ಸಿದ್ದು vs ಡಿಕೆಶಿ: ಶ್ರಮಕ್ಕೆ ಫಲ ಕೊಡಿ, ಒಬ್ಬರ ಶ್ರಮದಿಂದ ಕಾಂಗ್ರೆಸ್ ಗೆದ್ದಿಲ್ಲ; ವಾದ-ಪ್ರತಿವಾದ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬರೋಬ್ಬರಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಭರ್ಜರಿ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಮುಖ್ಯಮಂತ್ರಿ ಆಯ್ಕೆ ವಿಚಾರ ತೀವ್ರ ಕಗ್ಗಂಟಾಗಿದೆ.
ಭಾನುವಾರ ರಾತ್ರಿ ಮುಖ್ಯಮಂತ್ರಿ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದರು.

ಇದರಿಂದ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದೇ, ಸಿಎಂ ಆಯ್ಕೆಯ ಹೊಣೆಯನ್ನು ಹೈಕಮಾಂಡ್‌ಗೆ ವಹಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಒಂದೆರಡು ದಿನಗಳಲ್ಲಿ ತೆರೆ ಬೀಳಲಿದೆ.
ಮುಖ್ಯಮಂತ್ರಿ ಆಯ್ಕೆ ಕಗ್ಗಂಟನ್ನು ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕು. ಇಬ್ಬರು ನಾಯಕರಲ್ಲಿ ಯಾರನ್ನು ಸಮಾಧಾನಿಸಲಿದ್ದಾರೆ, ಯಾರಿಗೆ ಸಿಎಂ ಹುದ್ದೆ ನೀಡಲಿದ್ದಾರೆ ಎಂಬ ರೋಚಕ ಕ್ಷಣಗಳನ್ನು ರಾಜ್ಯದ ಜನ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದಾರೆ.
ಸಿಎಂ ಪಟ್ಟಕ್ಕಾಗಿ ಡಿಕೆ ಶಿವಕುಮಾರ್ ವಾದವೇನು?
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನನ್ನ ಶ್ರಮ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಪಿಸಿಸಿ ಅಧ್ಯಕ್ಷರನ್ನು ಮುಖ್ಯಮಂತ್ರಿ ಮಾಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರ ಪ್ರಕಾರ ನಾನೇ ಮುಖ್ಯಮಂತ್ರಿಯಾಗಬೇಕು ಎಂದು ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.

ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದಾಗ ಎಲ್ಲರೂ ಕೈಚೆಲ್ಲಿ ಕೂತರು. ಆಗ ನಾನು ಪಕ್ಷದ ನೇತೃತ್ವ ವಹಿಸಿಕೊಂಡು ಬಲಪಡಿಸಿದ್ದೇನೆ. ಪಕ್ಷವನ್ನು ಪುನಃ ಸಂಘಟನೆ ಮಾಡಿದ್ದೇನೆ. ಅದರ ಫಲವಾಗಿ ಇಂದು ಪಕ್ಷ ಬಹುಮತ ಗಳಿಸಿದೆ. ಭಾರತ್ ಜೋಡೋ, ಮೇಕೆದಾಟು ಪಾದಯಾತ್ರೆಯಂತಹ ಹಲವು ಕಾರ್ಯಕ್ರಮಗಳಿಗೆ ನನ್ನ ಸ್ವಂತ ಹಣ ಖರ್ಚು ಮಾಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ.
ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿದ್ದೇನೆ. ಐಟಿ, ಇಡಿ, ಸಿಬಿಐ ತನಿಖೆ ಸಂಕಷ್ಟದ ನಡುವೆಯೂ ಪಕ್ಷದ ಗೆಲುವಿಗೆ ಹಗಲಿರುಳು ಎನ್ನದೆ ಶ್ರಮಿಸಿದ್ದೇನೆ. ಆದ್ದರಿಂದ ನನ್ನ ಶ್ರಮಕ್ಕೆ ಪ್ರತಿಫಲ ಕೇಳುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಸಿಎಂ ಕುರ್ಚಿಗಾಗಿ ತಮ್ಮ ವಾದ ಮುಂದಿಟ್ಟಿದ್ದಾರೆ.
ಸಿದ್ದರಾಮಯ್ಯ ಪ್ರತಿವಾದವೇನು?
ಶ್ರಮಕ್ಕೆ ತಕ್ಕ ಪ್ರತಿಫಲ ಕೇಳುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಪಟ್ಟು ಒಂದು ಕಡೆಯಾದರೆ, ಕಾಂಗ್ರೆಸ್ ಗೆಲುವಿಗೆ ಒಬ್ಬರ ಶ್ರಮ ಅಷ್ಟೇ ಇಲ್ಲ ಎಂದು ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಬಿಗಿಪಟ್ಟು ಹಿಡಿದಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೇವಲ ಕೆಪಿಸಿಸಿ ಅಧ್ಯಕ್ಷರು ಮಾತ್ರ ಶ್ರಮಪಟ್ಟಿಲ್ಲ. ಸಾಮೂಹಿಕ ನಾಯಕತ್ವದ ಶ್ರಮವಿದೆ. ಡಿ.ಕೆ. ಶಿವಕುಮಾರ್ ಒಬ್ಬರೇ ಪ್ರಚಾರ ಮಾಡಬಹುದಿತ್ತು. ನಾನೇಕೆ ಪ್ರಚಾರದಲ್ಲಿ ತೊಡಗಬೇಕಿತ್ತು. ನಾನು ಸಿಎಂ ಆಗಿದ್ದಾಗ ಮಾಡಿದ ಜನಪರ ಕೆಲಸಗಳು ಕಾಂಗ್ರೆಸ್ ಗೆಲ್ಲಿಸಿವೆ. ನನ್ನ ವರ್ಚಸ್ಸು ಜನರು ಕಾಂಗ್ರೆಸ್‌ಗೆ ಮತ ಹಾಕುವಂತೆ ಮಾಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.
ಯಾವುದೇ ಒಬ್ಬ ವ್ಯಕ್ತಿಯ ನೇತೃತ್ವದಲ್ಲಿ ಚುನಾವಣೆ ಎದುರಿಸಿಲ್ಲ. ನಾನು, ಡಿಕೆ ಶಿವಕುಮಾರ್ ಸೇರಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಗೆಲುವು ಕಂಡಿದ್ದೇವೆ. ನನ್ನ ಕೈಲಾದ ಮಟ್ಟಿಗೆ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡಿದ್ದೇನೆ. ಒಗ್ಗಟ್ಟಿನ ಶ್ರಮದಿಂದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ಸಿದ್ದರಾಮಯ್ಯ ತಮ್ಮ ವಾದ ಮಂಡಿಸಿದ್ದಾರೆ.
ನಾನೇನು ಪೂರ್ಣ 5 ವರ್ಷದ ಅವಧಿಗೆ ಸಿಎಂ ಹುದ್ದೆ ಕೇಳುತ್ತಿಲ್ಲ. 50:50 ಸೂತ್ರಕ್ಕೆ ನಾನು ರಾಜಿ ಆಗಿದ್ದೇನೆ, ಡಿಕೆ ಶಿವಕುಮಾರ್ ಕೂಡ ರಾಜಿ ಆಗಲಿ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರದಾನವಾಗಿದೆ. ಬಡವರ ಪರವಾದ ಆ ಯೋಜನೆಗಳ ಜಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಈಡೇರಿಸುತ್ತಾರೆ ಎಂಬ ನಂಬಿಕೆಯಿಂದ ಜನ ಮತ ಹಾಕಿದ್ದಾರೆ. ಅಹಿಂದ ವರ್ಗದ ಮತಗಳು ಕಾಂಗ್ರೆಸ್‌ಗೆ ಬಂದಿವೆ. ಅಷ್ಟೇ ಅಲ್ಲದೆ ಹೆಚ್ಚಿನ ಶಾಸಕರ ಬೆಂಬಲ ನನಗೆ ಇದೆ. ಹೀಗಾಗಿ ನನಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಡ ಹೇರುತ್ತಿದ್ದಾರೆ.
ಅಂತಿಮವಾಗಿ ಸಿಎಂ ಆಯ್ಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿದ್ದು, ದೆಹಲಿ ನಾಯಕರು ಯಾರಿಗೆ ಮಣೆ ಹಾಕಲಿದ್ದಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications