Breaking: ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಆತಂಕ, ಜ್ಞಾನಯೋಗಾಶ್ರಮಕ್ಕೆ ಹರಿದು ಬಂದ ಜನಸಾಗರ
ವಿಜಯಪುರ, ಜನವರಿ 01: ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ವಯೋ ಸಹಜ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅವರು ಸದ್ಯ ಜ್ಞಾನಯೋಗಾಶ್ರಮದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಗಾಶ್ರಮದತ್ತ ಭಕ್ತಸಾಗರ ಹರಿದು ಬರುತ್ತಿದೆ. ಎಲ್ಲರಲ್ಲೂ ಆತಂಕ ಹೆಚ್ಚಾಗಿದ್ದು, ಶ್ರೀಗಳು ಗುಣಮುಖರಾಗುವಂತೆ ಪ್ರಾರ್ಥಿಸುತ್ತಿದ್ದಾರೆ. ಭಕ್ತರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಭಾನುವಾರ ಬೆಳಗ್ಗೆಯಿಂದ ಭಕ್ತ ಸಮೂಹ ಯೋಗಾಶ್ರಮದತ್ತ ಹರಿದು ಬರುತ್ತಿದೆ. ಒಮ್ಮೆ ತಮ್ಮ ಶ್ರೀಗಳ ದರ್ಶನ ಮಾಡಬೇಕು ಎಂದು ಪಟ್ಟು ಹಿಡಿದವರಂತೆ ಕಾಯುತ್ತಿದ್ದಾರೆ. ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದ್ದರು. ಮಧ್ಯಾಹ್ನ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಭಕ್ತರಲ್ಲಿ ಧೈರ್ಯ ತುಂಬಿದರು.
ಸಿದ್ದೇಶ್ವರ ಶ್ರೀಗಳು ಹೆಚ್ಚಿನ ಆರೋಗ್ಯ ಚಿಕಿತ್ಸೆಗೆ ಒಪ್ಪದ ಹಿನ್ನೆಲೆ ಸುಸ್ತಾಗಿದ್ದಾರೆ. ಊಹಾಪೋಹಗಳಿಗೆ ಕಿವಿ ಕೊಡಬೇಡಿ. ಆರೋಗ್ಯ ಸುಧಾರಣೆ ಸ್ವಲ್ಪ ಸಮಯ ಬೇಕಾಗುತ್ತದೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಫಲಾಹಾರ ಸೇವಿಸುತ್ತಿದ್ದು, ನಾಡಿ ಮಿಡಿತ, ಬಿಪಿ ಎಲ್ಲವೂ ಉತ್ತಮವಾಗಿದೆ. ಅವರ ಆರೋಗ್ಯ ಸ್ಥಿತವಾಗಿದೆ ಎಂದು ಹೇಳಿದರು.

ಆದರೆ ಆಶ್ರಮದತ್ತ ಜನಪ್ರತಿನಿಧಿಗಳು, ಪೊಲೀಸ್ ವರಿಷ್ಠ ಅಧಿಕಾರಿಗಳು, ವೈದ್ಯರ ನಿರಂತರ ಭೇಟಿಯಿಂದ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ. ಶ್ರೀಗಳ ಆರೋಗ್ಯ ಸುಧಾರಿಸಲಿ ಎಂದು ಭಕ್ತಗಣ ದೇವರಲ್ಲಿ ಮೊರೆ ಇಟ್ಟಿದ್ದಾರೆ. ಸದ್ಯ ಯೋಗಾಶ್ರಮದಲ್ಲೇ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಕೃತಿ ಬಿಡುಗಡೆ: ಭಕ್ತರಿಗೆ ದರ್ಶನ ನೀಡಿದ ಶ್ರೀಗಳು
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ಸಿದ್ದೇಶ್ವರ ಶ್ರೀಗಳ ಆರೋಗ್ಯ ಬಗ್ಗೆ ವಿಚಾರಿಸಿದ್ದಾರೆ ಎನ್ನಲಾಗಿದೆ. ಇಂತಹ ಅನಾರೋಗ್ಯ ಮಧ್ಯವೇ ಸಿದ್ದೇಶ್ವರ ಶ್ರೀಗಳು ತಾವು ತಮ್ಮ ಗುರು ಮಲ್ಲಿಕಾರ್ಜುನ ಶ್ರೀಗಳ ಕುರಿತು ಬರೆದ ಜ್ಞಾನಯೋಗ ಸಂಪುಟ-1'ಪುಸ್ತಕ ಬಿಡುಗಡೆ ಮಾಡಿದರು. ಜೊತೆಗೆ ತಮ್ಮ ಭಕ್ತರಿಗೆ ದರ್ಶನ ನೀಡಿದರು. ಈ ವೇಳೆ ಸುತ್ತೂರು ಶ್ರೀಗಳ ಜೊತೆಗೆ ಗದುಗಿನ ಸದಾಶಿವಾನಂದ ಶ್ರೀಗಳು ಮತ್ತಿತರರು ಉಪಸ್ಥಿತರಿದ್ದರು.
ಸಿದ್ದೇಶ್ವರ ಶ್ರೀಗಳು ಕನ್ನಡ ಇಂಗ್ಲಿಷ್, ಮರಾಠಿ, ಸಂಸ್ಕೃತ ಭಾಷೆಗಳಲ್ಲೂ ಸಾಕಷ್ಟು ಪ್ರವಚನ ನೀಡಿದ್ದಾರೆ. ಆತ್ಮ ಪರಮಾತ್ಮ, ಬದುಕಿನ ಆಯಾಮಗಳು, ಅಲ್ಲಮ ಪ್ರಭು, ಬಸವಣ್ಣನವರಂತಹ ಶರಣರು ಕುರಿತು, ಜಗತ್ತು ಮಾನವ ಶಕ್ತಿ, ಆಧ್ಯಾತ್ಮ ಸೇರಿದಂತೆ ಅನೇಕ ವಿಚಾರಗಳ ಕುರಿತು ಪ್ರವಚನ ನೀಡಿದವರು. ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿರುವುದು ನಾಡಿನ ಭಕ್ತರ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications