ಯಡಿಯೂರಪ್ಪ, ರಾಜ್ಯಪಾಲರಿಗೆ ಸಿದ್ದರಾಮಯ್ಯ ಕುಟುಕು ಟ್ವೀಟ್
Recommended Video
ಬೆಂಗಳೂರು, ಆಗಸ್ಟ್ 03: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಸಿದ್ದರಾಮಯ್ಯ ಅವರು ಟ್ವೀಟ್ ಬಾಣ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಟೀಕಾ ಬಾಣುದ ಗುರಿ ರಾಜ್ಯಪಾಲರತ್ತಲೂ ನೆಟ್ಟಿದೆ.
ಇಂದು ಬೆಳಿಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಅವರು ಸಂಪುಟ ರಚನೆ ಮಾಡದೇ ಕೇವಲ ಅಧಿಕಾರಿಗಳ ವರ್ಗಾವಣೆಯಲ್ಲಿ ಕಾಲಹರಣ ಮಾಡುತ್ತಿರುವುದನ್ನು ಟೀಕಿಸಿದ್ದಾರೆ.
'ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಯಡಿಯೂರಪ್ಪ ಅವರು ತೋರಿದ ಅವಸರವನ್ನು ಸಂಪುಟ ವಿಸ್ತರಣೆಗೆ ತೋರುತ್ತಿಲ್ಲವೇಕೆ? ಅತೀವೃಷ್ಟಿ-ಅನಾವೃಷ್ಟಿಯಿಂದ ರಾಜ್ಯದ ಜನರು ಸಂಕಟದಲ್ಲಿದ್ದಾರೆ. ಆಡಳಿತ ಯಂತ್ರ ಸ್ತಬ್ಧವಾಗಿದೆ. ಇದೇನು ಪ್ರಜಾಪ್ರಭುತ್ವವೇ? ಏಕಚಕ್ರಾಧಿಪತ್ಯವೇ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

'ಅತಿವೃಷ್ಟಿ-ಅನಾವೃಷ್ಟಿಗಳಿಗೆ ಸ್ಪಂದಿಸಬೇಕಾದ ಕಂದಾಯ, ಕೃಷಿ, ಗ್ರಾಮೀಣ ಅಭಿವೃದ್ದಿ ಇಲಾಖೆಗಳಿಗೆ ಸಚಿವರೇ ಇಲ್ಲ. ಆದ್ಯತೆ ಅಧಿಕಾರಿಗಳ ವರ್ಗಾವಣೆಯದ್ದೇ? ಸಂಪುಟ ವಿಸ್ತರಣೆಯದ್ದೇ? ' ಎಂದು ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರ ವರ್ಗಾವಣೆ ಪರ್ವವನ್ನು ಟೀಕಿಸಿದ್ದಾರೆ.
ರಾಜ್ಯಪಾಲರನ್ನೂ ಟ್ವೀಟ್ ಮೂಲಕ ಕುಟುಕಿರುವ ಸಿದ್ದರಾಮಯ್ಯ, 'ವಿಶ್ವಾಸ ಮತಯಾಚನೆಗೆ ಸಂದೇಶದ ಮೇಲೆ ಸಂದೇಶ ಕಳಿಸುತ್ತಿದ್ದ ಘನತೆವೆತ್ತ ರಾಜ್ಯಪಾಲರ ಗಮನಕ್ಕೆ, ಸಚಿವರಿಲ್ಲದ ಏಕವ್ಯಕ್ತಿ ಸಂಪುಟದಿಂದಾಗಿ ರಾಜ್ಯದ ಜನತೆ ಅನುಭವಿಸುತ್ತಿರುವ ಬವಣೆ ಕಾಣುತ್ತಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications