ಪಾಕಿಸ್ತಾನದ ವಿರುದ್ಧ ಯುದ್ಧ ಬೇಡವೆಂದ ಸಿದ್ದರಾಮಯ್ಯ: ಕ್ಷಮೆ ಕೇಳಿ ಎಂದು ವಿಜಯೇಂದ್ರ ವಾಗ್ದಾಳಿ
ಬೆಂಗಳೂರು, ಏಪ್ರಿಲ್ 28: ಸಿದ್ದರಾಮಯ್ಯನವರು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬಾರದು ಎಂಬ ದೃಷ್ಟಿಕೋನ ಖಂಡಿತ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದು ಅಕ್ಷಮ್ಯ ಅಪರಾಧ. ಬಿ ಎಸ್ ಯಡಿಯೂರಪ್ಪ ಅವರ ಮಾತಿನಂತೆ ಸಿದ್ದರಾಮಯ್ಯನವರು ಈ ದೇಶದ ಜನರ ಕ್ಷಮೆ ಕೂಡ ಕೇಳಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯನವರಿಂದ ಈ ರೀತಿಯ ಹೇಳಿಕೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಸಿದ್ದರಾಮಯ್ಯನವರಿಗೆ ಅಲ್ಪಸಂಖ್ಯಾತರ ಬಗ್ಗೆ ಎಷ್ಟು ಪ್ರೀತಿ ಇದೆ ಎಂದು ರಾಜ್ಯದ ಜನತೆಗೆ ಗೊತ್ತಿದೆ. ಅಲ್ಪಸಂಖ್ಯಾತರ ವಿಚಾರ ಬಂದಾಗ ಯಾವ ಮಟ್ಟಕ್ಕೂ ಇಳೀತಾರೆ ಎಂಬ ಸತ್ಯ ಜನರಿಗೆ ಗೊತ್ತಿದೆ. ಆದರೆ, ದೇಶದ ವಿಚಾರ ಬಂದಾಗ, ಕಾಶ್ಮೀರದ ಭಯೋತ್ಪಾದಕರ ದಾಳಿ, ಹತ್ಯೆಗಳ ಆ ಘಟನೆಯನ್ನು ಪ್ರತಿಯೊಬ್ಬ ಸ್ವಾಭಿಮಾನಿ ಕೂಡ ಖಂಡಿಸಿದ್ದಾರೆ. ಭಾರತ ಯಾವತ್ತೂ ಯುದ್ಧ ಸಾರಿದ ಇತಿಹಾಸ ಇಲ್ಲ; ಆದರೆ, ಇವತ್ತು ಭಾರತೀಯರ ರಕ್ಷಣೆ ಮಾಡಬೇಕಾದ ಸಂದರ್ಭದಲ್ಲಿ ಏನು ತೀರ್ಮಾನ ಮಾಡಬೇಕೋ ಅದನ್ನು ಪ್ರಧಾನಿಯವರು ಎಲ್ಲ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸುತ್ತಾರೆ ಎಂದರು.

ಜಾತಿ ಗಣತಿಗೆ ಸಂಬಂಧಿಸಿ ಸಿದ್ದರಾಮಯ್ಯನವರು ಹಲವಾರು ಸುತ್ತಿನ ಸಭೆಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿಗಳು ಮೊನ್ನೆ ಕ್ಯಾಬಿನೆಟ್‍ನ ವಿಶೇóಷ ಸಭೆ ಕರೆದಿದ್ದರು. ಕ್ಯಾಬಿನೆಟ್ ತೀರ್ಮಾನ ಕುರಿತು ನಿರ್ಣಯವೂ ಸಿದ್ಧವಿತ್ತು. ಆದರೂ ಕೂಡ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ಸಿನ ಹಿರಿಯ ನೇತಾರ ವೀರಪ್ಪ ಮೊಯಿಲಿಯವರೇ ಜಾತಿ ಜನಗಣತಿ 10 ವರ್ಷದಷ್ಟು ಹಳೆಯದು. ವೈಜ್ಞಾನಿಕವಾಗಿಲ್ಲ ಎಂದು ಹೇಳಿದ ಕುರಿತು ಗಮನಕ್ಕೆ ತಂದರು. ಈಡಿಗ, ಮಡಿವಾಳ ಸೇರಿ ಅನೇಕ ಹಿಂದುಳಿದ ಸಮುದಾಯಗಳು ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಅಂಕಿಅಂಶಗಳ ಕುರಿತು ಆಕ್ಷೇಪಿಸಿದ್ದಾರೆ ಎಂದು ತಿಳಿಸಿದರು. ಸಿದ್ದರಾಮಯ್ಯನವರು ಯಾಕೆ ಇಷ್ಟು ಆತುರ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಪ್ರಶ್ನಿಸಿದರು.
"ಪಾಕಿಸ್ತಾನ ರತ್ನ" ಸಿಎಂ ಸಿದ್ದರಾಮಯ್ಯ: ಆರ್ ಅಶೋಕ್
"ಪಾಕಿಸ್ತಾನ ರತ್ನ" ಸಿಎಂ ಸಿದ್ದರಾಮಯ್ಯನವರೇ, ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ತಮಗೆ ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರೆಂಟಿ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಪಾಕಿಸ್ತಾನ ಸರ್ಕಾರ ತಮಗೆ ಅಲ್ಲಿನ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಹೇಳಿದ್ದಾರೆ.
ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವಾಗ, ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗ ಈ ರೀತಿ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತದ್ದೀರಲ್ಲ, ನಿಮ್ಮಂತಹವರು ಸಾರ್ವಜನಿಕ ಬದುಕಿನಲ್ಲಿ ಇರುವುದೇ ನಮ್ಮ ದೇಶದ ಅತ್ಯಂತ ದೊಡ್ಡ ದುರಂತ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications