'ಸಿದ್ದರಾಮಯ್ಯ ರಾಜೀನಾಮೆಗೆ ಮುಹೂರ್ತ ಫಿಕ್ಸ್'; ಸ್ಟೋಟಕ ಭವಿಷ್ಯ ಬಹಿರಂಗ
ಮಂಗಳೂರು, ಜುಲೈ 17: 2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳ ಮೂಲಕ ಭರ್ಜರಿ ಜಯಗಳಿಸಿ ಸರ್ಕರ ರಚಿಸಿದೆ. ಆದರೆ, ಕಾಂಗ್ರೆಸ್ ಪಾಳಯದಲ್ಲಿ ಆರಂಭದಿಂದಲೂ ಮುಖ್ಯಮಂತ್ರಿ ಬದಲಾವಣೆ ಕುರಿತು ಡಿ ಕೆ ಶಿವಕುಮಾರ್ ಅವರ ಬಣ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಇದೀಗ ಸರ್ಕಾರ ರಚನೆಯಾಗಿ ಎರಡು ವರ್ಷ ಪೂರೈಸಿದೆ. ಇದೀಗ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಸೂತ್ರದಂತೆ ನವೆಂಬರ್ ಗೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಎಲ್ಲಾ ಚರ್ಚೆಯ ನಡುವೆ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಸ್ಪೋಟಕ ಭವಿಷ್ಯ ಬಹಿರಂಗವಾಗಿದೆ.
ಈ ಕುರಿತು ಮಾಜಿ ಸಚಿವ ಹಾಗೂ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಇದೇ ನವೆಂಬರ್ ಒಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ದೇವರಾಜ ಅರಸು ಅವರು ರಾಜ್ಯದಲ್ಲಿ ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಇಂತಹ ದೇವರಾಜ ಅರಸು ದಾಖಲೆಯನ್ನು ಮುರಿದು ತಾನು ಕುರ್ಚಿ ಬಿಟ್ಟುಕೊಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಮುಂದೆ ಸಿದ್ಧರಾಮಯ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಜನಾರ್ದನ ರೆಡ್ಡಿ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ 50:50ರ ಅನುಪಾತದಂತೆ ಅಧಿಕಾರ ಹಂಚಿಕೆ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದೇ ಮಾತನ್ನು ಸಂಡೂರು ಉಪ ಚುನಾವಣೆ ಸಂದರ್ಭದಲ್ಲೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದರು. ಅದರ ಮುಂದಿನ ಭಾಗವಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಈಗಿನಿಂದಲೇ ಬುನಾದಿ ಹಾಕಲು ಆರಂಭಿಸಿದ್ದಾರೆ ಎಂದು ಹೇಳಿದರು.
ನನಗೆ ಬಂದ ಮಾಹಿತಿ ಪ್ರಕಾರ ದೇವರಾಜ ಅರಸು ಅವರಿಗಿಂತ ಒಂದು ದಿನ ಹೆಚ್ಚು ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅಧಿಕಾರ ಮಾಡಲಿದ್ದಾರೆ. ಆ ಬಳಿಕ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ನವೆಂಬರ್ ಒಳಗೆ ಇದು ನಡೆಯಲಿದೆ. ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಸಿದ್ಧರಾಮಯ್ಯ ಬಿಟ್ಟುಕೊಡಲಿದ್ದಾರೆ. ಒಂದು ವೇಳೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡದೇ ಇದ್ದರೇ ಡಿ.ಕೆ ಶಿವಕುಮಾರ್ ಅವರೇ ಕಸಿದುಕೊಳ್ಳತ್ತಾರೆ. ಸಿಎಂ ಕುರ್ಚಿಯಲ್ಲಿ ಬಲವಂತವಾಗಿಯೇ ಡಿ.ಕೆ ಶಿವಕುಮಾರ್ ಕುಳಿತುಕೊಳ್ಳುತ್ತಾರೆ. ಆ ವಿಚಾರದಲ್ಲಿ ನಿಮಗೆ ಯಾವುದೇ ಅನುಮಾನವೂ ಬೇಡ. ಇದೀಗ ಅಧಿಕಾರ ಪಡೆಯಲೇ ಬೇಕು ಎನ್ನುವಂತ ಆತುರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಇದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಅವರು ಹೇಳಿದ್ದಾರೆ.












Click it and Unblock the Notifications