರಾಟವಾಗುತ್ತದೆಂದು ಮಾಹಿತಿಯನ್ನ ಹೊರ ಬಿದ್ದಿದೆ. ಕನಕಪುರ, ದೊಡ್ಡಾಲಹಳ್ಳಿ, ಕೋಡಿಹಳ್ಳಿ, ಸಾತನೂರು ವ್ಯಾಪ್ತಿಯಲ್ಲಿ ಅತೀ ಹೆಚ್ಚು ಟಿಕೆಟ್‌ಗಳು ಮಾರಾಟವಾಗುತ್ತಿವೆ ಎಂದು ಬಂಧಿತರು ಹೇಳಿದ್ದಾರೆ. ಅದೇ ರೀತಿ ಚನ್ನಪಟ್ಟಣ, ರಾಮನಗರ ಮತ್ತು ಮಾಗಡಿ ತಾಲೂಕಿನಲ್ಲೂ ಗೌಪ್ಯವಾಗಿ ಈ ಒಂದಂಕಿ ಲಾಟರಿ ದಂಧೆ ನಡೆಯುತ್ತಿದೆ ಎಂದು ಬಂಧಿತರು ಬಾಯಿಬಿಟ್ಟಿದ್ದಾರೆಂದು ಹೇಳಲಾಗಿದೆ.

ಈ ದಂಧೆಯಲ್ಲಿ ಶಿವಾಜಿನಗರ ಮತ್ತು ಕಲಾಸಿಪಾಳ್ಯದಲ್ಲಿ ತನ್ನ ಹಿಡಿತ ಹೊಂದಿರುವ ಸೈಯದ್ ಎಂಬಾತ ದಂಧೆಯ ಕಿಂಗ್‌ ಪಿನ್ ಎಂದು ಪೊಲೀಸ್ ಮೂಲಗಳಿಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+