MUDA Scam Case: 5 ಕಾರಣಗಳಿಗೆ ಸಿದ್ದರಾಮಯ್ಯ ರಾಜೀನಾಮೆ ಇಲ್ಲ
ಮುಡಾ ಹಗರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಅಹಿಂದ ನಾಯಕ ಹಾಗೂ ಪ್ರಭಾವಿ ರಾಜಕಾರಣಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲು ಹೈಕಮಾಂಡ್ ಸಿದ್ಧವಿಲ್ಲ ಎಂದು ಕಾಂಗ್ರೆಸ್‌ನ ಮುಖಂಡರೇ ಹೇಳುತ್ತಿದ್ದಾರೆ. ಅದಕ್ಕೆ 5 ಪ್ರಮುಖ ಕಾರಣಗಳು ಸಹ ಇವೆ. ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ)ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಸರಿಯಾಗಿಯೇ ಇದೆ ಎಂದು ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದ್ದು, ವಿರೋಧ ಪಕ್ಷಗಳು ಸಿ.ಎಂ ರಾಜೀನಾಮೆಗೆ ಪಟ್ಟು ಹಿಡಿದಿದೆ. ಆದರೆ, ಈ ಐದು ಕಾರಣಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯವಿಲ್ಲ.
ದೇಶದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಪಕ್ಷಗಳು ಬಲಿಷ್ಠವಾಗಿ, ಒಂದೊಂದೇ ರಾಜ್ಯಗಳಲ್ಲೂ ಕಾಂಗ್ರೆಸ್ ಸೋಲುತ್ತಾ ಬಂದರೂ,ಕರ್ನಾಟಕದ ಜನ ಕಾಂಗ್ರೆಸ್ ಪಕ್ಷವನ್ನು ಕೈಹಿಡಿದಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಬಲಿಷ್ಠವಾದ ಮೇಲೆಯ ಕಾಂಗ್ರೆಸ್‌ಗೆ ನೆರೆಯ ತೆಲಂಗಾಣದಲ್ಲಿ ಗೆಲುವು ಸಾಧಿಸಲು ಹಾಗೂ ಲೋಕಸಭೆ ಚುನಾವಣೆಗೆ ಹುರುಪಿನಿಂದ ಸ್ಪರ್ಧೆ ಮಾಡುವುದಕ್ಕೆ ಸಾಧ್ಯವಾಗಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಪಾತ್ರ ಮಹತ್ವದ್ದು, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಇಬ್ಬರು ನಾಯಕು ಜೋಡೆತ್ತುಗಳಂತೆ ಕೆಲಸ ಮಾಡಿದ್ದರು. ಈಗ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹ ಕೇಳಿ ಬರುತ್ತಿದೆ. ಆದರೆ, ಸಿದ್ದರಾಮಯ್ಯ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಪಂಚ ಕಾರಣಗಳಿಗೆ ತೆಗೆದುಕೊಳ್ಳುವುದಿಲ್ಲ.

ದೇಶದಲ್ಲಿ ಸಾಲು ಸಾಲು ಚುನಾವಣೆ: ಕಾಂಗ್ರೆಸ್ ಮುಖ್ಯವಾಗಿ ಈ ಕಾರಣಕ್ಕೆ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ತೆಗೆದುಕೊಳ್ಳುವುದಕ್ಕೆ ಸಿದ್ಧವಿಲ್ಲ. ಅದು ದೇಶದಲ್ಲಿ ಈ ವರ್ಷ ಹಾಗೂ ಮುಂದಿನ ವರ್ಷ ನಡೆಯಲಿರುವ ಸಾಲು ಸಾಲು ವಿಧಾನಸಭೆ ಚುನಾವಣೆಗಳು. ದೇಶದಲ್ಲಿ ಈಗಾಗಲೇ ಹಲವು ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಕೆಲವು ಕಡೆ ನಡೆಯುತ್ತಿದ್ದು, ಇನ್ನೂ ಕೆಲವು ಕಡೆ ನಡೆಯಬೇಕಿದೆ. ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿ ಚುನಾವಣೆ ಹೊಸ್ತಿಲಿನಲ್ಲಿ ಇದೆ. ಈಗ ಏನಾದರೂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆದರೆ ಖಂಡಿತವಾಗಿಯೂ ವಿರೋಧ ಪಕ್ಷಗಳು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಲಿವೆ. ಇದು ಕಾಂಗ್ರೆಸ್‌ನ ವರ್ಚಸ್ಸಿಗೆ ಬಹುದೊಡ್ಡ ಪೆಟ್ಟು ನೀಡಲಿದೆ. ಹೀಗಾಗಿ, ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇರಿಸುತ್ತಿದೆ.
ಹಿಂದುಳಿದ ವರ್ಗದ ನಾಯಕ ಅಹಿಂದ ಬೆಂಬಲ: ಸಿ.ಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ನಾಯಕ ಎಂದೇ ಖ್ಯಾತಿ ಗಳಿಸಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಅವರಿಗೆ ಅಪಾರ ಪ್ರಮಾಣದ ಅಹಿಂದ ಸಮುದಾಯದ ಬೆಂಬಲ ಇದೆ. ಹೀಗಾಗಿ, ಒಂದೊಮ್ಮೆ ಹೈಕಮಾಂಡ್ ಸೂಚನೆಯ ಮೇರೆಗೆ ರಾಜ್ಯದಲ್ಲಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದರೆ, ಅಹಿಂದ ಸಮುದಾಯಕ್ಕೆ ತಪ್ಪು ಸಂದೇಶ ಹೋಗಲಿದೆ. ಈ ಸಾಹಸಕ್ಕೆ ಕೈಹಾಕಲು ಕಾಂಗ್ರೆಸ್ ಹೈಕಮಾಂಡ್ ಸಿದ್ಧವಿಲ್ಲ.
ರಾಜ್ಯಪಾಲರ ಮೂಲಕ ಕೇಂದ್ರದ ಕಸರತ್ತು: ರಾಜ್ಯದಲ್ಲೂ ರಾಜ್ಯಪಾಲರ ಮೂಲಕ ಬಿಜೆಪಿ ಹಿಂಬಾಗಿಲಿನ ರಾಜಕಾರಣ ಮಾಡುತ್ತಿದೆ ಎನ್ನುವುದನ್ನು ಕಾಂಗ್ರೆಸ್ ಒತ್ತಿ ಹೇಳುತ್ತಿದೆ. ಈಗಾಗಲೇ ತಮಿಳುನಾಡು, ಕೇರಳ, ತೆಲಂಗಾಣ, ದೆಹಲಿ, ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರು ವರ್ಸಸ್ ರಾಜ್ಯ ಸರ್ಕಾರ ಎನ್ನುವ ಪರಿಸ್ಥಿತಿ ಇದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಎಲ್ಲ ರಾಜಗಳಲ್ಲೂ ಬಿಜೆಪಿಯ ವಿರೋಧ ಪಕ್ಷವೇ (ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷ)ಅಧಿಕಾರದಲ್ಲಿ ಇವೆ. ಇದೇ ಮುಂದುವರಿದ ಭಾಗವಾಗಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಕರ್ನಾಟಕದ ರಾಜ್ಯಪಾಲರೂ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ವಿನಾಕಾರಣ ಮುಗಿಬೀಳುತ್ತಿದ್ದಾರೆ. ಇದಕ್ಕೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಹೇಳುತ್ತಿದೆ. ಇದು ರಾಜ್ಯಪಾಲರ ದುರುದ್ದೇಶಪೂರ್ವಕ ನಡೆ ಎನ್ನುವುದು ಕಾಂಗ್ರೆಸ್‌ನ ವಾದವಾಗಿದೆ. ಬಿಜೆಪಿ ರಾಜ್ಯಪಾಲರ ಮೂಲಕ ಹೇಗೆ ಸಮಸ್ಯೆ ಮಾಡುತ್ತಿದೆ ಎಂದು ಕಾಂಗ್ರೆಸ್ ಜನರಿಗೆ ಹೇಳುತ್ತಿದೆ.
ತನಿಖೆಗಷ್ಟೇ ಅನುಮತಿ ಸಿಕ್ಕಿದೆ, ಆರೋಪ ಸಾಬೀತಾಗಿಲ್ಲ: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿ ಇದೆ ಎಂದಷ್ಟೇ ಹೈಕೋರ್ಟ್ ಹೇಳಿದೆ. ಅಂದರೆ ತನಿಖೆ ನಡೆಸಲು ಹೇಳಿದೆ. ಇನ್ನೂ ಇದರ ತನಿಖೆ ನಡೆದಿಲ್ಲ. ತನಿಖೆ ನಡೆದು ಅದರ ವರದಿ ಬರಬೇಕು ಹಾಗೂ ಆ ವರದಿಯಲ್ಲಿ ಸಿದ್ದರಾಮಯ್ಯ ತಪ್ಪಿತಸ್ಥ ಎಂದಾದರೆ ಅದರಲ್ಲಿ ಅರ್ಥವಿದೆ ಎನ್ನುವುದು ಸಹ ಕಾಂಗ್ರೆಸ್‌ನ ವಾದವಾಗಿದೆ. ಇನ್ನೂ ತನಿಖೆಯೇ ನಡೆದಿಲ್ಲ ಈಗೇಕೆ ರಾಜೀನಾಮೆ ಎನ್ನುವುದು ಕಾಂಗ್ರೆಸ್‌ನ ಪ್ರಶ್ನೆಯಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಸಾಧ್ಯತೆ: ಇನ್ನೊಂದು ಹಾಗೂ ಕೊನೆಯ ಕಾರಣವೆಂದರೆ ಒಂದೊಮ್ಮೆ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ರಾಜೀನಾಮೆ ಪಡೆದರೆ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಎದುರಾಗುವ ಸಾಧ್ಯತೆ ಇದೆ. ದೇಶದ ಪ್ರಮುಖ ರಾಜ್ಯಗಳಲ್ಲಿ ಚುನಾವಣೆಯ ಸಿದ್ಧತೆಯಲ್ಲಿ ಇರುವ ಕಾಂಗ್ರೆಸ್‌ಗೆ ಇದು ಬೇಕಾಗಿಲ್ಲ. ಅಲ್ಲದೇ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿದ್ದು, ಕಾಂಗ್ರೆಸ್‌ನ ಒಂದು ಬಣವೂ ಅವರೊಂದಿಗೆ ಸೇರಿಕೊಂಡರೆ ಹೊಸ ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಈ ರೀತಿ ಮೂರು ಪಕ್ಷಗಳು ಸೇರಿ ಬೃಹತ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿರುವ ಉದಾಹರಣೆ ಮಹಾರಾಷ್ಟ್ರದಲ್ಲಿ ಇದೆ. ಹೀಗಾಗಿ, ಈ ಎಲ್ಲಾ ಐದು ಕಾರಣಗಳಿಗಾಗಿ ಕಾಂಗ್ರೆಸ್ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದೆ ಎಂದು ಹೇಳಲಾಗಿದೆ.












Click it and Unblock the Notifications