ಕರ್ನಾಟಕ ವಿಧಾನಸಭಾ ಚುನಾವಣೆ:ಸಿದ್ದರಾಮಯ್ಯಗೆ ಕ್ಷೇತ್ರ ಕಂಟಕ, ಯತೀಂದ್ರಗೆ ಧರ್ಮ ಸಂಕಟ
ಸಿದ್ದರಾಮಯ್ಯ ಕಳೆದ ಬಾರಿ ಗೆಲುವು ತಂದುಕೊಟ್ಟಿದ್ದ ಬಾದಾಮಿ ಕ್ಷೇತ್ರವನ್ನು ಬಿಟ್ಟು ಕೋಲಾರದತ್ತ ಮುಖ ಮಾಡಿದ್ದರು. ಆದರೆ ಈಗ ಅಲ್ಲಿ ಅವರ ಗೆಲುವಿಗೆ ಪೂರಕ ವಾತಾವರಣವಿಲ್ಲ ಎಂಬ ಮಾಹಿತಿಯನ್ನು ಪಕ್ಷದ ಮೂಲಗಳಿಂದಲೇ ಬಂದಿರುವುದು ರಾಜಕೀಯದಲ್ಲಿ ತಳಮಳ ಸೃಷ್ಟಿಸಿದೆ.
ಬೆಂಗಳೂರು, ಮಾರ್ಚ್ 20: ರಾಜ್ಯ ರಾಜಕೀಯದಲ್ಲಿ ಮತ್ತೆ ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಈ ಚರ್ಚೆ ಕಳೆದೊಂದು ವರ್ಷದಿಂದ ನಿರಂತರವಾಗಿ ನಡೆಯುತ್ತಲೇ ಇದ್ದು, ಕೊನೆಗಳಿಗೆಯಲ್ಲಿ ಕಳೆದ ಬಾರಿ ಗೆಲುವು ತಂದುಕೊಟ್ಟಿದ್ದ ಬಾದಾಮಿ ಕ್ಷೇತ್ರವನ್ನು ಬಿಟ್ಟು ಕೋಲಾರದತ್ತ ಮುಖ ಮಾಡಿದ್ದರು.
ಆದರೆ ಈಗ ಅಲ್ಲಿ ಅವರ ಗೆಲುವಿಗೆ ಪೂರಕ ವಾತಾವರಣವಿಲ್ಲ ಎಂಬ ಮಾಹಿತಿಯನ್ನು ಪಕ್ಷದ ಮೂಲಗಳಿಂದಲೇ ಬಂದಿರುವುದು ರಾಜಕೀಯದಲ್ಲಿ ತಳಮಳ ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಅವರು ಸುಲಭವಾಗಿ ಗೆಲುವು ತಂದುಕೊಡಬಹುದಾದ ಮೈಸೂರಿನ ವರುಣಾ ಕ್ಷೇತ್ರದತ್ತ ಮುಖ ಮಾಡುತ್ತಾರೆ ಎಂಬ ಸುದ್ದಿ ಪ್ರಚಲಿತದಲ್ಲಿದೆ.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎಂಬುದು ನಿಜವೇ ಆಗಿದ್ದರೂ ತಮಗಾಗಿ ತಮ್ಮ ಮಗನ ರಾಜಕೀಯ ಭವಿಷ್ಯಕ್ಕೆ ತೊಂದರೆ ಮಾಡಲು ಅವರು ತಯಾರಿದ್ದಾರಾ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರ ಹೊರತು ಪಡಿಸಿ ಬೇರೆ ಕ್ಷೇತ್ರಗಳಲ್ಲಿ ಗೆಲುವು ಪಡೆಯುವ ಸಾಮರ್ಥ್ಯ ಹೊಂದಿಲ್ಲ.

ಪ್ರಭಾವಿ ನಾಯಕ ಸಿದ್ದರಾಮಯ್ಯಗೆ ಸೋಲಿನ ಭಯ
ಸಿದ್ದರಾಮಯ್ಯ ಅವರು ರಾಜ್ಯ ನಾಯಕರಾಗಿದ್ದು ಅವರಿಗೆ ಗೆಲುವು ಕಷ್ಟವಾಗಿರುವಾಗ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಪರಿಸ್ಥಿತಿ ಹೊರತಾಗಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರು ವರುಣಾದಿಂದ ಸ್ಪರ್ಧಿಸಿದರೆ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡುತ್ತಾರೆ ಎನ್ನುವ ಮಾಹಿತಿಯೂ ಇದೆ.
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ, ಕುರುಬ ಸಮುದಾಯದ ಪ್ರಭಾವಿ ನಾಯಕ ಅಲ್ಲದೆ ಕಾಂಗ್ರೆಸ್‌ನ ರಾಜ್ಯಮಟ್ಟದ ನಾಯಕರಾಗಿರುವ ಸಿದ್ದರಾಮಯ್ಯರವರು ಎಲ್ಲಿ ಸ್ಪರ್ಧಿಸಿದರೂ ಗೆಲ್ಲುವ ಸಾಮರ್ಥ್ಯ ಇರುವವರು. ಇಂತಹ ನಾಯಕರಿಗೆ ಸೋಲಿನ ಭೀತಿ ಕಾಡುತ್ತಿದೆ ಎನ್ನುವುದಾದರೆ ಅವರ ಹಿಂದೆ ಭಾರೀ ದೊಡ್ಡ ವಿರೋಧಿ ಪಡೆಗಳಿವೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

ಕೋಲಾರದಲ್ಲಿ ಸಿದ್ದರಾಮಯ್ಯಗೆ ಸೋಲಿನ ಭಯ
ಸಾಮಾನ್ಯವಾಗಿ ರಾಜಕೀಯ ನಾಯಕರಿಗೆ ವಿರೋಧ ಪಕ್ಷಗಳಲ್ಲಿ ರಾಜಕೀಯ ವಿರೋಧಿಗಳಿರುತ್ತಾರೆ. ಆದರೆ ಸಿದ್ದರಾಮಯ್ಯನವರಿಗೆ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಮಾತ್ರ ರಾಜಕೀಯ ವಿರೋಧಿಗಳಿಲ್ಲ. ಸ್ವಪಕ್ಷದಲ್ಲಿಯೂ ಇದ್ದಾರೆ. ಅವರ ಗೆಲುವನ್ನು ಬಯಸದ ಶಕ್ತಿ ಅವರ ವಿರುದ್ಧವೇ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಅವರು ಭಯಪಡುವಂತಾಗಿದೆ.
ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸಿದ್ದೇ ಆದರೆ ಅವರನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪಣತೊಟ್ಟು ನಿಂತಿದ್ದವು. ಸದ್ಯ ಹೈಕಮಾಂಡ್ ಸಲಹೆಯನ್ನು ಸ್ವೀಕರಿಸಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಹೊರಬಂದು ವರುಣಾದಲ್ಲಿ ಸ್ಪರ್ಧಿಸಿದರೆ ಗೆಲುವು ಪಡೆಯಬಹುದು. ಆದರೆ ವಿರೋಧ ಪಕ್ಷಗಳ ಟೀಕೆಗಳನ್ನು ಎದುರಿಸಬೇಕಾಗುತ್ತದೆ.
ಸೋಲಿಗೆ ಹೆದರಿ ಕ್ಷೇತ್ರ ಬದಲಾಯಿಸಿದ ಅವಕಾಶವಾದಿ ನಾಯಕ ಎಂಬ ಅಪಮಾನಗಳನ್ನು ಎದುರಿಸಬೇಕಾಗುತ್ತದೆ. ಸಾರ್ವಜನಿಕವಾಗಿ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆಂದು ಘೋಷಿಸಿ ಅಲ್ಲಿಂದ ಪಲಾಯನ ಮಾಡಿದರೆ ಮುಂದೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುವ ವೇಳೆ ಎದುರಾಳಿಗಳ ಟೀಕೆಗೆ ಉತ್ತರ ನೀಡಬೇಕಾಗುತ್ತದೆ.

ಬೇರೆ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಲ್ಲ ಎಂದ ಯತೀಂದ್ರ
ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ಸಿದ್ದರಾಮಯ್ಯ ಅವರನ್ನು ಅಣಕಿಸುವ ಎಲ್ಲ ಸಾಧ್ಯತೆ ಇದೆ. ಇದೇ ವಿಚಾರ ಮುಂದಿನ ಚುನಾವಣೆಯಲ್ಲಿ ಪ್ರಮುಖ ವಿಷಯವಾದರೂ ಅಚ್ಚರಿಪಡಬೇಕಾಗಿಲ್ಲ. ಸಿದ್ದರಾಮಯ್ಯ ಅವರು ಈಗ ಎಲ್ಲವನ್ನೂ ಹೈಕಮಾಂಡ್ ಮೇಲೆ ಹಾಕಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾಳೆ ಎದುರಾಳಿಗಳು ಟೀಕೆ ಮಾಡುವಾಗ ಅದಕ್ಕೆ ಉತ್ತರವನ್ನು ಸಿದ್ದರಾಮಯ್ಯ ಅವರು ಕೊಡಲೇ ಬೇಕಾಗುತ್ತದೆ.
ಇಲ್ಲಿ ತನಕ ಸಿದ್ದರಾಮಯ್ಯ ಅವರು ತಾವು ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಎಲ್ಲೂ ಹೇಳಿಲ್ಲ. ಎಲ್ಲವನ್ನೂ ಹೈಕಮಾಂಡ್ ಮೇಲೆ ಹಾಕಿದ್ದಾರೆ. ಹೈಕಮಾಂಡ್ ಕೋಲಾರ ನಿಮಗೆ ಸುರಕ್ಷಿತ ಕ್ಷೇತ್ರವಲ್ಲ ಎಂದು ಹೇಳಿದೆಯಾದರೂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಹೇಳುತ್ತಿರುವುದೇ ಬೇರೆ. ಅವರ ಪ್ರಕಾರ ಕೋಲಾರ ಕ್ಷೇತ್ರದಲ್ಲಿ ಎರಡು ಬಾರಿ ಆಂತರಿಕ ಸರ್ವೇ ಮಾಡಿದ್ದು, ಸಿದ್ದರಾಮಯ್ಯ ಪರವಾಗಿಯೇ ಫಲಿತಾಂಶ ಬಂದಿದೆಯಂತೆ.
ಜೊತೆಗೆ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ ಎಂಬ ವಿಶ್ವಾಸವನ್ನು ಯತೀಂದ್ರ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ವರುಣ ಕ್ಷೇತ್ರಕ್ಕೆ ಬಂದರೆ ನಾನು ಬಿಟ್ಟು ಕೊಡುವೆ. ಆದರೆ ನಾನು ಬೇರೆ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ.

ವರುಣಾದಲ್ಲಿ ಅಭ್ಯರ್ಥಿ ಕೈಹಿಡಿಯಲಿರುವ ಹಿಂದುಳಿದ ವರ್ಗ
ಇನ್ನು 2008ರಲ್ಲಿ ರಚನೆಯಾದ ವರುಣಾ ಕ್ಷೇತ್ರದಲ್ಲಿ ಇದುವರೆಗೆ ಮೂರು ಚುನಾವಣೆಗಳು ನಡೆದಿವೆ. ಎರಡು ಬಾರಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರೆ, ಒಂದು ಬಾರಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ.
ವರುಣಾ ಕ್ಷೇತ್ರಕ್ಕೆ ಮೈಸೂರು ತಾಲೂಕಿನ ಮೆಲ್ಲಹಳ್ಳಿ, ವರುಣ ಹೋಬಳಿ, ನಂಜನಗೂಡು ತಾಲೂಕಿನ ತಾಂಡವಪುರ, ತಗಡೂರು, ಹದಿನಾರು, ಚಿಕ್ಕವಲಂದೆ(ಭಾಗಶಃ) ಜಿಪಂ ಕ್ಷೇತ್ರಗಳು ಒಳಗೊಳ್ಳುತ್ತವೆ ಮತ್ತು ತಿ.ನರಸೀಪುರದ ಗರ್ಗೇಶ್ವರಿ ಜಿಪಂ ಕ್ಷೇತ್ರ ವ್ಯಾಪ್ತಿಗೆ ಒಳಗೊಂಡಿದೆ.
ವೀರಶೈವ ಲಿಂಗಾಯತರು, ದಲಿತ ಸಮುದಾಯದ ಮತ ಹೆಚ್ಚಿನ ಸಂಖ್ಯೆಯಲ್ಲಿದೆ. ನಂತರ ಸ್ಥಾನದಲ್ಲಿ ಕುರುಬ, ನಾಯಕ, ಉಪ್ಪಾರ, ಒಕ್ಕಲಿಗ, ಮುಸ್ಲಿಂ ಸಮುದಾಯದ ಮತದಾರರಿದ್ದಾರೆ. ಹಿಂದುಳಿದ ಮತಗಳು ಕೈಹಿಡಿಯುವ ಅಭ್ಯರ್ಥಿ ಗೆಲ್ಲುವುದು ಇಲ್ಲಿನ ವಿಶೇಷ. ಮುಂದೇನು ಕಾದು ನೋಡಬೇಕಿದೆ.












Click it and Unblock the Notifications