ಮೋದಿ, ಅಮಿತ್ ಶಾ ಬಿಜೆಪಿಯ ಚುನಾವಣಾ ಏಜೆಂಟ್: ಸಿದ್ದರಾಮಯ್ಯ ಕಿಡಿ
ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಆಗಮಿಸುತ್ತಿರುವ ಮೋದಿ, ಅಮಿತ್ ಶಾ ವಿರುದ್ದ ಸಿದ್ದರಾಮಯ್ಯ ಕಿಡಿಕಾರಿದರು.
ಬೆಂಗಳೂರು,ಫೆಬ್ರವರಿ27: ಪ್ರಧಾನಿ ನರೇಂದ್ರಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ದೇಶದ ಕೆಲಸ ಮಾಡುವುದನ್ನು ಬಿಟ್ಟು ಕೇವಲ ಬಿಜೆಪಿಯ ಚುನಾವಣಾ ಏಜೆಂಟರಾಗಿ ದುಡಿಯುತ್ತಿದ್ದಾರೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ರಾಜ್ಯದ ಜನರಿಂದ ದೋಚಿಕೊಂಡ ಸಂಪತ್ತನ್ನು ಪ್ರವಾಹ, ಬರ, ಕೋವಿಡ್ ನಂತಹ ಮಾರಕ ಕಾಯಿಲೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ, ಜನರ ಕಲ್ಯಾಣಕ್ಕೆ ಖರ್ಚು ಮಾಡುವ ಬದಲು ಚುನಾವಣಾ ಪ್ರಚಾರಗಳಿಗೆ ಖರ್ಚು ಮಾಡುತ್ತಿದ್ದಾರೆ.

ನಾನು ಮೋದಿಯವರು ರಾಜ್ಯಕ್ಕೆ ಬಂದಾಗಲೆಲ್ಲ ಕರ್ನಾಟಕದ ಜನರಿಂದ ಲೂಟಿಯ ರೀತಿಯಲ್ಲಿ ಸಂಗ್ರಹಿಸುತ್ತಿರುವ ತೆರಿಗೆ, ಮೇಲ್ತೆರಿಗೆಗಳಲ್ಲಿ ರಾಜ್ಯಕ್ಕೆ ನ್ಯಾಯವಾದ ಪಾಲು ಕೊಡದೆ ಜನರಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸುತ್ತಲೆ ಇದೇನೆ. ಮೊನ್ನೆಯ ಬಜೆಟ್ ಭಾಷಣದಲ್ಲಿ ಮೋದಿ ಸರ್ಕಾರವು ನಮ್ಮ ರಾಜ್ಯದಿಂದ 4.75 ಲಕ್ಷ ಕೋಟಿಗಳಷ್ಟು ಸಂಪತ್ತನ್ನು ದೋಚಿಕೊಂಡು ಕೇವಲ 37 ಸಾವಿರ ಕೋಟಿ ತೆರಿಗೆ ಪಾಲು ಕೊಡುತ್ತಿದೆ, ಇದು ಅನ್ಯಾಯವೆಂದು ಪ್ರತಿಭಟಿಸಿದ್ದೆ ಹಾಗೂ ಈ ಕುರಿತು ದಾಖಲೆಗಳನ್ನು ಒದಗಿಸಿದ್ದೆ.
ಎಂದೂ ಉಸಿರೆ ಬಿಡದಿದ್ದ ಮೋದಿಯವರು ಇತ್ತೀಚೆಗೆ ನವದೆಹಲಿಯ ಕರ್ನಾಟಕ ಭವನದ ಅಮೃತ ಮಹೋತ್ಸಹ ಹಾಗೂ ಬಾರಿಸು ಕನ್ನಡ ಡಿಂಡಿಮವ ಎಂಬ ಕಾರ್ಯಕ್ರಮದಲ್ಲಿ ತಾವು ಕರ್ನಾಟಕದ ರೈಲ್ವೆಗೆ, ಹೆದ್ದಾರಿ ಯೋಜನೆಗಳಿಗೆ ಬಹಳ ಅನುದಾನಗಳನ್ನು ಕೊಟ್ಟಿದ್ದೇವೆ ಹಾಗೂ ಅನುದಾನಗಳನ್ನು ಹೆಚ್ಚಿಸಿದ್ದೇವೆ, ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕಿಂತ ಎಷ್ಟೊ ಪಾಲು ಹೆಚ್ಚು ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ.
ಮೋದಿಯವರು ಎಲ್ಲ ಕಡೆ ಹೇಳುವ ಹಾಗೆ ನಮ್ಮ ರಾಜ್ಯದ ವಿಚಾರದಲ್ಲೂ ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಬುದ್ಧಿವಂತರೆನ್ನಿಸಿಕೊಂಡ ಜನರಿದ್ದಾರೆ, ಅವರು ದಾಖಲೆಗಳನ್ನು ಆಧರಿಸಿ ಮಾತನಾಡುತ್ತಾರೆ ಎಂಬುದನ್ನೂ ಮರೆತು ಮಾತನಾಡುತ್ತಾರೆ. ಹಾಗಿದ್ದರೆ ವಾಸ್ತವವೇನು? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರವೆ ಅಧಿಕೃತವಾಗಿ ಪ್ರಕಟಿಸಿರುವ ದಾಖಲೆಗಳಂತೆ, 2005 ರಿಂದ 2014ರ ಮಾರ್ಚ್‍ವರೆಗೆ 9 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕರ್ನಾಟಕದಲ್ಲಿ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ಉದ್ದ 2334 ಕಿಮೀಗಳು. ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ 2014 ರಿಂದ 2022 ರವರೆಗೆ ನಿರ್ಮಿಸಿದ ಒಟ್ಟು ರಾಷ್ಟ್ರೀಯ ಹೆದ್ದಾರಿ ಉದ್ದ ಕೇವಲ 1479 ಕಿಮೀ ಮಾತ್ರ.
ರೈಲ್ವೆ ವಿಚಾರಕ್ಕೆ ಬಂದರೆ ಮನಮೋಹನ್‍ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ತನ್ನ 9 ವರ್ಷಗಳಲ್ಲಿ 301 ಕಿಮೀ ರೈಲ್ವೆಯನ್ನು ನಿರ್ಮಿಸಿತ್ತು. ಮೋದಿಯವರ ಸರ್ಕಾರ 291 ಕಿಮೀಗಳಷ್ಟು ಮಾತ್ರ ನಿರ್ಮಿಸಿದೆ. ನಮ್ಮ ರಾಜ್ಯದಲ್ಲಿ ಸುಮಾರು 18 ರೈಲ್ವೆ ಯೋಜನೆಗಳು ಚಾಲ್ತಿಯಲ್ಲಿವೆ. ಇವುಗಳಿಗೆ 14-15 ಸಾವಿರ ಕೋಟಿ ಹಣ ಬೇಕು. ಈ ಯೋಜನೆಗಳಲ್ಲಿ ತುಮಕೂರು ರಾಯದುರ್ಗ, ತುಮಕೂರು- ದಾವಣಗೆರೆ ಮಾರ್ಗಗಳೂ ಸೇರಿವೆ.
ಕೇಂದ್ರ ಸರ್ಕಾರ ನಮ್ಮಿಂದ ದೋಚುವ ತೆರಿಗೆ, ಮೇಲ್ತೆರಿಗೆಗಳಿಗೂ ಮತ್ತು ನಮಗೆ ಹಂಚಿಕೆ ಮಾಡುತ್ತಿರುವ ಅನುದಾನಗಳಿಗೂ ಸಂಬಂಧವೆ ಇಲ್ಲ. 2013-14 ರಲ್ಲಿ ಕೇಂದ್ರದ ಬಜೆಟ್ ಗಾತ್ರ 16.65 ಲಕ್ಷ ಕೋಟಿ ರೂ ಇತ್ತು. ಆಗ ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕøತ ಯೋಜನೆಗಳು ಸೇರಿ ಒಟ್ಟು 30310 ಕೋಟಿಗಳಷ್ಟು ಅನುದಾನಗಳು ಬಂದಿದ್ದವು. 2023-24 ರಲ್ಲಿ ಕೇಂದ್ರದ ಬಜೆಟ್ ಗಾತ್ರ 45.01 ಲಕ್ಷ ಕೋಟಿ ರೂಗಳಿಗೆ ಏರಿಕೆಯಾಗಿದೆ. ಆದರೆ ರಾಜ್ಯಕ್ಕೆ ಬರಬಹುದೆಂದು ಅಂದಾಜು ಮಾಡಿರುವುದು 49 ಸಾವಿರ ಕೋಟಿ ಮಾತ್ರ. ಬಜೆಟ್ ಗಾತ್ರ ಸುಮಾರು 3 ಪಟ್ಟು ಹೆಚ್ಚಾಗಿದೆ, ಅದರ ಲೆಕ್ಕದಲ್ಲಿ ನೋಡಿದರೂ ನಮ್ಮ ರಾಜ್ಯದ 85-90 ಸಾವಿರ ಕೋಟಿ ಇರಬೇಕಿತ್ತಲ್ಲವೆ ಮೋದೀಜಿಯವರೆ?
ಸತ್ಯ ಇಷ್ಟು ಸೂರ್ಯ ಸ್ಪಷ್ಟವಾಗಿರುವಾಗ ಯಾಕೆ ಸುಳ್ಳು ಹೇಳಿ ಕರ್ನಾಟಕದ ಮರ್ಯಾದಸ್ಥ ಜನರ ಕಿವಿಯ ಮೇಲೆ ಹೂಗಳನ್ನಿಡಲು ಪ್ರಯತ್ನಿಸುತ್ತೀರಿ? ಈ ಮಟ್ಟದ ಸುಳ್ಳುಗಳು ನಿಮ್ಮ ಪದವಿಗೆ ಯೋಗ್ಯವೆ? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications