'ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋದಕ್ಕೆ ಸಿದ್ದರಾಮಯ್ಯ ಬಿಡಲ್ಲ'
ಬೆಂಗಳೂರು, ಡಿಸೆಂಬರ್ 06: ಸಿದ್ದರಾಮಯ್ಯ ರಾಜಕೀಯದಲ್ಲಿ ಇರುವವರೆಗೂ ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಆಗುವುದಕ್ಕೆ ಬಿಡುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಯೋಗೇಶ್ವರ್ ಗೆದ್ದರೆ ಡಿ.ಕೆ.ಶಿವಕುಮಾರ್ ಸಿಎಂ ಎನ್ನುತ್ತಿದ್ದರು. ಅದೇ ಪ್ರಕಾರ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಿತ್ತಲ್ಲವೇ. ಈಗಂತೂ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ರಾಜ್ಯದಲ್ಲೇ ನಂ.1 ಆಗಿದ್ದಾರೆ. ಮುಖ್ಯಮಂತ್ರಿ ಸ್ಥಾನದ ವಿಚಾರಕ್ಕೆ ಒಪ್ಪಂದ ಆಗಿತ್ತೆಂದು ಡಿ.ಕೆ. ಶಿವ ಕುಮಾರ್ ಹೇಳಿದರೆ, ಅತ್ತ ಸಿದ್ದರಾಮಯ್ಯ ಅಂತಹ ಯಾವುದೇ ಒಪ್ಪಂದ ಆಗಿಲ್ಲವೆನ್ನುತ್ತಾರೆ ಎಂದರು.

ಹಲವಾರು ತಲೆಮಾರಿನಿಂದ ಉಳುಮೆ ಮಾಡುತ್ತಿರುವ ರೈತರ ಭೂಮಿ, 10, 11ನೇ ಶತಮಾನಗಳ ಮಠಮಾನ್ಯಗಳ ಭೂಮಿ ವಕ್ಫ್‍ಗೆ ಸೇರುವುದು ಹೇಗೆ? ವಕ್ಫ್ ಬೋರ್ಡ್ ರಚಿಸಿದ್ದೇ 1954ರಲ್ಲಿ. 10ನೇ ಶತಮಾನದಲ್ಲಿ ವಕ್ಫ್ ಎಲ್ಲಿತ್ತು? ಇಸ್ಲಾಂ ಈ ಪ್ರಪಂಚಕ್ಕೆ ಬಂದಿರುವುದೇ 7ನೇ ಶತಮಾನದಲ್ಲಿ ಎಂದು ವಿವರಿಸಿದರು. 10ನೇ ಶತಮಾನದಲ್ಲಿ ಬಹುಶಃ ಭಾರತದಲ್ಲಿ ಇಸ್ಲಾಂ ಇರಲಿಲ್ಲ ಎಂದು ಹೇಳಿದರು.
ಹಿಂದೂಸ್ಥಾನದಲ್ಲಿ ಮಾತ್ರ ವಕ್ಫ್ ಇದೆ. ಪಾಕಿಸ್ತಾನದಲ್ಲಿ ಬಾಂಗ್ಲಾದೇಶದಲ್ಲಿ ಯಾಕಿಲ್ಲ? ಯಾರ ಪ್ರಾಣ ತಿನ್ನಲು ಕಾಂಗ್ರೆಸ್ ಇದನ್ನು ಹುಟ್ಟು ಹಾಕಿದೆ ಎಂದು ಕೇಳಿದರು. ಅದೇ ಮಾದರಿಯಲ್ಲಿ 370 ಆರ್ಟಿಕಲ್ ಅನ್ನು ಕೂಡ ಇಟ್ಟಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈಗ ಬಾಬಾ ಸಾಹೇಬರ ಸಂವಿಧಾನ ಜಾರಿ ಆಗಿದ್ದು, 370 ಆರ್ಟಿಕಲ್ ರದ್ದು ಮಾಡಿದ್ದು, ದಲಿತರಿಗೆ ಅಲ್ಲಿ ಮೀಸಲಾತಿಯೂ ಲಭಿಸಿದೆ ಎಂದರು.
1974ರಲ್ಲಿ ಗಜೆಟ್ ಆಗಿದ್ದು, ಅದರಲ್ಲಿ ನಮೂದು ಮಾಡಿದ ಸರ್ವೇ ನಂಬರ್‍ಗಳು ವಕ್ಫ್ ಆಸ್ತಿ ಎಂದು ತಿಳಿಸುತ್ತಿದ್ದಾರೆ. ಅವನ್ನು ಎಲ್ಲಿಂದ ದಾನ ಕೊಟ್ಟರು? ಯಾರು ಕೊಟ್ಟರು? ದಾಖಲೆ ಬೇಕಲ್ಲವೇ ಎಂದು ಕೇಳಿದರು. ವಕ್ಫ್ ಬೋರ್ಡಿಗೆ ಕಾಂಗ್ರೆಸ್ ಸರಕಾರವು ಪರಮಾಧಿಕಾರವನ್ನು ಕೊಟ್ಟಿದೆ ಎಂದು ಟೀಕಿಸಿದರು. ಇದು ರೈತರು, ಮಠಮಾನ್ಯಗಳಿಗೆ ಕಂಟಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂಥ ಪರಮಾಧಿಕಾರ ಇದೀಗ ಸರ್ವಾಧಿಕಾರವಾಗಿ ಪರಿವರ್ತನೆಗೊಂಡಿದ್ದು, ಇದಕ್ಕೆ ನಾವು ಉತ್ತರ ಕೊಡಬೇಕಾಗಿದೆ ಎಂದು ತಿಳಿಸಿದರು. ಪಹಣಿಯ 11ನೇ ಕಾಲಂನಲ್ಲಿ ನಮೂದಿಸಿದ್ದ ವಕ್ಫ್ ಎಂಬುದನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದನ್ನು ಹಾಗಿದ್ದರೆ ಸೇರಿಸಿದ್ದೇಕೆ ಎಂದು ಪ್ರಶ್ನಿಸಿದರು. ಬಿಜೆಪಿ 3 ತಂಡಗಳಾಗಿ ಪ್ರವಾಸ ಮಾಡುತ್ತಿರುವುದರ ಕುರಿತು ಕೂಡ ಅವರು ಇದೇವೇಳೆ ಮಾಹಿತಿ ನೀಡಿದರು.
ಧಾರವಾಡ ಜಿಲ್ಲೆ ಮಿಸ್ರಿಕೋಟೆಯಲ್ಲಿ ಹಿಂದೂ ರುದ್ರಭೂಮಿಯನ್ನು ವಕ್ಫ್ ಆಸ್ತಿ ಎಂದು ತಿಳಿಸಿದ್ದಾರೆ. ಶಾಲೆಗಳು, ಸಹಕಾರ ಸೊಸೈಟಿ ಜಾಗ, ಅಂಬೇಡ್ಕರರ ವಿಗ್ರಹ ಇರುವ ಜಾಗವನ್ನೂ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿದ್ದಾರೆ. ಹಾವೇರಿ ಜಿಲ್ಲೆಯಲ್ಲೂ ರೈತರ ಅಹವಾಲು ಸ್ವೀಕರಿಸಿದ್ದೇವೆ ಎಂದ ಅವರು ಹರಿಹರ ತಾಲ್ಲೂಕಿನ ಬಾನುವಳ್ಳಿಯಲ್ಲಿ ರುದ್ರಭೂಮಿಗೆ ಕೊಟ್ಟ 4 ಎಕರೆಗೂ ಹೆಚ್ಚು ಜಾಗವನ್ನು ಪಹಣಿಯಲ್ಲಿ ಖಬರಸ್ಥಾನ ಎಂದು ತಿಳಿಸಿದ್ದಾರೆ ಎಂದು ಟೀಕಿಸಿದರು.
ದರ್ಗಾ, ಮಸೀದಿ ಜಾಗ ಕಾಪಾಡಲು ವಕ್ಫ್ ಇರುವುದು. ಇಲ್ಲಿ ದರ್ಗಾ, ಮಸೀದಿಯವರು ಪತ್ರ ಬರೆದು ವಕ್ಫ್‍ಗೆ ಸೇರಿದೆ ಎಂದು ತಿಳಿಸಿದೊಡನೆ ಅದನ್ನು ವಕ್ಫ್ ಆಸ್ತಿ ಎಂದು ಕಾಲಂ 11ರಲ್ಲಿ ಬರೆಯಲಾಗುತ್ತಿದೆ. ಸಿಎಂ ಆದೇಶದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಬರಸ್ಥಾನ, ಮಸೀದಿ ಜಾಗಮ ರೈತರು, ಮಠಮಾನ್ಯಗಳ ಜಾಗ ವಕ್ಫ್ ಆಗಿದ್ದರೆ ಕಾಂಪೌಂಡ್ ಹಾಕಲು ಜಿಲ್ಲಾ ಅದಾಲತ್ ಮಾಡುತ್ತಿದ್ದಾರೆ ಎಂದು ಅವರು ಖಂಡಿಸಿದರು. ವಕ್ಫ್ ಹೆಸರಿನಲ್ಲಿ ರೈತರ, ಮಠಗಳ ಭೂಮಿ ಕಬಳಿಸುವ ನೀತಿಯನ್ನು ತೀವ್ರವಾಗಿ ಖಂಡಿಸಿದರು.












Click it and Unblock the Notifications