ಚುನಾವಣೆ ಬಂದಾಗ ಮೋದಿ, ಅಮಿತ್ ಶಾ ಗೆ ಕರ್ನಾಟಕ ಎಂಬ ರಾಜ್ಯವಿದೆ ಎಂದು ನೆನಪಾಗುವುದು: ಸಿದ್ದರಾಮಯ್ಯ
ಬೆಂಗಳೂರು,ಜನವರಿ19: ಚುನಾವಣೆ ಹತ್ತಿರ ಬಂದಾಗ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಕರ್ನಾಟಕ ಎಂಬುದೊಂದು ರಾಜ್ಯವಿದೆ ಎಂದು ನೆನಪಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್‌ಶಾ ಅವರು ಕರ್ನಾಟಕಕ್ಕೆ ಪ್ರತಿ ಸಾರಿ ಬಂದಾಗಲೂ ಕನ್ನಡಿಗರಿಗೆ ಅಘಾತ ಮಾಡಿಯೆ ಬರುತ್ತಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿದ್ದ ಯುಜಿಸಿ ಕಛೇರಿಯನ್ನು ಸ್ಥಳಾಂತರ ಮಾಡಿ ಕನ್ನಡಿಗರ ಮತ್ತೊಂದು ಹಕ್ಕು ಕಸಿದಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿರಂತರವಾಗಿ ಅತಿವೃಷ್ಟಿ, ಪ್ರವಾಹವು ರಾಜ್ಯದ ರೈತರನ್ನು ಕಾಡುತ್ತಿದೆ. ಇದರಿಂದ 1 ಲಕ್ಷ ಹೆಕ್ಟೇರ್‌ಗಳಿಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ. ಅಂದರೆ 3 ವರ್ಷಗಳಲ್ಲಿ 2.5 ಲಕ್ಷ ಎಕರೆಗಳಲ್ಲಿ ಬೆಳೆದ ಬೆಳೆ ನಷ್ಟವಾಗಿದೆ. 2.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಾನಿಯಾದ ಬೆಳೆಗೆ ಮತ್ತು ಮನೆಗಳಿಗೆ ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಹಾರ ಕೊಟ್ಟಿಲ್ಲ. ಅಷ್ಟು ಭೀಕರ ಮಳೆ ಹಾನಿಯಾದಾಗಲೂ ಪ್ರಧಾನಮಂತ್ರಿ ಮೋದಿಗಾಗಲಿ, ಅಮಿತ್ ಶಾ ಅವರಿಗಾಗಲಿ ಹೋಗಲಿ ಉಳಿದ ಯಾವುದೆ ಸಚಿವರಿಗಾಗಲಿ ಕರ್ನಾಟಕ ರಾಜ್ಯವೆಂಬುದೊಂದಿದೆ ಎಂಬ ನೆನಪು ಬಂದಿತ್ತೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ರೈತರು ಬೆಳೆದ ಅಡಿಕೆ, ತೆಂಗು, ಕಬ್ಬು, ಮೆಣಸು, ಕಾಫಿ, ಭತ್ತ ಮುಂತಾದ ಬೆಳೆಗಳಿಗೆ ಬೆಲೆಗಳಿಲ್ಲ. ತೊಗರಿಗೆ ನೆಟೆ ರೋಗ ಬಂದಿದೆ. ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಬಂದು 30000ಕ್ಕೂ ಹೆಚ್ಚು ಜಾನುವಾರುಗಳು ಮರಣ ಹೊಂದಿವೆ. ಸುಮಾರು 18 ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆಯಾಗಿದೆ. ಪ್ರತಿ ದಿನ ರೈತರಿಗೆ 6.66 ಕೋಟಿಗಳಷ್ಟು ಆದಾಯ ನಷ್ಟವಾಗುತ್ತಿದೆ. ಮಲೆನಾಡಿನ ಅಡಿಕೆ, ಕಾಫಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಮೋದಿ ಸರ್ಕಾರ ಕರ್ನಾಟಕದ ಜನರಿಗೆ ಸಿಗಬೇಕಾದ ಆಕ್ಸಿಜನ್ನನ್ನು ಕಿತ್ತುಕೊಂಡರು
2020 ಮತ್ತು 2021 ರಲ್ಲಿ ರಾಜ್ಯವನ್ನು ಕಾಡಿದ ಭೀಕರ ಕೊರೋನಾಕ್ಕೆ ರಾಜ್ಯದಲ್ಲಿ 4.5 ರಿಂದ 5 ಲಕ್ಷ ಜನರು ದುರಂತದ ಸಾವಿಗೀಡಾದರು. ಇವರುಗಳಿಗೆ ಪರಿಹಾರವನ್ನೆ ಕೊಟ್ಟಿಲ್ಲ. ಮೋದಿ ಸರ್ಕಾರ ಕರ್ನಾಟಕದ ಜನರಿಗೆ ಸಿಗಬೇಕಾದ ಆಕ್ಸಿಜನ್ನನ್ನು ಕಿತ್ತುಕೊಂಡರು. ಆಕ್ಸಿಜನ್ ಸಿಗದೆ, ವೆಂಟಿಲೇಟರ್ ಸಿಗದೆ ಅಸಂಖ್ಯಾತ ಜನ ಮರಣ ಹೊಂದಿದರು. ಇದರ ಹೊಣೆಯನ್ನು ಯಾರು ಹೊರಬೇಕು?

ಕರ್ನಾಟಕದ ಪ್ರಬಲವಾದ 5 ಬ್ಯಾಂಕುಗಳನ್ನು ಮೋದಿ ಸರ್ಕಾರ ಕಿತ್ತುಕೊಂಡಿತು. ಇದರಿಂದ ಲಕ್ಷಾಂತರ ಕೋಟಿಗಳಷ್ಟು ನಮ್ಮ ಜನರ ಸಂಪತ್ತನ್ನು ಕೊಳ್ಳೆ ಹೊಡೆಯಲಾಯಿತು. ಮೈಸೂರು ಬ್ಯಾಂಕು, ಕೆನರಾಬ್ಯಾಂಕು, ಕಾರ್ಪೊರೇಷನ್‌ಬ್ಯಾಂಕು, ವಿಜಯಾಬ್ಯಾಂಕು ಹೀಗೆ ಎಲ್ಲ ಬ್ಯಾಂಕುಗಳೂ ಹೋದವು. ಈ ಬ್ಯಾಂಕುಗಳಲ್ಲಿ ಸುಮಾರು 1 ಲಕ್ಷ ಕರ್ನಾಟಕದ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಈಗ ಉತ್ತರ ಭಾರತದವರೆ ತುಂಬಿ ಹೋಗಿದ್ದಾರೆ. ಈ ಅನ್ಯಾಯಕ್ಕೆ ಮೋದಿಯವರೆ ಹೊಣೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದಿಂದ ಮೋದಿ ಸರ್ಕಾರವು 3.5 ಲಕ್ಷ ಕೋಟಿ ರೂಪಾಯಿಗಳನ್ನು ದೋಚಿಕೊಂಡು ಹೋಗುತ್ತಿದೆ. ಆದರೆ ರಾಜ್ಯಕ್ಕೆ ತೆರಿಗೆ ಹಂಚಿಕೆ ಮಾಡುತ್ತಿರುವುದು ಕೇವಲ 29 ಸಾವಿರ ಕೋಟಿ ಮಾತ್ರ. ತೆರಿಗೆ ಹಂಚಿಕೆ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳು ಎರಡೂ ಸೇರಿದರೂ ಸಹ 50 ಸಾವಿರ ಕೋಟಿಗಳಿಗೆ ತಲುಪುತ್ತಿಲ್ಲ. ರಾಜ್ಯದಿಂದ 2.5 ಲಕ್ಷ ಕೋಟಿ ಸಂಗ್ರಹವಾಗುತ್ತಿದ್ದಾಗ 72 ಸಾವಿರ ಕೋಟಿಗೂ ಹೆಚ್ಚು ಅನುದಾನ, ತೆರಿಗೆ ಹಂಚಿಕೆ ಸಿಗುತ್ತಿತ್ತು. 3.5 ಲಕ್ಷ ಕೋಟಿಗೆ ಶೇ.42 ರ ಸೂತ್ರದಂತೆ ನಮಗೆ ಮೋದಿ ಸರ್ಕಾರ ಕೊಡಬೇಕಾಗಿದ್ದುದು 1.47 ಲಕ್ಷ ಕೋಟಿ ರೂಗಳು. ನಮಗೆ ಕೊಡದೆ ವಂಚಿಸುತ್ತಿರುವುದು 1.17 ಲಕ್ಷ ಕೋಟಿ ರೂಗಳು. ಈ ಬಿಜೆಪಿಯವರು ಅದೆಷ್ಟು ಲಜ್ಜೆಗೆಟ್ಟಿದ್ದಾರೆಂದರೆ ನಮ್ಮ ಸರ್ಕಾರದ ಅವಧಿಯ ಕಾರ್ಯಕ್ರಮಗಳನ್ನು ತಮ್ಮ ಕಾರ್ಯಕ್ರಮಗಳೆಂದು ಹೇಳಿಕೊಂಡು ಬೀಗುತ್ತಿದ್ದಾರೆ. ಮೋದಿಯವರನ್ನು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಕರೆಸಿ ಎರಡು ಮುಖ್ಯ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಒಂದು, ನಾರಾಯಣಪುರ ಎಡದಂಡೆ ಕಾಲುವೆ ಉದ್ಘಾಟನೆ ಮತ್ತೊಂದು ಕಂದಾಯ ಗ್ರಾಮ ಯೋಜನೆಯಲ್ಲಿ ಹಕ್ಕುಪತ್ರಗಳ ವಿತರಣೆ.












Click it and Unblock the Notifications