ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಕೊಕ್ಕೆ! ಛತ್ತೀಸ್‌ಗಢದಲ್ಲಿ 1.50 ಲಕ್ಷ ಮೆ. ಟನ್ ಅಕ್ಕಿ ಲಭ್ಯ: ಸಿದ್ದರಾಮಯ್ಯ
ಬೆಂಗಳೂರು, ಜೂನ್ 17: ಕಾಂಗ್ರೆಸ್ ಸರ್ಕಾರ ಗೆಲುವಿಗೆ ಪ್ರಮುಖ ಕಾರಣವಾಗಿದ್ದ ಗ್ಯಾರಂಟಿ ಘೋಷಣೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಕೊಕ್ಕೆ ಹಾಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದು, ಉಚಿತ ಅಕ್ಕಿ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದರು.
ಇನ್ನೂ ಕೇಂದ್ರ ಸರ್ಕಾರ ಬಡವರಿಗೆ ಕೊಡುವ ಅನ್ನಭಾಗ್ಯದಲ್ಲೂ ರಾಜಕೀಯ ಮಾಡುತ್ತಿದೆ. ಎಷ್ಟೇ ಕಷ್ಟ ಆದರೂ ಅಕ್ಕಿಯನ್ನ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದು, ಇದೀಗ ಅನ್ನಭಾಗ್ಯ ಯೋಜನೆಗೆ ಛತ್ತೀಸ್ ಗಡ ರಾಜ್ಯದಲ್ಲಿ 1.50 ಲಕ್ಷ ಮೆ. ಟನ್ ಅಕ್ಕಿ ಲಭ್ಯವಿದೆ. ಆದರೆ ಸಾರಿಗೆ ವೆಚ್ಚ ಹೆಚ್ಚಾಗಲಿದೆ.
ಇಂದು (ಶನಿವಾರ) ಸಂಜೆ ಈ ಬಗ್ಗೆ ಮತ್ತೊಂದು ಸಭೆ ಕರೆದಿದ್ದು, ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೆಲಂಗಾಣದ ಮುಖ್ಯಮಂತ್ರಿಗಳೊಂದಿಗೆ ಖುದ್ದಾಗಿ ಮಾತನಾಡಿದ್ದು, ಅಲ್ಲಿ ಅಕ್ಕಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದರು. ಆಂಧ್ರಪ್ರದೇಶದವರೊಂದಿಗೆ ನಮ್ಮ ಮುಖ್ಯ ಕಾರ್ಯದರ್ಶಿಗಳು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿಯೇ ಅಕ್ಕಿ ಲಭ್ಯವಿದೆ. ಕಮಿಷನ್ ಆಮಿಷಕ್ಕೆ ಹೊರರಾಜ್ಯಗಳಿಂದ ಅಕ್ಕಿ ಖರೀದಿಸಲಾಗುತ್ತಿದೆ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿಯೇ ದೊರೆಯುವುದಾದರೆ ಕೊಡಿಸಲಿ. ವಿಜಯೇಂದ್ರ ಮಿಲ್ ನಲ್ಲಿ ಇದೆಯಾ ಅಷ್ಟು ಅಕ್ಕಿ? ಸುಮ್ಮನೆ ಮಾತಾಡ್ತಾರೆ ಅಂತ ಸಿದ್ದರಾಮಯ್ಯ ಗರಂ ಆಗಿದ್ದಾರೆ.
"ತೆಲಂಗಾಣ ರಾಜ್ಯವನ್ನು ಅಕ್ಕಿ ಖರೀದಿ ವಿಚಾರದಲ್ಲಿ ಸಂಪರ್ಕಿಸಲಾಯಿತು, ಆದರೆ ಅಲ್ಲಿನ ಅಧಿಕಾರಿಗಳು ಅಕ್ಕಿ ದಾಸ್ತಾನು ಇಲ್ಲ ಎನ್ನುವ ಮಾತನ್ನು ಹೇಳಿದರು. ಹಾಗಾಗಿ, ಕಾಂಗ್ರೆಸ್ ಅಧಿಕಾರದಲ್ಲಿರುವ ಛತ್ತೀಸ ಗಢ ರಾಜ್ಯವನ್ನು ಸಂಪರ್ಕಿಸಲಾಯಿತು. ಅಲ್ಲಿ ಅಕ್ಕಿಯ ದಾಸ್ತಾನು ಇದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.












Click it and Unblock the Notifications