ಸಿದ್ದರಾಮಯ್ಯ ಜನ್ಮದಿನಾಚರಣೆ ಬಿಜೆಪಿಗೆ ಸೋಲಿನ ಭಯ ತರಿಸಿದೆ!
ಬೆಂಗಳೂರು ಜು.14: "ಕಾಂಗ್ರೆಸ್‌ನವರು ಯಾರು ಜನ್ಮ ದಿನಾಚರಣೆಯನ್ನು ಸಿದ್ದರಾಮೋತ್ಸವ ಎಂದು ಹೇಳಿಲ್ಲ. ನನ್ನ 75ನೇ ಹುಟ್ಟುಹಬ್ಬ ಆಚರಣೆಗೆ ಲಕ್ಷಾಂತರ ಜನ ಸೇರುತ್ತಾರೆ ಎಂದು ಬಿಜೆಪಿ ಭಯ ಕಾಡುತ್ತಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾತನಾಡಿದ ಸಿದ್ದರಾಮಯ್ಯ, "ಸಿದ್ದರಾಮೋತ್ಸವ ಎಂದು ಬರೆದಿದ್ದು ಮಾಧ್ಯಮಗಳು, ನಾವ್ಯಾರು (ಕಾಂಗ್ರೆಸ್ಸಿಗರು) ಅದನ್ನು ಸಿದ್ದರಾಮೋತ್ಸವ ಎಂದು ಹೇಳಿಲ್ಲ. ಇದು 'ಸಿದ್ದರಾಮಯ್ಯ 75ನೇ ಅಮೃತೋತ್ಸವ' ಕಾರ್ಯಕ್ರಮ" ಎಂದು ಸಿದ್ದರಾಮೋತ್ಸವ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದರು.
"ದಾವಣಗೆರೆಯಲ್ಲಿ ನಡೆಯುತ್ತಿರುವ ನನ್ನ ಹುಟ್ಟುಹಬ್ಬದ ಆಚರಣೆ ವೇಳೆ ಲಕ್ಷಾಂತರ ಜನ ಸೇರುತ್ತಾರೆಂದು ಬಿಜೆಪಿ ನಾಯಕರಲ್ಲಿ ಸೋಲಿನ ಭಯ ಉಂಟಾಗುತ್ತಿದೆ" ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
"ಯಡಿಯೂರಪ್ಪ ಅವರ 77ನೇ ಹುಟ್ಟುಹಬ್ಬಕ್ಕೆ ನನ್ನನ್ನೂ ಕರೆದಿದ್ದರು. ಅದು ಸರ್ಕಾರಿ ಕಾರ್ಯಕ್ರಮ ಆಗಿರಲಿಲ್ಲ. ಆದರೆ ಸಾಕಷ್ಟು ಒತ್ತಾಯದ ಬಳಿಕ ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಈಗ ನನಗೆ 75 ವರ್ಷ ತುಂಬುತ್ತಿದೆ. ಹೀಗಾಗಿ ಸ್ನೇಹಿತರು, ಆಪ್ತರು, ಹಿತೈಷಿಗಳು ಸೇರಿ ಜನ್ಮದಿನಾಚರಣೆ ಆಚರಿಸುತ್ತಿದ್ದಾರೆ. ಇದಕ್ಕೂ ಬಿಜೆಪಿ ಭಯಪಟ್ಟುಕೊಳ್ಳುತ್ತಿದೆ" ಎಂದರು.
"ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಮುಂಚಿತವಾಗಿ ಯಾವ ಕ್ರಮ ತೆಗೆದುಕೊಳ್ಳಲ್ಲ. ಜನರಿಗೆ, ರೈತರಿಗೆ ನಷ್ಟವಾದಮೇಲೆ ಅದನ್ನು ನೋಡೋಕೆ ಹೋಗುತ್ತಾರೆ. ಕಳೆದ ಎರಡು ವಾರದಿಂದ ಮಳೆ ಬೀಳುತ್ತಿದೆ ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಯಾರೂ ಜಿಲ್ಲೆಗಳಿಗೆ ಹೋಗಿಲ್ಲ, ಮುಖ್ಯಮಂತ್ರಿಗಳು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೋದಮೇಲೆ ಇವರು ಹೊರಟಿದ್ದಾರೆ" ಎಂದು ಸಿದ್ದರಾಮಯ್ಯ ಟೀಕಿಸಿದರು.

ಪ್ರವಾಹ ಮುಂಜಾಗ್ರತೆ ವಹಿಸದ ಸರ್ಕಾರ
"ರಾಜ್ಯ ಸರ್ಕಾರ ಪ್ರತಿ ವರ್ಷವು ಪ್ರವಾಹ ಕುರಿತು ನಿರ್ಲಕ್ಷ್ಯ ವಹಿಸುತ್ತಿರುವುದು ಸಾಬೀತಾಗುತ್ತಿದೆ. ಪ್ರವಾಹ ಬರಲಿದೆ ಎಂದು ಗೊತ್ತಿದ್ದರೂ ಸರ್ಕಾರ ಅಗತ್ಯ ಮುಂಜಾಗ್ರತೆ ಕೈಗೊಂಡಿಲ್ಲ. ಪ್ರವಾಹದಿಂದ ಹಾನಿಗೊಳಗಾದ ಜನ, ಜಾನುವಾರು, ಜೀವ ನಷ್ಟ, ಬೆಳೆ, ಆಸ್ತಿಪಾಸ್ತಿ ಹಾನಿಯನ್ನು ಸಮಗ್ರ ಪರಿಶೀಲಿಸಬೇಕು. ಹಾನಿ ಲೆಕ್ಕಹಾಕಿದ ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು" ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
"2019ರ ಪ್ರವಾಹದಲ್ಲಿ ಹಾನಿಗೀಡಾದ ಮನೆಗಳಿಗೆ ಸರ್ಕಾರ ಈವರೆಗೂ ಪರಿಹಾರ ಕೊಟ್ಟಿಲ್ಲ. 2020ರಲ್ಲಿ ಮತ್ತೆ ಅತೀವ ಮಳೆ ಹಾನಿ ಉಂಟಾಗಿತ್ತು. ನದಿ ತೀರದ ಪ್ರದೇಶದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಅವರೆಲ್ಲರಿಗೂ ಈವರೆಗೆ ಪರಿಹಾರ ಕೊಟ್ಟಿಲ್ಲ" ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ದೂರಿದರು.

ಪ್ರವಾಹದ ಊರುಗಳು ಸ್ಥಳಾಂತರವಾಗಿಲ್ಲ
"ವರ್ಷಗಳಿಂದಲೂ ರಾಜ್ಯದಲ್ಲಿ ಪ್ರವಾಹಕ್ಕೆ ತುತ್ತಾಗುವ ಊರುಗಳನ್ನು ಸ್ಥಳಾಂತರ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸ್ಥಳಾಂತರ ಕಾರ್ಯ ಇನ್ನೂವರೆಗೂ ಆಗಿಲ್ಲ. ಈ ನಿರ್ಲಕ್ಷ್ಯದಿಂದಲೇ ಮತ್ತೆ ಪ್ರವಾಹ ಬಂದಾಗ ಆಯಾ ಪ್ರದೇಶಗಳ, ನದಿ ತೀರದ ಗ್ರಾಮಗಳ ಜನರು ತೊಂದರೆ ಎದುರಿಸುತ್ತಾರೆ. ಇದು ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತದೆ" ಎಂದು ಪ್ರವಾಹ, ನೆರೆ ಹಾನಿ ಮತ್ತು ಸಂತ್ರಸ್ತರ ಪರಿಹಾರದ ಕುರಿತು ಸಿದ್ದರಾಮಯ್ಯ ವಿವರಿಸಿದರು.

ಸತ್ಯ ಹೇಳಿದರೂ ಆರ್‌ಎಸ್‌ಎಸ್‌ನವರಿಗೆ ಕೋಪ
"ಸಾಹಿತಿ ದೇವನೂರು ಮಹಾದೇವ ಅವರು 'ಆರ್‌ಎಸ್‌ಎಸ್ ಆಳ ಮತ್ತು ಅಗಲ' ಕೃತಿಯನ್ನು ದಾಖಲೆ ಸಮೇತ ಬರೆದಿದ್ದಾರೆ. ಯಾವ ಯಾವ ಕಾಲದಲ್ಲಿ ಹೆಡ್ಗೆವಾರ್, ಗೋಲ್ವಾಲ್ಕರ್, ಸಾವರ್ಕರ್ ಅವರುಗಳು ಸಂಘಟನೆ ಕುರಿತು ಏನೇನು ಹೇಳಿದ್ದರು?. ಅದನ್ನೇ ದಾಖಲೆ ಸಹಿತ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌ಎಸ್) ನವರು ಸತ್ಯ ಹೇಳಿದರೂ ಕೋಪಿಸಿಕೊಳ್ಳುತ್ತಾರೆ. ಜತೆಗೆ ಸತ್ಯ ಹೇಳಿದವರ ಮೇಲೆ ವಿನಾಕಾರಣ ದೂರುಗಳನ್ನು ಹಾಕಿಸುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇಂದು ಧಕ್ಕೆಯಾಗ್ತಿದೆ. ಸಂವಿಧಾನ ನೀಡಿರುವ ಹಕ್ಕುಗಳಿಗೆ ನಿರ್ಬಂಧ ಹೇರಲು ಇವರು ಯಾರು? ದೇಶದ ಮೂಲಭೂತ ಸ್ವರೂಪ ಬದಲಾವಣೆ ಮಾಡಲು ಸಂಸತ್ತಿಗೂ ಅಧಿಕಾರ ಇಲ್ಲ" ಎಂದು ಸಿದ್ದರಾಮಯ್ಯ ಗುಡುಗಿದರು.

ಹಗರಣದ ಮಾಹಿತಿ ಇರಲಿಲ್ಲವಾ?
"ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಈಗಿನ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ವಿರೋಧ ಪಕ್ಷದಲ್ಲಿದ್ದರು. ಅಂದು ಅವರು ಸರ್ಕಾರಿ ನೇಮಕಾತಿಗಳಲ್ಲಿ ಹಗರಣ ನಡೆದಿದೆ ಎಂದು ಮಾತನಾಡಿರಲಿಲ್ಲ. ಇದೀಗ ಬಿಜೆಪಿ ಅವಧಿಯಲ್ಲೇ ಪಿಎಸ್ಐ ಹಗರಣ ಬೆಳಕಿಗೆ ಬಂದಿದೆ. ಹೀಗಾಗಿ ಇಂತಹ ಹಗರಣಗಳು ಸಿದ್ದರಾಮಯ್ಯ ಅವರ ಆಡಳಿತದಲ್ಲೂ ಬೆಳಕಿಗೆ ಬಂದಿದ್ದವು ಎಂದು ಹೇಳಿದರೆ ಹೇಗೆ?. ನನ್ನ ಅವಧಿಯಲ್ಲಿ ಹೇಳದೇ ಮೌನವಾಗಿದ್ದು, ಈಗ ಹೇಳುತ್ತಿರುವುದು ಏಕೆ?. ಅಂದು ಕಡ್ಲೆಪುರಿ ತಿಂನ್ನುತ್ತಿದ್ದರಾ. ಹಗರಣ ನಡೆದಿದ್ದರೆ ಆದರೆ ಆಂದೇ ಸದನದಲ್ಲಿ ಪ್ರಸ್ತಾಪಿಸಬಹುದು. ಇಲ್ಲವೇ ನ್ಯಾಯಾಲಯಕ್ಕೂ ಹೋಗಬಹುದಿತ್ತು" ಎಂದು ಸಚಿವ ಅಶ್ವಥ್ ನಾರಾಯಣ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.












Click it and Unblock the Notifications